ರಾಹುಲ್‌ ಗಾಂಧಿ ಒಟ್ಟು ಆಸ್ತಿ 20 ಕೋಟಿ, ಕಾರು-ಫ್ಲಾಟ್‌ ಇಲ್ಲ

Most read

ಹೊಸದಿಲ್ಲಿ: ವಯನಾಡ್ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿರುವ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಅವರ ಬಳಿ ಯಾವುದೇ ವಾಹನ ಇಲ್ಲ, ಮನೆಯೂ ಇಲ್ಲ. ಅವರ ಒಟ್ಟು ಆಸ್ತಿ 20 ಕೋಟಿ ರುಪಾಯಿ.

ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಆಸ್ತಿ ಘೋಷಣೆಯ ಪ್ರಮಾಣ ಪತ್ರದಲ್ಲಿ ರಾಹುಲ್‌ ಗಾಂಧಿ ತಮಗೆ 9.24 ಕೋಟಿ ರೂ ಮೌಲ್ಯದ ಚರಾಸ್ಥಿ ಮತ್ತು 11.15 ಕೋಟಿ ರೂ ಮೌಲ್ಯದ ಸ್ಥಿರಾಸ್ತಿ ಇರುವುದಾಗಿ ಘೋಷಿಸಿದ್ದಾರೆ.

ಚರಾಸ್ತಿಗಳ ಪೈಕಿ, ರೂ. 55,000 ನಗದು, ರೂ. 26.25 ಲಕ್ಷ ಬ್ಯಾಂಕ್‌ ಠೇವಣಿ, ರೂ. 4.33 ಕೋಟಿ ಬಾಂಡ್‌ ಮತ್ತು ಶೇರ್‌ ಗಳು, ರೂ. 3.81 ಮ್ಯೂಚುಯಲ್‌ ಫಂಡ್, ರೂ. 15.21 ಲಕ್ಷ ಚಿನ್ನದ ಬಾಂಡ್‌ ಮತ್ತು, ರೂ. 4.20 ಲಕ್ಷ ಮೌಲ್ಯದ ಒಡವೆಗಳು ಇವೆ ಎಂದು ಪ್ರಮಾಣಪತ್ರದಲ್ಲಿ ತಿಳಿಸಲಾಗಿದೆ.

ಸ್ಥಿರಾಸ್ತಿಗಳ ಪೈಕಿ ರಾಹುಲ್‌ ಗಾಂಧಿ ದೆಹಲಿಯ ಮೆಹ್ರೋಲಿ ಬಳಿ ತಮ್ಮ ಸೋದರಿ ಪ್ರಿಯಾಂಕ ಗಾಂಧಿಯವರೊಂದಿಗೆ ಕೃಷಿ ಜಮೀನನ್ನು ಹೊಂದಿದ್ದಾರೆ. ಈ ಕೃಷಿ ಜಮೀನು ಅವರ ಪಿತ್ರಾರ್ಜಿತ ಸ್ವತ್ತಾಗಿದೆ. ಗುರಗಾವ್‌ ನಲ್ಲಿ ತಮ್ಮದೇ ಆದ ಕಚೇರಿಯೊಂದನ್ನು ಹೊಂದಿದ್ದು, ಅದರ ಮೌಲ್ಯ ರೂ. 9 ಕೋಟಿ.

ಇನ್ನು ರಾಹುಲ್‌ ಗಾಂಧಿ ತಮ್ಮ ವಿರುದ್ಧ ಇರುವ ಪ್ರಕರಣಗಳ ಕುರಿತು ವಿವರ ನೀಡಿದ್ದು, ಅತ್ಯಾಚಾರ ಸಂತ್ರಸ್ಥೆಯ ಕುಟುಂಬದವರ ಗುರುತನ್ನು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಿದ್ದಕ್ಕಾಗಿ ಪೋಕ್ಸೋ ಅಡಿಯಲ್ಲಿ ಅವರ ಮೇಲೊಂದು ಪ್ರಕರಣ ದಾಖಲಾಗಿದ್ದು, ವಿಚಾರಣೆ ನಡೆಯುತ್ತಿದೆ. ದಿಲ್ಲಿ ಹೈಕೋರ್ಟ್‌ ನಿರ್ದೇಶನದ ಮೇರೆಗೆ ಈ ಪ್ರಕರಣದ ಎಫ್‌ ಐಆರ್‌ ಅನ್ನು ಮುಚ್ಚಿಟ್ಟ ಲಕೋಟೆಯಲ್ಲಿ ಸಲ್ಲಿಸಲಾಗಿದ್ದು, ಇದರ ಪ್ರತಿಯನ್ನು ತನಗೆ ನೀಡಲಾಗಿಲ್ಲ. ಆದರೂ ಈ ಪ್ರಕರಣದ ಕುರಿತು ಮಾಹಿತಿ ಸಲ್ಲಿಸುತ್ತಿರುವುದಾಗಿ ಹೇಳಿದ್ದಾರೆ.

ರಾಹುಲ್‌ ಗಾಂಧಿಯವರ ಮೇಲೆ ಇರುವ ಇತರ ಪ್ರಕರಣಗಳು ಬಿಜೆಪಿ ನಾಯಕರು ಹಲವೆಡೆ ದಾಖಲಿಸಿರುವ ಮಾನನಷ್ಟ ಮೊಕದ್ದಮೆಗಳು. ಅದೇ ರೀತಿ ಅಸೋಸಿಯೇಟೆಡ್‌ ಜರ್ನಲ್‌ ಲಿಮಿಟೆಡ್‌ ಸಂಸ್ಥೆಗೆ ಸಂಬಂಧಿಸಿದ ಕ್ರಿಮಿನಲ್‌ ಪಿತೂರಿಯ ಪ್ರಕರಣ ಇರುವುದನ್ನೂ ರಾಹುಲ್‌ ಗಾಂಧಿ ತಮ್ಮ ಪ್ರಮಾಣಪತ್ರದಲ್ಲಿ ನಮೂದಿಸಿದ್ದಾರೆ.


ರಾಹುಲ್‌ ಗಾಂಧಿ 2019ರ ಚುನಾವಣೆಯಲ್ಲಿ ವಯನಾಡ್ ಲೋಕಸಭಾ ಕ್ಷೇತ್ರದಿಂದ ಭಾರೀ ಅಂತರದಿಂದ ಜಯಗಳಿಸಿದ್ದರು. ಈ ಬಾರಿ ಅವರು ಇದೇ ಕ್ಷೇತ್ರದಿಂದ ಸಿಪಿಐ ಮುಖಂಡ ಅಣ್ಣೀ ರಾಜ ಮತ್ತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಸುರೇಂದ್ರನ್‌ ಎದುರು ಅವರು ಸ್ಪರ್ಧಿಸುತ್ತಿದ್ದಾರೆ.

More articles

Latest article