ನವದೆಹಲಿ: ವಿಶ್ವವಿದ್ಯಾಲಯಗಳಲ್ಲಿ ಇನ್ನೂ ಜೀವಂತವಾಗಿರುವ ತಾರತಮ್ಯವನ್ನು ನಿಯಂತ್ರಣಕ್ಕೆ ತರಲು ಕಾನೂನಿನ ಅಗತ್ಯವಿದೆ ಎಂದು ಕಾಂಗ್ರೆಸ್ ವರಿಷ್ಠ, ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅಭಿಪ್ರಾಯಪಟ್ಟಿದ್ದಾರೆ. ರೋಹಿತ್ ವೇಮುಲ ಅವರ 10ನೇ ಸ್ಮರಣ ದಿನವಾದ ಇಂದು ಅವರ ನೆನಪಿನಲ್ಲಿ ಎಕ್ಸ್ ನಲ್ಲಿ ಈ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಈಗಲೂ ದಲಿತ ಯುವಕರ ಸ್ಥಿತಿ ಇನ್ನೂ ಬದಲಾಗಿಲ್ಲ. ಉನ್ನತ ಶಿಕ್ಷಣದಲ್ಲಿ ದಲಿತ ವಿದ್ಯಾರ್ಥಿಗಳ ಸ್ಥಿತಿಗತಿ ಶೋಚನೀಯವಾಗಿದೆ. ದಲಿತ ವಿದ್ಯಾರ್ಥಿಗಳಲ್ಲಿ ಸ್ವಾಭಿಮಾನದ ಕಿಚ್ಚು ತುಂಬಲು ರೋಹಿತ್ ವೇಮುಲ ಕಾಯ್ದೆ ತರಲು ಕಾಂಗ್ರೆಸ್ ಬದ್ಧವಾಗಿದೆ. ಕರ್ನಾಟಕ ಮತ್ತು ತೆಲಂಗಾಣದಲ್ಲಿ ಕಾಂಗ್ರೆಸ್ ಸರ್ಕಾರಗಳು ಈ ಕಾಯ್ದೆಯನ್ನು ಶೀಘ್ರವಾಗಿ ಜಾರಿಗೆ ತರುವ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿವೆ ಎಂದೂ ತಿಳಿಸಿದ್ದಾರೆ.
2016ರ ಜನವರಿ 17ರಂದು ಹೈದರಾಬಾದ್ ವಿಶ್ವವಿದ್ಯಾಲಯದಲ್ಲಿ 26 ವರ್ಷದ ದಲಿತ ವಿದ್ಯಾರ್ಥಿ ರೋಹಿತ್ ವೇಮುಲ, ಕಿರುಕುಳ ಆರೋಪದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ರೋಹಿತ್ ನಮ್ಮನ್ನು ಅಗಲಿ ಹತ್ತು ವರ್ಷಗಳು ಸಂದಿವೆ. ಆದರೆ ಅವರು ಬಿಟ್ಟುಹೋದ ಪ್ರಶ್ನೆಗಳಿಗೆ ಇದುವರೆಗೂ ಉತ್ತರ ಸಿಕ್ಕಿಲ್ಲ ಎಂದು ರಾಹುಲ್ ಗಾಂಧಿ ಕಳವಳ ವ್ಯಕ್ತಪಡಿಸಿದ್ದಾರೆ. ಈ ದೇಶದಲ್ಲಿ ಪ್ರತಿಯೊಬ್ಬರಿಗೂ ಕನಸು ಕಾಣುವ ಸಮಾನ ಹಕ್ಕು ಇದೆಯೇ? ಎಂದು ರಾಹುಲ್ ಪ್ರಶ್ನಿಸಿದ್ದಾರೆ.
ರೋಹಿತ್ ವೇಮುಲ ಉನ್ನತ ಪದವಿ ಪಡೆಯುವ ಕನಸು ಕಂಡಿದ್ದರು. ಮಾನವೀಯತೆಯ ಹಿನ್ನೆಲೆಯಲ್ಲಿ ಈ ದೇಶವನ್ನು ಸುಧಾರಿಸುವ ಬಯಕೆ ಹೊಂದಿದ್ದರು. ಆದರೆ, ದಲಿತರ ಪ್ರಗತಿಯನ್ನು ಈ ವ್ಯಸಮಾಜ ಸಹಿಸಿಕೊಳ್ಳಲಿಲ್ಲ. ಜಾತಿವಾದ, ಸಾಮಾಜಿಕ ಬಹಿಷ್ಕಾರ, ಅವಮಾನ ಓರ್ವ ಭರವಸೆಯ ಯುವಕನನ್ನು ಬಲಿ ಪಡೆದವು. ಇಂದಿಗೂ ವಿವಿ ಕ್ಯಾಂಪಸ್‌ಗಳಲ್ಲಿ ದಲಿತರ ಅಸಡ್ಡೆ, ಒಂಟಿತನ, ತಾರತಮ್ಯ, ಹಿಂಸಾಚಾರ ನಿರಂತರವಾಗಿ ಮುಂದುವರೆದಿದೆ. ಬಹುಶಃ ಇನ್ನುಮುಂದೆ ದೇಶದಲ್ಲಿ ಎಲ್ಲ ವಿಷಯಗಳಿಗೂ ಜಾತಿಯೇ ದೊಡ್ಡ ‘ಪ್ರವೇಶ ಪತ್ರ’ವಾದರೂ ಆಗಬಹುದು ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

