ವಸತಿ ನಿಲಯಗಳ ಶೋಚನೀಯ ಪರಿಸ್ಥಿತಿ, ವಿದ್ಯಾರ್ಥಿವೇತನ ವಿಳಂಬ ಕುರಿತು ಪ್ರಧಾನಿಗೆ ರಾಹುಲ್ ಗಾಂಧಿ ಪತ್ರ

Most read

ನವದೆಹಲಿ: ದೇಶದ ಎಸ್‌ ಸಿ, ಎಸ್‌ಟಿ, ಒಬಿಸಿ, ಇಬಿಸಿ ಮತ್ತು ಅಲ್ಪಸಂಖ್ಯಾತ ವಸತಿ ನಿಲಯಗಳಲ್ಲಿನ ಶೋಚನೀಯ ಪರಿಸ್ಥಿತಿ ಮತ್ತು ವಂಚಿತ ಸಮುದಾಯಗಳ ವಿದ್ಯಾರ್ಥಿಗಳಿಗೆ ಮೆಟ್ರಿಕ್‌ ನಂತರದ ವಿದ್ಯಾರ್ಥಿ ವೇತನ ನೀಡುವಲ್ಲಿ ವಿಳಂಬವನ್ನು ಖಂಡಿಸಿ ಲೋಕಸಭೆಯ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.

ಈ ಎರಡೂ ಸಮಸ್ಯೆಗಳನ್ನು ತಕ್ಷಣ ಪರಿಹರಿಸುವಂತೆ ಒತ್ತಾಯಿಸಿರುವ ಅವರು, ವಂಚಿತ ಸಮುದಾಯಗಳ ಶೇ. 90ರಷ್ಟು ವಿದ್ಯಾರ್ಥಿಗಳ ಶಿಕ್ಷಣಕ್ಕೆ ಇದು ಅಡ್ಡಿಯಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ದೇಶದಲ್ಲಿ ದಲಿತ, ಎಸ್‌ ಟಿ, ಇಬಿಸಿ, ಒಬಿಸಿ ಮತ್ತು ಅಲ್ಪಸಂಖ್ಯಾತ ಸಮುದಾಯಗಳ ವಸತಿ ನಿಲಯಗಳಲ್ಲಿ ಪರಿಸ್ಥಿತಿ ಶೋಚನೀಯವಾಗಿವೆ. ಇತ್ತೀಚೆಗೆ ಬಿಹಾರದ ದರ್ಭಾಂಗದಲ್ಲಿರುವ ಅಂಬೇಡ್ಕರ್ ವಸತಿ ನಿಲಯಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅಲ್ಲಿನ ವಿದ್ಯಾರ್ಥಿಗಳು ಕೊಠಡಿ ಸಮಸ್ಯೆ, ಕುಡಿಯುವ ನೀರಿನ ಸಮಸ್ಯೆ, ಸ್ವಚ್ಛವಿಲ್ಲದ ಶೌಚಾಲಯ ಮತ್ತು ಇಂಟರ್‌ ನೆಟ್‌ ವ್ಯವಸ್ಥೆ ಇಲ್ಲದಿರುವುದರ ಬಗ್ಗೆ ದೂರು ನೀಡಿದ್ದ ವಿಷಯವನ್ನು  ರಾಹುಲ್‌ ಗಾಂಧಿ ಮೋದಿ ಅವರ ಗಮನಕ್ಕೆ ತಂದಿದ್ದಾರೆ. ವಂಚಿತ ಸಮುದಾಯಗಳ ವಿದ್ಯಾರ್ಥಿಗಳಿಗೆ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ ಸಿಗುತ್ತಿಲ್ಲ. ಬಿಹಾರದಲ್ಲಿ ಮೂರು ವರ್ಷಗಳಿಂದ ವಿದ್ಯಾರ್ಥಿವೇತನ ಪೋರ್ಟಲ್ ಕಾರ್ಯನಿರ್ವಹಿಸುತ್ತಿಲ್ಲ. 2021-22ರಲ್ಲಿ ಯಾವುದೇ ವಿದ್ಯಾರ್ಥಿಗೆ ವಿದ್ಯಾರ್ಥಿವೇತನ ಸಿಕ್ಕಿಲ್ಲ ಎಂಬ ವಿಷಯವನ್ನೂ ಅವರು ಪ್ರಧಾನಿಗೆ ಬರೆದ ಪತ್ರದಲ್ಲಿ ವಿವರಿಸಿದ್ದಾರೆ.

ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಈ ಸಮಸ್ಯೆಗಳು ಬಿಹಾರಕೆ ಮಾತ್ರ ಸೀಮಿತವಾಗದೆ ಇಡೀ ದೇಶಕ್ಕೆ ಸೀಮಿತವಾಗಿವೆ. ಈ ಸಮಸ್ಯೆಗಳನ್ನು ಸರಿಪಡಿಸಲು ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು. ವಂಚಿತ ಸಮುದಾಯಗಳ ಮಕ್ಕಳು ಪ್ರಗತಿ ಹೊಂದದ ಹೊರತು ಭಾರತ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ ಎಂದೂ ರಾಹುಲ್‌ ಗಾಂಧಿ ಅವರು ಮೋದಿ ಅವರ ಗಮನಕ್ಕೆ ತಂದಿದ್ದಾರೆ.

More articles

Latest article