15ನೇ ಶತಮಾನದ ಅಸ್ಸಾಮಿ ಸಂತ ಮತ್ತು ವಿದ್ವಾಂಸರಾದ ಶ್ರೀಮಂತ ಶಂಕರದೇವ ಅವರ ಜನ್ಮಸ್ಥಳವಾದ ನಾಗಾಂವ್‌ನಲ್ಲಿರುವ ಬಟಾದ್ರವ ಸತ್ರ ದೇವಸ್ಥಾನಕ್ಕೆ ಭೇಟಿ ನೀಡದಂತೆ ಅಸ್ಸಾಂನ ಅಧಿಕಾರಿಗಳು ತಡೆಯುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ನಮ್ಮ ಭಾರತ್ ಜೋಡೋ ನ್ಯಾಯ ಯಾತ್ರೆಗೆ ಪೂರ್ವಾನುಮತಿ ಪಡೆದಿದ್ದರೂ ದೇವಲಯಕ್ಕೆ ಬೇಟಿ ನೀಡಲು ರಾಹುಲ್ ಗಾಂಧಿಯನ್ನು ತಡೆದಿದ್ದಾರೆ ಎಂದು ತಿಳಿದುಬಂದಿದೆ. ರಾಹುಲ್ ಗಾಂಧಿಯವರು ತಮ್ಮ ಮೇಲೆ ಹೇರಿರುವ ನಿರ್ಬಂಧಗಳನ್ನು ಪ್ರಶ್ನಿಸಿದ್ದು, “ನಾವು ದೇವಾಲಯಕ್ಕೆ ಭೇಟಿ ನೀಡಲು ಬಯಸುತ್ತೇವೆ. ನಾನು ದೇವಾಲಯಕ್ಕೆ ಭೇಟಿ ನೀಡಲಾಗದಷ್ಟು ನಾನು ಯಾವ ಅಪರಾಧ ಮಾಡಿದ್ದೇನೆ? ನಾವು ಯಾವುದೇ ಸಮಸ್ಯೆಗಳನ್ನು ಸೃಷ್ಟಿಸಲು ಬಯಸುವುದಿಲ್ಲ, ನಾವು ಕೇವಲ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಲು ಬಯಸುತ್ತೇವೆ” ಎಂದು ಅವರು ಹೇಳಿದ್ದಾರೆ.
ಅಯೋಧ್ಯೆಯಲ್ಲಿ ರಾಮ ಮಂದಿರದ ಶಂಕುಸ್ಥಾಪನೆ ಸಮಾರಂಭದ ದಿನವಾದ ಸೋಮವಾರ ರಾಹುಲ್ ಗಾಂಧಿಯವರ ಭಾರತ್ ಜೋಡೋ ನ್ಯಾಯ ಯಾತ್ರೆಗೆ ತೆರಳಲಿರುವ ಅಲ್ಪಸಂಖ್ಯಾತರ ಪ್ರಾಬಲ್ಯವಿರುವ ಪ್ರದೇಶಗಳ ಸೂಕ್ಷ್ಮ ಮಾರ್ಗಗಳಲ್ಲಿ ಕಮಾಂಡೋಗಳನ್ನು ನಿಯೋಜಿಸಲಾಗುವುದು ಎಂದು ಅಸ್ಸಾಂನ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದರು.
ಒಬ್ಬ ವ್ಯಕ್ತಿ ದೇವಾಲಯಕ್ಕೆ ಹೋಗುವುದು ಅವರ ಹಕ್ಕು ಆದರೆ ಈಗ ದೇವಾಲಯಕ್ಕೆ ಯಾರು ಭೇಟಿ ನೀಡಬೇಕೆಂದು ಪ್ರಧಾನಿ ನರೇಂದ್ರ ಮೋದಿಯವರು ಈಗ ನಿರ್ಧರಿಸುತ್ತಾರೆ ಎಂದು ರಾಹುಲ್ ವಾಗ್ದಾಳಿ ನಡೆಸಿದ್ದಾರೆ.
ಘಟನೆಯ ನಂತರ ಕಾಂಗ್ರೆಸ್ ನಾಯಕರು ಮತ್ತು ರಾಹುಲ್ ಗಾಂಧಿ ನಾಗಾಂವ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.