ಬೆಂಗಳೂರು: ರಾಜ್ಯದ ಉನ್ನತ ಶಿಕ್ಷಣ ಇಲಾಖೆಯ ವ್ಯಾಪ್ತಿಗೆ ಒಳಪಡುವ ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಪರಿಶಿಷ್ಟ ಜಾತಿ (ಎಸ್‌ಸಿ), ಪರಿಶಿಷ್ಟ ವರ್ಗ (ಎಸ್‌ಟಿ) ಮತ್ತು ಇತರ ಹಿಂದುಳಿದ ವರ್ಗಗಳು (ಒಬಿಸಿ) ಹಾಗೂ ಧಾರ್ಮಿಕ ಅಲ್ಪಸಂಖ್ಯಾತರಿಗೆ ಸಮಾನ ಅವಕಾಶ ಮತ್ತು ಶಿಕ್ಷಣ ಹಕ್ಕು ಕಲ್ಪಿಸುವ ಉದ್ದೇಶದಿಂದ ‘ರೋಹಿತ್ ವೇಮುಲ ಕಾಯ್ದೆʼ ರೂಪಿಸಲು ರಾಜ್ಯ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದೆ.
ಇತ್ತೀಚೆಗೆ ಕಾಂಗ್ರೆಸ್ ವರಿಷ್ಠ ಹಾಗೂ ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಯಾರೊಬ್ಬರೂ ಜಾತಿ ಆಧಾರದಲ್ಲಿ ತಾರತಮ್ಯ ಎದುರಿಸಬಾರದು. ಇದನ್ನು ಖಚಿತಪಡಿಸಲು ‘ರೋಹಿತ್ ವೇಮುಲ ಕಾಯ್ದೆ’ ಹೆಸರಿನ ಕಾನೂನು ಅನ್ನು ಕರ್ನಾಟಕದಲ್ಲೂ ರೂಪಿಸಿ, ಜಾರಿಗೊಳಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಆಗ್ರಹಪಡಿಸಿದ್ದರು.
ಅವರ ಸಲಹೆಯಂತೆ ‘ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯದಿಂದ ರಕ್ಷಣೆ) (ಶಿಕ್ಷಣ ಹಕ್ಕು ಮತ್ತು ಘನತೆ) ಮಸೂದೆ– 2025’ರ ಕರಡು ಕಾನೂನು ಇಲಾಖೆಯ ಪರಿಶೀಲನೆಯಲ್ಲಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಸರ್ಕಾರ ಸಿದ್ಧಪಡಿಸಿರುವ ‘ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯದಿಂದ ರಕ್ಷಣೆ) (ಶಿಕ್ಷಣ ಹಕ್ಕು ಮತ್ತು ಘನತೆ) ಮಸೂದೆ– 2025’ ಕಾಯ್ದೆಯಾಗಿ ಜಾರಿಗೆ ಬಂದ ನಂತರ, ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ವರ್ಗಗಳು, ಜಾತಿಗಳು, ಮತಗಳು, ಲಿಂಗ, ದೇಶ ಎಂಬ ತಾರತಮ್ಯ ಇಲ್ಲದೆ ಮುಕ್ತ ವಾತಾವರಣ ಇರಲಿದೆ. ಈ ಸಂಸ್ಥೆಗಳಲ್ಲಿನ ಪ್ರವೇಶವು ಜಾತಿ, ವರ್ಗ, ಮತ, ಲಿಂಗ ಅಥವಾ ದೇಶ ಎಂಬ ಬೇಧ ಇಲ್ಲದೆ ಎಲ್ಲರಿಗೂ ಮುಕ್ತವಾಗಿರುತ್ತದೆ. ಅರ್ಹತಾ ಪರೀಕ್ಷೆಗಳಲ್ಲಿನ ಅಂಕಗಳ ಆಧಾರದಲ್ಲಿ ಎಲ್ಲಾ ಪ್ರವೇಶಾತಿ ನೀಡಲು ಉದ್ದೇಶಿಸಲಾಗಿದೆ.
ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಎಸ್ ಸಿ, ಎಸ್ ಟಿ, ಒಬಿಸಿ ಮತ್ತು ಧಾರ್ಮಿಕ ಅಲ್ಪಸಂಖ್ಯಾತರಿಗೆ ಸೇರಿದ ವ್ಯಕ್ತಿಗಳನ್ನು ತಾರತಮ್ಯದಿಂದ ಕಾಣಲು ಅವಕಾಶ ಇರುವುದಿಲ್ಲ. ಈ ನಿಯಮವನ್ನು ಉಲ್ಲಂಘಿಸಿದ ವ್ಯಕ್ತಿಗಳಿಗೆ ಒಂದು ವರ್ಷ ಜೈಲು ಶಿಕ್ಷೆ ಮತ್ತು ರೂ. 10 ಸಾವಿರ ದಂಡ ವಿಧಿಸಲು ಅವಕಾಶ ಕಲ್ಪಿಸಲಾಗಿದೆ. ಒಂದು ವೇಳೆ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ತಾರತಮ್ಯ ನಡೆದರೆ ಸಂತ್ರಸ್ತ, ಸಂತ್ರಸ್ತನ ಪೋಷಕರು ಅಥವಾ ಆತನ ದೂರು ನೀಡಲು ಅವಕಾಶ ನೀಡಲಾಗಿದೆ.
ಸಂತ್ರಸ್ತನಿಗೆ ಆರೋಪಿಯು ಸೂಕ್ತ ಪರಿಹಾರ ನೀಡುವಂತೆ ನ್ಯಾಯಾಲಯ ಅನುಮತಿಸಲು ಕೂಡಾ ಅವಕಾಶ ಇರಲಿದೆ. ಪರಿಹಾರ ಮೊತ್ತ ರೂ.1 ಲಕ್ಷದವರೆಗೆ ನಿಗದಿಪಡಿಸಲಾಗಿದೆ. ಈ ಹಿಂದೆ ಅಪರಾಧ ಎಸಗಿ ಶಿಕ್ಷೆಗೊಳಗಾದವರು ಮತ್ತೆ ಈ ಕಾಯ್ದೆಯಡಿ ಶಿಕ್ಷೆಗೆ ಒಳಗಾದರೆ, ಅಂತಹವರಿಗೆ ಕನಿಷ್ಠ 3 ವರ್ಷ ಜೈಲು ಶಿಕ್ಷೆ ಮತ್ತು ದಂಡ ವಿಧಿಸಬೇಕೆಂಬ ಪ್ರಸ್ತಾವವೂ ಮಸೂದೆಯಲ್ಲಿದೆ.
ಈ ಕಾಯ್ದೆಯಡಿಯಲ್ಲಿ ಎಸಗುವ ಪ್ರತಿಯೊಂದು ಅಪರಾಧವು ಸಂಜ್ಞೇಯ ಮತ್ತು ಜಾಮೀನು ರಹಿತ ಎಂದು ಪರಿಗಣಿಸಲಾಗುವುದು. ಕಾಯ್ದೆಯ ನಿಯಮಗಳನ್ನು ಯಾವುದಾದರೂ ಸಂಸ್ಥೆ ಉಲ್ಲಂಘಿಸಿದರೆ, ಆ ಸಂಸ್ಥೆಯ ಹೊಣೆ ವಹಿಸಿಕೊಂಡಿರುವ ವ್ಯಕ್ತಿ ಅಥವಾ ವ್ಯಕ್ತಿಗಳು ಶಿಕ್ಷೆ ಮತ್ತು ದಂಡ ಪಾವತಿಸಬೇಕಾಗುತ್ತದೆ.