Thursday, December 11, 2025

ಕ್ವಾಂಟಮ್‌ ಕ್ಷೇತ್ರದ ಅಭಿವೃದ್ದಿಗೆ ಸಹಕಾರ ನೀಡಲು ಸರ್ಕಾರ ಬದ್ದ: ರೋಡ್‌ ಮ್ಯಾಪ್‌ ಸಿದ್ದಪಡಿಸಲು ಟಾಸ್ಕ್‌ ಫೊರ್ಸ್‌ ರಚನೆಗೆ ಸೂಚನೆ

Most read

ಬೆಂಗಳೂರು: ಕರ್ನಾಟಕ ಸರ್ಕಾರ ರಾಜ್ಯದಲ್ಲಿ ಕ್ವಾಂಟಮ್‌ ಕ್ಷೇತ್ರದ ಅಭಿವೃದ್ದಿಗೆ ಬದ್ದವಾಗಿದ್ದು, ಎಲ್ಲಾ ರೀತಿಯ ಸಹಕಾರ ನೀಡಲಿದೆ ಎಂದು ಪ್ರಿಯಾಂಕ ಖರ್ಗೆ ಭರವಸೆ ನೀಡಿದ್ದಾರೆ. ರಾಜ್ಯದಲ್ಲಿ ಕ್ವಾಂಟಮ್‌ ಕ್ಷೇತ್ರದ ಸಮಗ್ರ ಅಭಿವೃದ್ದಿಗಾಗಿ ಈಗಾಗಲೇ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಸದ್ಯದಲ್ಲೇ ರೋಡ್‌ ಮ್ಯಾಪ್‌ ಕೂಡಾ ಸಿದ್ದವಾಗಲಿದೆ ಎಂದೂ ತಿಳಿಸಿದ್ದಾರೆ.  

ಕ್ವಾಂಟಮ್‌ ಕ್ಷೇತ್ರ ರಾಜ್ಯದಲ್ಲಿ ಅಭಿವೃದ್ದಿಯನ್ನು ಹೊಂದುವಂತೆ ಮಾಡಲು ಮಾನವ ಸಂಪನ್ಮೂಲದ ಕೌಶಲ್ಯಾಭಿವೃದ್ದಿಯನ್ನು ಮಾಡುವುದು ಬಹಳ ಅವಶ್ಯಕವಾಗಿದೆ. ರಾಜ್ಯವನ್ನು ವಿಶ್ವ ಕ್ವಾಂಟಮ್‌ ಭೂಪಟದಲ್ಲಿ ಮುಂಚೂಣಿಯಲ್ಲಿರಿಸಲು ನಾವು ಎಲ್ಲಾ ರೀತಿ ಸಹಕಾರ, ಆವಿಷ್ಕಾರದ ಎಕೋಸಿಸ್ಟಮ್‌ ನಿರ್ಮಾಣದತ್ತ ಹೆಚ್ಚಿನ ಒತ್ತು ನೀಡಲಿದ್ದೇವೆ. ಹಂತ ಹಂತವಾಗಿ ಕ್ವಾಂಟಮ್‌ ಮಿಷನ್‌ ಮೂಲಕ, ಉದ್ಯಮ, ಅಧ್ಯಯನ ಸಂಸ್ಥೆಗಳ ಮತ್ತು ನಾವಿನ್ಯತೆಯ ಸೇತುವೆಯಾಗಿ ಕಾರ್ಯನಿರ್ವಹಿಸಲಿದ್ದೇವೆ ಎಂದರು.

ಈ ಹಿನ್ನಲೆಯಲ್ಲಿ  ವಿಧಾನಸೌಧದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಆಯೋಜಿಸಿದ್ದ ಉನ್ನತ ಮಟ್ಟದ ಸಭೆಯಲ್ಲಿ ಕ್ವಾಂಟಮ್‌ ಕ್ಷೇತ್ರದ ಪ್ರಮುಖ ಕಂಪನಿಗಳ ಪ್ರತಿನಿಧಿಗಳಿಗೆ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್‌ ಎಸ್‌ ಭೋಸರಾಜು, ಕೈಗಾರಿಕಾ ಸಚಿವರಾದ ಎಂ.ಬಿ ಪಾಟೀಲ್‌, ಐಟಿ, ಬಿಟಿ ಸಚಿವ ಪ್ರಿಯಾಂಕ ಖರ್ಗೆ ಭಾಗವಹಿಸಿದ್ದರು.

ಕರ್ನಾಟಕ ರಾಜ್ಯ ಕ್ವಾಂಟಮ್‌ ಕ್ಷೇತ್ರದ ಪ್ರಮುಖ ಪಾಲುದಾರರಾಗುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಸೌಲಭ್ಯಗಳನ್ನು ಹೊಂದಿದೆ. ಉತ್ತಮ ಶೈಕ್ಷಣಿಕ ಸಂಸ್ಥೆಗಳು, ಕೈಗಾರಿಕೆಗಳಿಗೆ ಪೂರಕವಾದ ನೀತಿ ನಿಯಮಗಳು, ಅಗತ್ಯವಾದ ಸೌಕರ್ಯಗಳು, ಹೊಸ ತಂತ್ರಜ್ಞಾನವನ್ನು ಬಳಸಿಕೊಳ್ಳುವಂತಹ ಕೈಗಾರಿಕೆಗಳು, ಕೌಶಲ್ಯ ಹೊಂದಿರುವ ಮಾನವ ಸಂಪನ್ಮೂಲವನ್ನು ಹೊಂದಿದೆ. ಇಂತಹ ಸೌಲಭ್ಯ ಬೇರೆ ರಾಜ್ಯಗಳಲ್ಲಿ ಇಲ್ಲ. ಈ ಎಲ್ಲಾ ಸೌಲಭ್ಯಗಳನ್ನು ಬಳಸಿಕೊಳ್ಳುವ ನಿಟ್ಟಿನಲ್ಲಿ ಮುಂದಾಗಬೇಕಾಗಿದೆ. ಕ್ವಾಂಟಮ್‌ ಕ್ಷೇತ್ರದ ಉತ್ತಮ ಬುನಾದಿ, ಉತ್ತಮ ಸೌಕರ್ಯಗಳು ಈಗಾಗಲೇ ಪ್ರಾರಂಭಿಸಲಾಗಿದೆ. ಈ ರಾಜ್ಯದಲ್ಲಿ ಈ ಕ್ಷೇತ್ರ ಇನ್ನಷ್ಟು ಅಭಿವೃದ್ದಿಗೊಳ್ಳಲು ಕೈಗಾರಿಕೆಗಳಿಗೆ ಅಗತ್ಯವಿರುವ ಭೂಮಿ ಹಾಗೂ ಪೂರಕ ನೀತಿಯನ್ನು ರೂಪಿಸುವ ಅಗತ್ಯವಿದೆ ಎಂದು ಕ್ವಾಂಟಮ್‌ ಕಂಪನಿಗಳ ಪ್ರತಿನಿಧಿಗಳು ತಿಳಿಸಿದರು.

ಕೈಗಾರಿಕಾ ಸಚಿವ ಎಂ. ಬಿ ಪಾಟೀಲ್‌ ಮತನಾಡಿ, ” ಕ್ವಾಂಟಮ್‌ ತಂತ್ರಜ್ಞಾನ ಮತ್ತು ರಕ್ಷಣಾ ವಲಯದಲ್ಲಿ ಕರ್ನಾಟಕ ಮುಂಚೂಣಿಯಲ್ಲಿರಬೇಕು ಎಂಬುದು ನಮ್ಮ ಗುರಿ. ಉದ್ಯಮಗಳ ಬೆಳವಣಿಗೆಗೆ ಭೂಮಿ, ಮೂಲಸೌಕರ್ಯ ಸೇರಿದಂತೆ ಎಲ್ಲಾ ರೀತಿಯ ಬೆಂಬಲವನ್ನು ಕರ್ನಾಟಕ ಸರ್ಕಾರ ನೀಡಲು ಸಿದ್ಧವಿದೆ. ಕೈಗಾರಿಕೆಗಳ ಸ್ಥಾಪನೆಗೆ, ಅದರ ಅಭಿವೃದ್ದಿಗೆ ಅಗತ್ಯವಿರುವ ಎಲ್ಲಾ ರೀತಿಯ ಸಹಕಾರ ನೀಡುವ ನಾವು ಸಿದ್ದರಿದ್ದು ಕೈಗಾರಿಕೋದ್ಯಮಿಗಳು ಅಗತ್ಯವಿರುವಂತಹ ಬೇಡಿಕೆಗಳ ಪಟ್ಟಿಯನ್ನು ನೀಡುವಂತೆ ತಿಳಿಸಿದರು.

ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್‌ ಎಸ್‌ ಭೋಸರಾಜು ಮಾತನಾಡಿ, ಕರ್ನಾಟಕ ಸರ್ಕಾರ ನಮ್ಮ ರಾಜ್ಯವನ್ನು ಕ್ವಾಂಟಮ್‌ ಕ್ಷೇತ್ರದಲ್ಲಿ ಮುಂಚೂಣಿ ರಾಜ್ಯವನ್ನಾಗಿಸುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಸಹಕಾರ ನೀಡಲು ಸಿದ್ದವಿದೆ. ಈ ಹಿನ್ನಲೆಯಲ್ಲಿ ಇಂದು ಕೈಗಾರಿಕೆ, ಐಟಿ&ಬಿಟಿ ಸಚಿವರೊಂದಿಗೆ ಹಾಗೂ ಕ್ವಾಂಟಮ್‌ ಕ್ಷೇತ್ರದ ಪ್ರತಿನಿಧಿಗಳೊಂದಿಗೆ ಮೊದಲ ಹಂತದ ಸಭೆಯನ್ನು ನಡೆಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಅವರ ನೇತೃತ್ವದ ಸರಕಾರ ಈ ನಿಟ್ಟಿನಲ್ಲಿ ರೋಡ್‌ ಮ್ಯಾಪ್‌ ತಯಾರಿಸಲಿದೆ. ಈ ರೋಡ್‌ ಮ್ಯಾಪ್‌ ತಯಾರಿಸಲು ಟಾಸ್ಕ್‌ ಫೋರ್ಸ್‌ ರಚಿಸಲು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು. ಅಲ್ಲದೇ ನಮ್ಮ ಸರಕಾರ ಅಗತ್ಯವಿರುವ ನೀತಿ ನಿಯಮಗಳನ್ನು ರೂಪಿಸಲು ಬದ್ದವಾಗಿದೆ. 2035 ರ ವೇಳೆಗೆ ಕ್ವಾಂಟಮ್‌ ಅಡ್ವಾಂಟೇಜ್‌ ಡ್ರಿವನ್‌ ಎಕಾನಮಿ ಆಗುವುದು ನಮ್ಮ ಗುರಿಯಾಗಿದೆ. ಇದಕ್ಕಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅಡಿಯಲ್ಲಿ ದೇಶದಲ್ಲೇ ಮೊದಲ ಬಾರಿಗೆ ಕ್ವಾಂಟಮ್‌ ಇಂಡಿಯಾ ಸಮಾವೇಶವನ್ನು ಜುಲೈ 31 ಹಾಗೂ ಆಗಸ್ಟ್‌ 1 ರಂದು ಆಯೋಜಿಸಲಾಗಿದೆ ಎಂದರು.

ಸಭೆಯಲ್ಲಿ ವಿಷನ್‌ ಗ್ರೂಪ್‌ ನ ಅಧ್ಯಕ್ಷ ಕ್ರಿಸ್‌ ಗೋಪಾಲಕೃಷ್ಣ,  ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್‌, ಐಟಿ&ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಏಕರೂಪ್‌ ಕೌರ್‌, ಕೈಗಾರಿಕಾ ಇಲಾಖೆ ಆಯುಕ್ತ ಗುಂಜನ್‌ ಕೃಷ್ಣ, ಕ್ರಿಸ್‌ ಗೋಪಾಲಕೃಷ್ಣ, ಎಲ್‌&ಟಿ ಕ್ಲೌಡ್‌ ಸಿಟಿಓ ಸುಬ್ರಮಣ್ಯನ್‌ ನಟರಾಜ್‌, xeedQ Gmblt ಸಿಇಓ ಗೋಪಿ ಬಾಲಸುಬ್ರಮಣ್ಯನ್‌, ಕ್ವಾಂಟಮ್‌ ರಿಸರ್ಚ್‌ ಪಾರ್ಕ್‌ನ ಮುಖ್ಯಸ್ಥ ಪ್ರೊ. ಅರಿಂದಮ್ ಘೋಷ್, ಇನ್ಪೋಸಿಸ್‌ ಉಪಾಧ್ಯಕ್ಷರಾದ ಮಂಜುನಾಥ್‌, ಐಬಿಎಂ ನ ಅಮಿತ್‌ ಸಿಂಘಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

More articles

Latest article