ಹೈದರಾಬಾದ್:ತೆಲುಗು ಸ್ಟಾರ್ ನಟ ಅಲ್ಲು ಅರ್ಜುನ್ ಪ್ರಕರಣವನ್ನು ನೆಪವಾಗಿರಿಸಿಕೊಂಡು ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ಟಾಲಿವುಡ್ ಚಿತ್ರರಂಗದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು, ಚಿತ್ರ ನಿರ್ಮಾಣಕ್ಕೆ ನೀಡಲಾಗುತ್ತಿದ್ದ ಕೆಲವು ಸೌಕರ್ಯಗಳನ್ನು ಸ್ಥಗಿತಗೊಳಿಸಿದ್ದಾರೆ. ಹೆಚ್ಚುವರಿ ಶೋಗಳು, ಟಿಕೆಟ್ ದರಗಳಲ್ಲಿ ಹೆಚ್ಚಳ ಸೇರಿದಂತೆ ಕೆಲವು ಸವಲತ್ತುಗಳನ್ನು ಬಂದ್ ಮಾಡಿದ್ದಾರೆ. ಈ ನಿರ್ಧಾರಗಳ ಬೆನ್ನಲ್ಲೇ ತೆಲುಗು ಚಿತ್ರರಂಗದ ಗಣ್ಯರು ರೇವಂತ್ ರೆಡ್ಡಿ ಅವರೊಂದಿಗೆ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಚಿತ್ರರಂಗದ ಹಲವಾರು ಗಣ್ಯರು ಸಭೆಯಲ್ಲಿ ಭಾಗಿಯಾಗಿದ್ದಾರೆ.
ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್, ಸುರೇಶ್ ಬಾಬು, ‘ಆರ್ಆರ್ಆರ್’ನ ಡಿವಿವಿ ದಯಾನಂದ್, ನಾರಾಯಣ ರಾವ್, ಯುವಿ ವಂಶಿ ಸೇರಿ ಹಲವು ನಿರ್ಮಾಪಕರು, ನಿರ್ದೇಶಕರಾದ ಕೊರಟಾಲ ಶಿವ, ಅನಿಲ್ ರವಿಪುಡಿ, ಕೆ ರಾಘವೇಂದ್ರ ರಾವ್, ಪ್ರಶಾಂತ್ ವರ್ಮಾ, ಪೈಡಪಲ್ಲಿ, ತ್ರಿವಿಕ್ರಮ್ ಭಾಗಿಯಾಗಿದ್ದರು. ನಟರಾದ ನಾಗಾರ್ಜುನ, ವೆಂಕಟೇಶ್, ವರುಣ್ ತೇಜ್, ಸಾಯಿ ಧರಮ್ ತೇಜ್, ಕಲ್ಯಾಣ್ ರಾಮ್, ಅಡವಿಶೇಷ್, ನಿತಿನ್, ರಾಮ್ ಪೋತಿನೇನಿ, ಜೊನ್ನಲಗಡ್ಡ ಸಿದ್ದು ಅವರೂ ಉಪಸ್ಥಿತರಿದ್ದರು. ಸ್ಥಗಿತಗೊಳಿಸಿರುವ ಸವಲತ್ತುಗಳನ್ನು ಮತ್ತೆ ಆರಂಭಿಸುವಂತೆ ಚಿತ್ರರಂಗದ ಗಣ್ಯರು ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಅಲ್ಲು ಅರ್ಜುನ್ ಜೈಲಿನಿಂದ ಬಿಡುಗಡೆಯಾದ ಬಳಿಕ ಚಿತ್ರರಂಗದ ಪ್ರಮುಖರು ಅವರನ್ನು ಭೇಟಿ ಮಾಡಿದ್ದನ್ನು ಸಿಎಂ ರೇವಂತ್ ರೆಡ್ಡಿ ವಿಧಾನಸಭೆಯಲ್ಲಿ ಟೀಕಿಸಿದ್ದರು. ಅಲ್ಲು ಅರ್ಜುನ್ ಅವರನ್ನು ನೋಡಲು ಹೋಗುತ್ತಾರೆ. ಆದರೆ ಆಸ್ಪತ್ರೆಯಲ್ಲಿರುವ ಬಾಲಕನನ್ನು ನೋಡಲು ಒಬ್ಬರೂ ಬರಲಿಲ್ಲ. ಜತೆಗೆ ನನ್ನನ್ನೂ ಟೀಕಿಸಿದರು ಎಂದು ಮುಖ್ಯಮಂತ್ರಿಗಳು ವಿಧಾನಸಭೆಯಲ್ಲಿ ಟೀಕಿಸಿದ್ದರು.