ಬಟಿಂಡಾ: ಪಂಜಾಬ್ ರಾಜ್ಯದ ಬಟಿಂಡಾದಲ್ಲಿ ಇಂದು ಮುಂಜಾನೆ ದಟ್ಟವಾದ ಮಂಜಿನಿಂದಾಗಿ ಭೀಕರ ಅಪಘಾತ ಸಂಭವಿಸಿ ಐವರು ಮೃತಪಟ್ಟಿದ್ದಾರೆ. ಇವರೆಲ್ಲರೂ ಹಿಮಾಚಲ ಪ್ರವಾಸ ಮುಗಿಸಿಕೊಂಡು ಗುಜರಾತ್ ಗೆ ಹಿಂತಿರುಗುತ್ತಿದ್ದರು.
ಇಂದು ಮುಂಜಾನೆ ರಾಷ್ಟ್ರೀಯ ಹೆದ್ದಾರಿಯ ಗುರ್ತಾರಿ ಗ್ರಾಮದ ಸಮೀಪ ವೇಗವಾಗಿ ಬಂದ ಎಸ್‌ಯುವಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಓರ್ವ ಮಹಿಳಾ ಕಾನ್ ಸ್ಟೇಬಲ್ ಸೇರಿ ಐವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರೆಲ್ಲರೂ ಗುಜರಾತ್ ನಿವಾಸಿಗಳಾಗಿದ್ದು, ಪಂಜಾಬ್ ಗೆ ತೆರಳುತ್ತಿದ್ದರು ಎಂದು ತಿಳಿದು ಬಂದಿದೆ.
ಎಸ್‌ಯುವಿ ಸಂಪೂರ್ಣವಾಗಿ ನಜ್ಜುಹುಜ್ಜಾಗಿದೆ. ದಟ್ಟವಾದ ಮಂಜು ಆವರಿಸಿದ್ದು, ರಸ್ತೆ ಕಾಣದೆ ಕಾರು ವಿಭಜಕಕ್ಕೆ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.
ಸ್ಥಳೀಯರ ಪ್ರಕಾರ ಅಪಘಾತ ಸ್ಥಳದಲ್ಲಿ ರಸ್ತೆ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ವಿಭಜಕ ಮತ್ತು ರಸ್ತೆಯನ್ನು ಸ್ಪಷ್ಟವಾಗಿ ಗುರುತಿಸಲು ಸಾಧ್ಯವಾಗುತ್ತಿರಲಿಲ್ಲ ಎಂದು ತಿಳಿಸಿದ್ದಾರೆ. ಅಪಘಾತಕ್ಕೆ ಅತಿವೇಗ ಮತ್ತು ದಟ್ಟವಾಗಿ ಆವರಿಸಿದ್ದ ಮಂಜು ಕಾರಣ ಎಂದು ಹೇಳಲಾಗುತ್ತಿದೆ.

