ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆ -2 ಫಲಿತಾಂಶ ಇಂದು ಸಂಜೆ ಪ್ರಕಟವಾಗಿದ್ದು, ಪರೀಕ್ಷೆ ತೆಗೆದುಕೊಂಡಿದ್ದ 1.94 ಲಕ್ಷ ವಿದ್ಯಾರ್ಥಿಗಳಲ್ಲಿ 60,692 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಪರೀಕ್ಷೆ-1ರಲ್ಲಿ 4.76 ಲಕ್ಷ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದರು. ಎರಡೂ ಪರೀಕ್ಷೆಗಳಿಂದ ಉತ್ತೀರ್ಣರಾದವರ ಸಂಖ್ಯೆ 5.36 ಲಕ್ಷಕ್ಕೆ ಏರಿಕೆಯಾಗಿದೆ. ಒಟ್ಟಾರೆ ಫಲಿತಾಂಶ ಶೇ 77.96 ರಷ್ಟಿದೆ.
ಫಲಿತಾಂಶ ಸುಧಾರಣೆ ನಿರೀಕ್ಷಿಸಿ ಎರಡನೇ ಬಾರಿ ಪರೀಕ್ಷೆ ಬರೆದಿದ್ದ 71,964 ವಿದ್ಯಾರ್ಥಿಗಳಲ್ಲಿ 41,719 ವಿದ್ಯಾರ್ಥಿಗಳು ಮೊದಲ ಪರೀಕ್ಷೆಗಿಂತ ಅಧಿಕ ಅಂಕ ಪಡೆದಿದ್ದಾರೆ. ರಸಾಯನ ವಿಜ್ಞಾನ, ಭೌತ ವಿಜ್ಞಾನ ಹಾಗೂ ಗಣಿತ ವಿಷಯದಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಫಲಿತಾಂಶ ವೃದ್ಧಿಸಿಕೊಂಡಿದ್ದಾರೆ. ಈ ಎಲ್ಲ ವಿದ್ಯಾರ್ಥಿಗಳು ಸಿಇಟಿ ರ್ಯಾಕಿಂಗ್ ಉತ್ತಮಪಡಿಸಿಕೊಳ್ಳಲು ಈ ಫಲಿತಾಂಶ ನೆರವಿಗೆ ಬರಲಿದೆ.
ಮೊದಲ ಮತ್ತು ಎರಡನೇ ಪರೀಕ್ಷೆಯಲ್ಲಿ ತೇರ್ಗಡೆಯಾಗದ ವಿದ್ಯಾರ್ಥಿಗಳಿಗೆ ಜೂನ್ 9ರಿಂದ 20ರವರೆಗೆ ಪರೀಕ್ಷೆ-3 ನಡೆಸಲಾಗುತ್ತದೆ. ಮೂರನೇ ಪರೀಕ್ಷೆಗೂ ಪರೀಕ್ಷಾ ಶುಲ್ಕ ಇರುವುದಿಲ್ಲ ಎಂದು ಸಚಿವ ಮಧು ಬಂಗಾರಪ್ಪ ಪ್ರಕಟಿಸಿದ್ದಾರೆ.