ಪೊಲೀಸ್ ಸಬ್-ಇನ್ಸ್ಪೆಕ್ಟರ್ (ಸಿವಿಲ್) (ಪುರುಷ & ಮಹಿಳಾ) ನೇರ ನೇಮಕಾತಿಯ ಮರುಪರೀಕ್ಷೆಗೆ ದಿನಾಂಕ ಪ್ರಕಟಿಸಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಸುತ್ತೋಲೆ ಹೊರಡಿಸಿದೆ. PSI ನೇಮಕಾತಿ ಮರುಪರೀಕ್ಷೆಗೆ ಇತ್ತೀಚಿಗಷ್ಟೇ ರಾಜ್ಯ ಸರ್ಕಾರ ಆದೇಶಿಸಿತ್ತು. ಜನವರಿ 23ರಂದು ಬೆಳಗ್ಗೆ 10.30 ಮಧ್ಯಾಹ್ನ 12ರ ವರೆಗೆ ಪೇಪರ್ 1 ಹಾಗೂ ಮಧ್ಯಾಹ್ನ 1 ರಿಂದ 2.30ರ ವರೆಗೆ ಪೇಪರ್ 2ರ ಪರೀಕ್ಷೆ ನಿಗದಿಪಡಿಸಲಾಗಿದೆ.
ಅಭ್ಯರ್ಥಿಗಳು ಪಾಲಿಸಬೇಕಾದ ಕಡ್ಡಾಯ ನಿಯಮಗಳು :
ಪರೀಕ್ಷಾ ಕೇಂದ್ರದಲ್ಲಿ ಅಭ್ಯರ್ಥಿಗಳು ತಪಾಸಣೆಗೆ ಒಳಪಡುವ ಹಿನ್ನೆಲೆಯಲ್ಲಿ ಬೆಳಗ್ಗೆ 8.30ಕ್ಕೆ ಸರಿಯಾಗಿ ನಿಗದಿತ ಪರೀಕ್ಷಾ ಕೇಂದ್ರದಲ್ಲಿ ಹಾಜರಿರುವಂತೆ ಸೂಚಿಸಲಾಗಿದೆ.
ಅಭ್ಯರ್ಥಿಗಳು ಪ್ರವೇಶ ಪತ್ರದ ಜೊತೆಯಲ್ಲಿ ಕಡ್ಡಾಯವಾಗಿ ಗುರುತಿನ ಚೀಟಿ (ಡ್ರೈವಿಂಗ್ ಲೈಸೆನ್ಸ್ / ಪಾಸ್ಪೋರ್ಟ್ / ಆಧಾರ್ ಕಾರ್ಡ್ / ಪಾನ್ ಕಾರ್ಡ್ / ಮತದಾರರ ಗುರುತಿನ) ಹಾಜರುಪಡಿಸಿದರೆ ಮಾತ್ರ ಪರೀಕ್ಷಾ ಕೊಠಡಿಯೊಳಗೆ ಪ್ರವೇಶಿಸಲು ಅನುಮತಿಸಲಾಗುತ್ತದೆ.
ಪರೀಕ್ಷಾ ಕೇಂದ್ರಕ್ಕೆ ಮೊಬೈಲ್ ಗಳನ್ನು ನಿಷೇಧಿಸಲಾಗಿರುವುದರಿಂದ ಮೊಬೈಲ್ ನಲ್ಲಿ ಗುರುತಿನ ಚೀಟಿಯನ್ನು ತೋರಿಸುವಂತಿಲ್ಲ ಮತ್ತು ಅಂತಹ ಅಭ್ಯರ್ಥಿಗಳನ್ನು ಪರೀಕ್ಷಾ ಕೇಂದ್ರಕ್ಕೆ ಅನುವು ಮಾಡಿಕೊಡುವುದಿಲ್ಲ.
ಅಭ್ಯರ್ಥಿಗಳು ಸಾಧ್ಯವಾದಷ್ಟು ಕಾಲರ್ ರಹಿತ ಶರ್ಟುಗಳನ್ನು ಧರಿಸುವಂತೆ ಹಾಗೂ ಯಾವುದೇ ತೆರನಾದ ಜೀನ್ಸ್ ಪ್ಯಾಂಟ್, ಬೆಲ್ಟ್, ಶೂ ಗಳನ್ನು ಧರಿಸದಂತೆ ತಿಳಿಸಲಾಗಿದೆ.
ಕಿವಿ ಅಥವಾ ಬಾಯಿಯನ್ನು ಮುಚ್ಚಿಕೊಳ್ಳುವಂತಹದನ್ನು ಧರಿಸಿ ಅಥವಾ ಯಾವುದೇ ರೀತಿಯ ಫೇಸ್ ಮಾಸ್ಕ್ ಅನ್ನೂ ಸಹ ಧರಿಸಿ ಪರೀಕ್ಷಾ ಕೊಠಡಿ ಪ್ರವೇಶಿಸುವಂತಿಲ್ಲ.
ವಾಟರ್ ಬಾಟಲ್ಗಳನ್ನು ಅನುಮತಿಸುವುದಿಲ್ಲ. ಪ್ರಾಧಿಕಾರದ ವೆಬ್ಸೈಟಿನಲ್ಲಿ ಪ್ರಕಟಿಸಲಾಗುವ ವಸ್ತ್ರ ಸಂಹಿತೆಯನ್ನು ಕಡ್ಡಾಯವಾಗಿ ಪಾಲಿಸಬೇಕು.
ಮೊದಲನೆ ಅವಧಿ ಪರೀಕ್ಷೆ ಮುಗಿದ ನಂತರ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರದಿಂದ ಹೊರಗೆ ಹೋಗಲು ಅನುಮತಿಸುವುದಿಲ್ಲ.
ಕಾಲ ಕಾಲಕ್ಕೆ ಪ್ರಾಧಿಕಾರದ ವೆಬ್ಸೈಟ್ನಲ್ಲಿ ಪ್ರಕಟಿಸಲಾಗುವ ಸೂಚನೆಗಳನ್ನು ಅಭ್ಯರ್ಥಿಗಳು ತಪ್ಪದೆ ಪಾಲಿಸತಕ್ಕದ್ದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಸುತ್ತೋಲೆಯಲ್ಲಿ ತಿಳಿಸಲಾಗಿದೆ.