ಬೆಂಗಳೂರು: ಪ್ರಧಾನಿ ಮೋದಿ ಅವರ ಕಚೇರಿಯ ಅಧಿಕಾರಿ ಎಂದು ಹೇಳಿಕೊಂಡು ಕಾಶ್ಮೀರದ ವೈದ್ಯರೊಬ್ಬರಿಗೆ ಕೋಟ್ಯಂತರ ರೂ. ಹಣ ವಂಚಿಸಿದ್ದ ಆರೋಪದಡಿಯಲ್ಲಿ ಸುಜಯ್ ಅಲಿಯಾಸ್ ಸುಜಯೇಂದ್ರ ಎಂಬಾತನನ್ನು ವಿಜಯನಗರ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿ ವಿಜಯನಗರ ನಿವಾಸಿಯಾಗಿದ್ದು, ಈತ ಗೃಹ ಸಚಿವ ಅಮಿತ್ ಶಾ ದತ್ತು ಪುತ್ರ ಎಂದು ಹೇಳಿಕೊಂಡು ಎಲ್ಲರ ಬಳಿಯೂ ಪರಿಚಯಿಸಿಕೊಳ್ಳುತ್ತಿದ್ದ. ಅನೇಕ ರಾಜಕಾರಣಿಗಳ ಜತೆ ಸಂಪರ್ಕ ಬೆಳೆಸಿಕೊಂಡು ಕೆಲಸ ಮಾಡಿಸಿಕೊಳ್ಳುತ್ತಿದ್ದ ಎಂದು ತಿಳಿದು ಬಂದಿದೆ.
ನಿರುದ್ಯೋಗಿಯಾಗಿದ್ದ ಈತ ವಂಚನೆಯನ್ನೇ ಕಾಯಕ ಮಾಡಿಕೊಂಡಿದ್ದ. ಜಮ್ಮು ಕಾಶ್ಮೀರದ ವೈದ್ಯರೊಬ್ಬರ ಬಳಿ ದೇವನಹಳ್ಳಿಯ ಬಳಿಯಲ್ಲಿ ಆಯುರ್ವೇದ ಹಾಸ್ಪಿಟಲ್ ತೆರಯಲು ಅನುಮತಿ ಕೊಡಿಸುವುದಾಗಿ ಹೇಳಿ ರೂ. 2.7 ಕೋಟಿ ಹಣವನ್ನು ವಸೂಲಿ ಮಾಡಿದ್ದ. ಇದೀಗ ಸುಜಯೇಂದ್ರ ಪೊಲೀಸರ ಅತಿಥಿಯಾಗಿದ್ದಾನೆ. ಈಗಾಗಲೇ ಎರಡು ಬಾರಿ ಜೈಲಿಗೆ ಹೋಗಿ ಬಂದಿರುವ ಈತ 4 ಚೆಕ್ ಬೌನ್ಸ್ ಪ್ರಕರಣಗಳನ್ನು ಎದುರಿಸುತ್ತಿದ್ದಾನೆ.

