ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ ಸಹಾಯಕ ಪ್ರಾಧ್ಯಾಪಕರಾಗಿ ಆಯ್ಕೆಯಾಗಿ 11 ತಿಂಗಳು ಕಳೆದರೂ ನೇಮಕಾತಿ ಆದೇಶ ಪ್ರತಿ ನೀಡದ ಸರ್ಕಾರದ ನಡೆ ವಿರೋಧಿಸಿ ನೂರಾರು ಅಭ್ಯರ್ಥಿಗಳು ಇಂದು ಅನಿರ್ಧಿಷ್ಟಾವಧಿ ಸತ್ಯಾಗ್ರಹ ಆರಂಭಿಸಿದ್ದಾರೆ.
ನೇಮಕಾತಿ ಆದೇಶ ನೀಡುವಂತೆ ಆಗ್ರಹಿಸಿ ಫ್ರೀಡಂ ಪಾರ್ಕ್‌ನಲ್ಲಿ ನೆರೆದ ಭಾವಿ ಪ್ರಾಧ್ಯಾಪಕರು ಸರ್ಕಾರ ಈ ವಿಷಯದಲ್ಲಿ ತ್ವರಿತ ಗತಿಯಲ್ಲಿ ಕೆಲಸ ಮಾಡಿ ನಮ್ಮ ಕೆಲಸ ಮಾಡಲು ಸಹಕರಿಸಬೇಕು. ಆ ಮೂಲಕ ವಿದ್ಯಾರ್ಥಿಗಳ ಪಾಠ-ಕಲಿಗೆ ನೆರವಾಗಬೇಕೆಂದು ಒತ್ತಾಯಿಸಿದ್ದಾರೆ.
‘ನೇಮಕಾತಿ ಆದೇಶಗಳು, ನೇಮಕಾತಿ ಪತ್ರಗಳು ಮತ್ತು ಸಹಾಯಕ ಪ್ರಾಧ್ಯಾಪಕರ ಕೌನ್ಸೆಲಿಂಗ್ ವೇಳಾಪಟ್ಟಿಯ ಗೆಜೆಟ್ ಹೊರಡಿಸುವಂತೆ ಮನವಿ ಮಾಡಿದ್ದಾರೆ.
ಏನಿದು ಪ್ರಕರಣ?
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸಹಾಯಕ ಪ್ರಾದ್ಯಾಪಕರಾಗಿ 26 ವಿಷಯಗಳ 1242 ಹುದ್ದೆಗಳಿಗೆ ಆನ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಅವಕಾಶ ಕಲ್ಲಿಸಿ ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸಿದ್ದು, ಅರ್ಹ ಅಭ್ಯರ್ಥಿಗಳ ದಾಖಲಾತಿ ಪರಿಶೀಲನೆಯ ನಂತರ 1208 ಅಭ್ಯರ್ಥಿಗಳ ಅಂತಿಮ ಆಯ್ಕೆ ಪಟ್ಟಿಯನ್ನು 02-02-2023ರಂದು ಕೆಇಎ ಪ್ರಕಟಿಸಿದೆ.
ಈ ಅಂತಿಮ ಆಯ್ಕೆಪಟ್ಟಿಯನ್ನು ರಾಜ್ಯ ಸರ್ಕಾರವು ತನ್ನ ರಾಜ್ಯ ಪತ್ರದಲ್ಲಿ ದಿನಾಂಕ:03-11-2023 ರಂದು ಪ್ರಕಟಿಸಿದೆ. ಅದರಂತೆ 1208 ಅಭ್ಯರ್ಥಿಗಳಲ್ಲಿ 1000 ಕ್ಕಿಂತ ಹೆಚ್ಚು ಅಭ್ಯರ್ಥಿಗಳ ಎಲ್ಲ ರೀತಿಯ ನೈಜ ಪರೀಶೀಲನೆ ಮುಕ್ತಾಯವಾಗಿದ್ದು, ಇಲಾಖೆಗೆ ಸಲ್ಲಿಕೆಯಾಗಿದೆ. ಆದರೆ ಅಂತಿಮ ಆಯ್ಕೆಪಟ್ಟಿ ಪ್ರಕಟವಾಗಿ 11 ತಿಂಗಳಾದರೂ ಆಯ್ಕೆಯಾದ ಸಹಾಯಕ ಪ್ರಾಧ್ಯಾಪಕ ಅಭ್ಯರ್ಥಿಗಳಿಗೆ ಸರ್ಕಾರವು ನೇಮಕಾತಿ ಆದೇಶ ನೀಡಿಲ್ಲ.
ಆಯ್ಕೆಯಾಗಿರುವ ಬಹುತೇಕ ಅಭ್ಯರ್ಥಿಗಳು ಗ್ರಾಮೀಣ ಭಾಗದ ಬಡವರ್ಗದ ನಿರುದ್ಯೋಗಿಗಳಾಗಿದ್ದು, ನೇಮಕಾತಿ ಆದೇಶ ನೀಡುವಲ್ಲಿ ವಿಳಂಬವಾಗಿರುವುದರಿಂದಾಗಿ, ನಾವು ಯಾವುದೇ ಕೆಲಸವಿಲ್ಲದೇ ಮಾನಸಿಕವಾಗಿ ಕುಗ್ಗಿ ಹೋಗಿದ್ದೇವೆ ಎಂದು ಅಭ್ಯರ್ಥಿಗಳು ಅಸಹಾಯಕತೆ ಹೊರಹಾಕಿದ್ದಾರೆ.
ಅಭ್ಯರ್ಥಿಗಳು ಹಿಂದೆಯೂ ಹಲವು ಬಾರಿ ಹೋರಾಟ ನಡೆಸಿದ್ದರು. ಆದರೆ ಚುನಾವಣಾ ನೀತಿ ಸಂಹಿತೆಯ ನೆಪವೊಡ್ಡಿ ಸರ್ಕಾರ ಮುಂದಕ್ಕೆ ತಳ್ಳುತ್ತ ಬಂದಿತ್ತು. ಇದೀಗ ಚುನಾವಣೆ ಮುಗಿದಿರುವುದರಿಂದ ನೇಮಕಾತಿ ಆದೇಶ ನೀಡುವಂತೆ ಆಯ್ಕೆಯಾಗಿರುವ ಸಹಾಯಕ ಪ್ರಾಧ್ಯಾಪಕರು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಶಾಂತಿಯುತ, ಅಹಿಂಸಾತ್ಮಕ ಸತ್ಯಾಗ್ರಹ ಆರಂಭಿಸಿದ್ದಾರೆ.