ಹೈದರಾಬಾದ್: ಆಸ್ತಿಗಾಗಿ ತನ್ನ ತಾತನನ್ನೇ ಕೊಂದ ದುರಂತ ಪ್ರಕರಣ ತೆಲಂಗಾಣದಲ್ಲಿ ನಡೆದಿದೆ. 28 ವರ್ಷದ ಯುವಕ ತನ್ನ ತಾತನನ್ನು ಒಂದಲ್ಲ, ಎರಡಲ್ಲ, 73 ಬಾರಿ ಇರಿದು ಕೊಂದಿರುವ ಘಟನೆ ನಡೆದಿದೆ. ಅಷ್ಟೇ ಅಲ್ಲದೆ ತನ್ನನ್ನು ತಡೆಯಲು ಮುಂದಾದ ತಾಯಿಯ ಮೇಲೂ ಹಲ್ಲೆ ನಡೆಸಿದ್ದಾನೆ.
ಮೃತ ಉದ್ಯಮಿ ವಿಸಿ ಜನಾರ್ದನ ರಾವ್ 460 ಕೋಟಿ ರೂ. ಮೌಲ್ಯದ ವೆಲ್ಜನ್ ಗ್ರೂಪ್ ಆಫ್ ಕಂಪನಿಗಳ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿದ್ದರು. ಇವರು ಹೈಡ್ರಾಲಿಕ್ಸ್ ಉಪಕರಣಗಳು, ಹಡಗು ನಿರ್ಮಾಣ, ಇಂಧನ ಇನ್ನೂ ಹಲವು ಉದ್ಯಮಗಳನ್ನು ನಡೆಸುತ್ತಿದ್ದಾರೆ.
73 ವರ್ಷದ ಅಜ್ಜನನ್ನು ಕೊಲೆ ಮಾಡಿದ ಆರೋಪದ ಮೇಲೆ ಕೀರ್ತಿ ತೇಜ ಎಂಬಾತನನ್ನು ಬಂಧಿಸಲಾಗಿದೆ, ಆತ ಈಗಷ್ಟೇ ಸ್ನಾತಕೋತ್ತರ ಪದವಿ ಪಡೆದುಕೊಂಡು ಅಮೆರಿಕದಿಂದ ಹಿಂದಿರುಗಿದ್ದ. ಆಸ್ತಿ ವಿಷಯಕ್ಕೆ ಸಂಬಂಧಿಸಿದಂತೆ ಚರ್ಚಿಸಲು ಆತ ತನ್ನ ತಾಯಿ ತಾಯಿ ಸರೋಜಿನಿ ದೇವಿ ಅವರೊಂದಿಗೆ ಹೈದರಾಬಾದ್‌ನಲ್ಲಿರುವ ಅಜ್ಜನ ಮನೆಗೆ ಭೇಟಿ ನೀಡಿದ್ದರು. ತೇಜ ಮಾತುಕತೆ ನಡೆಸುತ್ತಿರುವಾಗ ಆತನ ತಾಯಿ ಚಹಾ ಮಾಡಲು ಅಡುಗೆ ಮನೆಗೆ ಹೋಗಿದ್ದಾರೆ.
ಆ ಸಂದರ್ಭದಲ್ಲಿ ಇಬ್ಬರ ನಡುವೆ ವಾಗ್ವಾದ ನಡೆದಿದೆ. ರಾವ್ ಇತ್ತೀಚೆಗೆ ತಮ್ಮ ಹಿರಿಯ ಮಗಳ ಮಗ ಶ್ರೀಕೃಷ್ಣ ಅವರನ್ನು ವೆಲ್ಜನ್ ಗ್ರೂಪ್‌ನ ನಿರ್ದೇಶಕರನ್ನಾಗಿ ನೇಮಿಸಿದ್ದರು. ಅವರು ತಮ್ಮ ಎರಡನೇ ಮಗಳು ಸರೋಜಿನಿಯ ಪುತ್ರ ತೇಜನಿಗೆ 4 ಕೋಟಿ ರೂ. ಮೌಲ್ಯದ ಷೇರುಗಳನ್ನು ವರ್ಗಾಯಿಸಿದ್ದರು. ಇದರಿಂದ ಆತ ಕೋಪಗೊಂಡಿದ್ದ. ತನ್ನನ್ನು ಬಾಲ್ಯದಿಂದಲೂ ತಾತ ನಿರ್ಲಕ್ಷಿಸುತ್ತಿದ್ದಾರೆ ಎಂದು ತೇಜ ತಾಳ್ಮೆ ಕಳೆದುಕೊಂಡು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ. ಮಧ್ಯ ಪ್ರವೇಶಿಸಲು ಬಂದ ತಾಯಿಯ ಮೇಲೂ ಹಲ್ಲೆ ನಡೆಸಿದ್ದಾನೆ.
ಕೊಲೆ ಮಾಡಿದ್ದನ್ನು ಕಂಡ ಭದ್ರತಾ ಸಿಬ್ಬಂದಿಗೆ ಬೆದರಿಕೆ ಹಾಕಿ ತೇಜ ಮನೆಯಿಂದ ಪರಾರಿಯಾಗಿದ್ದಾನೆ. ಪೊಲೀಸರು ನಂತರ ಆತನನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ತನಿಖೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.