ಭರವಸೆ ಕುದುರಿಸುವ ಭವಿಷ್ಯದ ವ್ಯವಹಾರ

Most read

ಹೂಡಿಕೆದಾರರು ತಮ್ಮ ಆರ್ಥಿಕ ಹಿತಾಸಕ್ತಿಗಳನ್ನು ರಕ್ಷಿಸಲು ಮತ್ತು ಹೂಡಿಕೆಯ ಮೇಲೆ ಲಾಭಗಳಿಸಲು ಏನೆಲ್ಲ ಕಸರತ್ತು ನಡೆಸುತ್ತಾರೆ, ಈ ದಿಸೆಯಲ್ಲಿ ಯಾವೆಲ್ಲ ಹಣಕಾಸಿನ ಉಪಕರಣಗಳು ಬಳಕೆಯಲ್ಲಿವೆ ಮುಂತಾದ ವಿಷಯಗಳ ಕುರಿತ ವಿವರಗಳನ್ನು ತಿಳಿಸುವ ಪ್ರಯತ್ನ ಇಲ್ಲಿದೆ ಡಾ. ಉದಯ ಕುಮಾರ ಇರ್ವತ್ತೂರು, ವಿಶ್ರಾಂತ ಪ್ರಾಂಶುಪಾಲರು.

ಬಂಡವಾಳ ಎನ್ನುವ ಶಬ್ದವನ್ನು ಬಹಳಷ್ಟು ಸಂದರ್ಭದಲ್ಲಿ ಜನ ಪೂರ್ವಗ್ರಹ ಪೀಡಿತರಾಗಿಯೇ ಅರ್ಥ ಮಾಡಿಕೊಳ್ಳುತ್ತಾರೆ.  ಷೇರು ಮಾರುಕಟ್ಟೆಯನ್ನೂ ನಾವು ಬಂಡವಾಳ ಮಾರುಕಟ್ಟೆ ಎಂದೇ ಕರೆಯುತ್ತೇವೆ. ಹಾಗಾದರೆ ನಿಜವಾಗಿಯೂ ಬಂಡವಾಳ ಎಂದರೆ ಏನು? ಬೆಳೆಸುವ, ಉಳಿಸಿ ಗಳಿಸುವ, ಅಥವಾ ಉಪಯೋಗಿಸಿ ಬದುಕು ಕಟ್ಟಿಕೊಳ್ಳುವ ಏನನ್ನಾದರೂ ಬಂಡವಾಳ ಎನ್ನಬಹುದು. ಕೆಲವೊಂದು ಸಲ ಅವನಿಗೆ ಬಾಯಿಯೇ ಬಂಡವಾಳ ಎನ್ನುತ್ತೇವೆ. ಅಂದರೆ ಕೇವಲ ಮಾತಿನ ಚಮತ್ಕಾರದಿಂದಲೇ ಜೀವನ ಮಾಡುವವನು ಎಂದು ಅರ್ಥ. ಉದಾಹರಣೆಗೆ ನನ್ನಲ್ಲಿರುವ ಒಂದು ತೆಂಗಿನಕಾಯಿಯನ್ನು ನಾನು ದಿನನಿತ್ಯದ ಅಡುಗೆಯಲ್ಲಿ ಬಳಸಿಕೊಂಡು ಈ ದಿನ ತಿಂದು ಬಿಡಬಹುದು ಅಥವಾ ಅದನ್ನು ಗಿಡವಾಗಿಸಿ ಆ ಗಿಡವನ್ನು ಪೋಷಿಸುವ ಮೂಲಕ ನನ್ನ ಮತ್ತು ಆ ನಂತರದ ತಲೆಮಾರಿಗೂ ಅದನ್ನು ಉತ್ಪನ್ನ ಒದಗಿಸುವ ಒಂದು ಶಾಶ್ವತ ಉತ್ಪಾದನೆಯ ಮೂಲವಾಗಿಸಿ ಬಿಡಬಹುದು. ಒಂದೇ ಸರ್ತಿಗೆ ಬಳಸಿಬಿಟ್ಟರೆ ಅದನ್ನು ಬಳಕೆ (consumption) ಎಂದೂ ಉಳಿಸಿ ಬೆಳೆಸಿ ಭವಿಷ್ಯದ ಬಳಕೆಗೆ ಅನುವಾಗುವಂತೆ ಮಾಡಿದರೆ ಬಂಡವಾಳವೆಂದೂ ಪರಿಗಣಿಸಲಾಗುತ್ತದೆ. ಎಲ್ಲಾ ಬಗೆಯ ಸ್ಥಿರ ಮತ್ತು ಚರ ಆಸ್ತಿಗಳ ಜೀವದ್ರವ್ಯವೇ ಹಣವಾಗಿದೆ. ಹಣದ ಮೂಲಕ ಬಳಕೆ ಮತ್ತು ಬಂಡವಾಳಗಳಿಗೆ ಸಂಬಂಧಿಸಿದ ಜಗತ್ತಿನ ಎಲ್ಲಾ ವ್ಯವಹಾರಗಳೂ ನಡೆಯುತ್ತವೆ.

ಷೇರು (ಬಂಡವಾಳ) ಮಾರುಕಟ್ಟೆಯಲ್ಲಿ ಬರೀ ಇವತ್ತಿಗೆ ಸಂಬಂಧಿಸಿದ ಮಾರಾಟ ಖರೀದಿಗಳು ಮಾತ್ರ ನಡೆಯುವುದಲ್ಲ, ಬದಲಿಗೆ ಇಲ್ಲಿ ಭವಿಷ್ಯತ್ತಿಗೆ ಸಂಬಂಧಿಸಿದಂತೆ ವ್ಯವಹಾರಗಳೂ ನಡೆಯುತ್ತವೆ ಎನ್ನುವುದನ್ನು ನಾವು ನೆನಪಿನಲ್ಲಿರಿಸಬೇಕು. ಭವಿಷ್ಯದಲ್ಲಿ ಏನಾಗುತ್ತದೆ ಎನ್ನುವುದನ್ನು ಖಚಿತವಾಗಿ ಯಾರೂ ತಿಳಿಯಲಾರರು. ಭವಿಷ್ಯದ ಕುರಿತು ಭರವಸೆಯನ್ನು ನೀಡುವುದನ್ನೇ ವ್ಯವಹಾರವಾಗಿ ಮಾಡಿಕೊಂಡ ಉದ್ಯಮ ವ್ಯವಸ್ಥೆಯನ್ನು ನಾವು ವಿಮೆ (Insurence) ಎನ್ನುತ್ತೇವೆ. ಉದಾಹರಣೆಗೆ ನಾನು ನನ್ನ ಜೀವಕ್ಕೆ ವಿಮಾ ಕಂಪೆನಿ ನೀಡುವ ಭರವಸೆಯನ್ನು ಹಣ ನೀಡಿ (ಪ್ರೀಮಿಯಂ) ಪಡೆಯುತ್ತೇನೆ. ನನ್ನ ಪ್ರಾಣಕ್ಕೆ ಹಾನಿಯಾದರೆ ಕಂಪೆನಿ ನನ್ನ ಅವಲಂಬಿತರಿಗೆ ನಿರ್ಧರಿಸಿದ ಮೊತ್ತ ನೀಡುತ್ತದೆ. ನನ್ನ ಪ್ರಾಣಕ್ಕೆ ಹಾನಿಯಾಗದಿದ್ದರೆ ಒಂದು ನಿಶ್ಚಿತ ಅವಧಿಯ ಕೊನೆಗೆ ನಾನು ಪಾವತಿಸಿದ ಹಣ ಇಡುಗಂಟಾಗಿ ನೀಡುತ್ತದೆ.

ಷೇರುಮಾರುಕಟ್ಟೆಯ ಭವಿಷ್ಯದ ವಹಿವಾಟಿನ ವಿಷಯ ಪ್ರಸ್ತಾಪಿಸುವ ಮೊದಲು ವ್ಯಾಪಾರಕ್ಕೆ ಸಂಬಂಧಿಸಿ ಇನ್ನೊಂದು ಉದಾಹರಣೆ ನೋಡೋಣ. ನಾನು ಒಬ್ಬ ರೈತ, ನಾನು ನನಗಿರುವ 10 ಎಕರೆಯಲ್ಲಿ ಭತ್ತ ಬೆಳೆಯುತ್ತೇನೆ. ನಾನು ಬೆಳೆಯುವ ಬೆಳೆಯಲ್ಲಿ ನಾಲ್ಕನೇ ಒಂದು ಅಂಶ ನನ್ನ ಬಳಕೆಗೆ ಮತ್ತು ನಾಲ್ಕನೇ ಮೂರು ಅಂಶ ಮಾರುಕಟ್ಟೆಯಲ್ಲಿ ಮಾರಾಟ ಮಾಡಿ, ಅದರಿಂದ ದೊರೆಯುವ ಹಣದಿಂದ ಇತರ ಅಗತ್ಯಗಳನ್ನು ಪೂರೈಸಿಕೊಳ್ಳಲು ಬಳಸುತ್ತೇನೆ ಎಂದಿಟ್ಟು ಕೊಳ್ಳೋಣ. ನಾನು ಬೆಳೆಯುತ್ತಿರುವ ಬೆಳೆ ಮಾರುಕಟ್ಟೆಗೆ ಬರಲು ನಾಟಿ ಮಾಡಿದ ನಂತರ ಮೂರು ನಾಲ್ಕು ತಿಂಗಳು ಬೇಕಾಗುತ್ತದೆ. ಅಷ್ಟು ಹೊತ್ತಿಗೆ ಬೆಲೆಗಳು ಇಳಿದು ಹೋದರೆ ನನಗೆ ನಷ್ಟ ಸಂಭವಿಸಿ ಬಿಟ್ಟರೆ ಬದುಕು ದುಸ್ತರವಾಗಬಹುದು. ಇಂತಹ ಸಂಭಾವ್ಯ ನಷ್ಟಗಳಿಂದ ಹಿತಾಸಕ್ತಿ ಕಾಪಾಡಲು ನಾನು ಒಂದು ಉಪಾಯ ಕಂಡುಹಿಡಿಯುತ್ತೇನೆ. ನನ್ನ ಊರಿನಲ್ಲಿರುವ ಅಕ್ಕಿ ಗಿರಣಿಗೆ ಭತ್ತದ ಅಗತ್ಯವಿರುತ್ತದೆ. ಗಿರಣಿಯ ಮಾಲಕನೊಂದಿಗೆ ನಾನೊಂದು ಒಪ್ಪಂದ ಮಾಡಿಕೊಳ್ಳುತ್ತೇನೆ. ಈ ಒಪ್ಪಂದದ ಪ್ರಕಾರ ಮೂರು ತಿಂಗಳ ನಂತರ ಕ್ವಿಂಟಾಲ್ ಒಂದಕ್ಕೆ ರೂ. 6,000 ದಂತೆ ಭತ್ತವನ್ನು ಮಾರಾಟ ಮಾಡಲು ಒಪ್ಪಿಗೆ ನೀಡುತ್ತೇನೆ. ಇಂತಹ ಒಪ್ಪಂದ ಮಾಡಿಕೊಳ್ಳುವ ಮೂಲಕ ಅಕ್ಕಿ ಗಿರಣಿ ಮಾಲಿಕನಿಗೆ ಕಚ್ಚಾವಸ್ತುವಿನ ಪೂರೈಕೆಯ ಖಾತರಿಯಾಗುತ್ತದೆ ಮತ್ತು ರೈತನಾದ ನನಗೆ ಬೆಲೆ ಏರಿಳಿತದಿಂದ ಆಗಬಹುದಾದ ಸಂಭಾವ್ಯ ನಷ್ಟದಿಂದ ರಕ್ಷಣೆ ದೊರೆತಂತೆ ಆಗುತ್ತದೆ. ಇಂತಹ ಒಪ್ಪಂದಗಳನ್ನು ಹೆಂಜಿಂಗ್ (henging) ಕರಾರು ಎಂದು ಕರೆಯುತ್ತಾರೆ. ಇದು ವ್ಯಾಪಾರದಲ್ಲಿರುವ ಬೆಲೆ ಏರಿಳಿತದಿಂದ ಆಗಬಹುದಾದ ನಷ್ಟಗಳಿಂದ ಪೂರೈಕೆದಾರರು ಮತ್ತು ಖರೀದಿದಾರರಿಗೆ ರಕ್ಷಣೆ ಒದಗಿಸುವ ಮೂಲಕ ವ್ಯಾಪಾರ ವಹಿವಾಟು ಪ್ರಕ್ರಿಯೆಯನ್ನು ಸರಾಗಗೊಳಿಸುತ್ತದೆ.

ಡಿರೈವೇಟಿವ್ ಎಂದು ಹೇಳುವಾಗ ಅದರಲ್ಲಿ (ಉತ್ಪನ್ನಗಳು) 1.ಷೇರು ಮತ್ತು ಭದ್ರತಾ ಪತ್ರಗಳು, 2. ಸೂಚ್ಯಂಕಗಳು, 3. ಸರಕುಗಳು, 4. ಹಣಕಾಸು (ನಾಣ್ಯ ನೋಟು), 5. ಬಡ್ಡಿಯ ದರ ಒಳಗೊಳ್ಳುತ್ತದೆ. ಇವುಗಳ ಬೆಲೆಯಲ್ಲಿ ಸಂಭವಿಸಬಹುದಾದ ಏರಿಳಿತವನ್ನು ಗಮನಿಸಿ, ಇಳಿತವಿರುವಾಗ ಖರೀದಿಸುವ ಮತ್ತು ಏರಿಕೆಯಾದಾಗ ಮಾರಾಟ ಮಾಡುವ ಮೂಲಕ ಲಾಭ ಗಳಿಸುವ ಉದ್ದೇಶದಿಂದ ಡಿರೈವೇಟಿವ್‍ಗಳಿಗೆ ಮಹತ್ವವಿದೆ.

ಷೇರು ಮಾರುಕಟ್ಟೆಯಲ್ಲಿ ವಹಿವಾಟು ನಡೆಸುವ ಉತ್ಪನ್ನ (ಮೌಲ್ಯಯುತ ಸರಕು ಯಾ ಆಸ್ತಿ ಆಧರಿಸಿ) ಕರಾರುಗಳು: (1) ಭವಿಷ್ಯತ್ ಕರಾರು (2) ಸ್ವಾಯತ್ತ ಆಯ್ಕೆಯ ಕರಾರು (3) ಮುಂದುವರಿಕಾ ಕರಾರು (4) ಅದಲು ಬದಲು ಮಾಡಿಕೊಳ್ಳುವಿಕೆ ಇವುಗಳನ್ನು ಕೆಲವು ಉದಾಹರಣೆಗಳ ಮೂಲಕ ತಿಳಿಯುವ ಪ್ರಯತ್ನ ಮಾಡೋಣ.

1 ಭವಿಷ್ಯತ್ ಕರಾರು:  ಈ ಕರಾರಿನ ಅನ್ವಯ ಖರೀದಿದಾರ ಒಂದು ನಿಶ್ಚಿತ ದಿನ, ನಿಶ್ಚಿತ ಪ್ರಮಾಣದ ಷೇರುಗಳನ್ನು ನಿಶ್ಚಿತ ಬೆಲೆಗೆ ಖರೀದಿಸಲು ಒಬ್ಬ ಮಾರಾಟಗಾರನೊಂದಿಗೆ ಕರಾರು ಮಾಡಿಕೊಳ್ಳುತ್ತಾನೆ. ಉದಾಹರಣೆಗೆ ಕಾರಿನ ಬೆಲೆಯಲ್ಲಿ ಹೆಚ್ಚಳವಾಗುವ ಸಂದರ್ಭದಲ್ಲಿ ನಾನು ಒಂದು ನಿಶ್ಚಿತ ಮಾದರಿಯ ಕಾರನ್ನು ಈಗಿರುವ ಮಾರುಕಟ್ಟೆ ದರವಾಗಿರುವ ರೂ. 15,00,000ಕ್ಕೆ ಖರೀದಿಸಲು ಡಿಸೆಂಬರ್ 5ನೇ ತಾರೀಕು ಒಪ್ಪಂದ ಮಾಡಿಕೊಳ್ಳುತ್ತೇನೆ. ಬೆಲೆಯಲ್ಲಿ ಏರಿಕೆಯಾಗಲಿ, ಇಳಿಕೆಯಾಗಲಿ ನಾನು ಕರಾರು ಮಾಡಿಕೊಂಡಂತೆ ಡಿಸೆಂಬರ್ 5ಕ್ಕೆ ಈಗಾಗಲೇ ಒಪ್ಪಿಕೊಂಡ ದರಕ್ಕೆ ನಾನು ಕಾರು ಖರೀದಿಸಲೇ ಬೇಕಾಗುತ್ತದೆ.

2. ಸ್ವಾಯತ್ತ ಆಯ್ಕೆಯ ಕರಾರು (option ): ಇಂತಹ ಉತ್ಪನ್ನ ಕರಾರಿನಲ್ಲಿ ಖರೀದಿದಾರನೊಬ್ಬ ಮಾರಾಟಗಾರನಿಂದ ಒಂದು ನಿಶ್ಚಿತ ದಿನ, ನಿಶ್ಚಿತ ಮೊತ್ತಕ್ಕೆ ಸರಕು ಯಾ ಆಸ್ತಿಯನ್ನು ಖರೀದಿಸುವ ಕರಾರನ್ನು ಮಾಡಿಕೊಳ್ಳುತ್ತಾನೆ. ಉದಾಹರಣೆಗೆ ನಾನು ಒಂದು ಮನೆಯನ್ನು ಖರೀದಿಸಲಿಚ್ಚಿಸುತ್ತೇನೆ, ಒಂದು ವರ್ಷದ ನಂತರ ಮಾರುಕಟ್ಟೆಯಲ್ಲಿ ಮನೆಗಳ ದರ ಏರಿಕೆಯಾಗುತ್ತಲೇ ಇರುವ ಸಂದರ್ಭದಲ್ಲಿ ನಾನು, ಮಾರಾಟಗಾರನೊಬ್ಬನೊಂದಿಗೆ ವ್ಯವಹಾರ ಕುದುರಿಸಿ 80 ಲಕ್ಷಕ್ಕೆ 1ನೇ ನವೆಂಬರ್ 2024, ಇಸವಿಯಲ್ಲಿ ಮನೆ ಖರೀದಿಸಲು ಒಪ್ಪಿ ಮುಂಗಡವಾಗಿ ರೂ. 5 ಲಕ್ಷ ನೀಡಿ ಸ್ವಾಯತ್ತ ಆಯ್ಕೆಯ ಕರಾರು ಮಾಡಿಕೊಳ್ಳುತ್ತೇನೆ. ಈ ಕರಾರಿನ ಅನ್ವಯ ಮಾರಾಟಗಾರ ಒಪ್ಪಿರುವಂತೆ 1 ನವೆಂಬರ್ 2024 ರಂದು ಅಥವಾ ಅದಕ್ಕೆ ಮೊದಲು ಉಳಿದ ಮೊತ್ತ ಪಾವತಿ ಮಾಡಿ, ಕರಾರಿನಂತೆ ಮನೆ ಖರೀದಿಸಬೇಕು. ಆದರೆ ಇದು ಸ್ವಾಯತ್ವ ಆಯ್ಕೆಯ ಕರಾರು ಆಗಿರುವ ಕಾರಣ ನನಗೆ ಇಷ್ಟವಿಲ್ಲದಿದ್ದರೆ, ಮನೆಯನ್ನು ಖರೀದಿಸದೇ ಇರಬಹುದು. ಆದರೆ ಈಗಾಗಲೇ ಒಪ್ಪಂದದನ್ವಯ ನೀಡಿದ ರೂ. 5 ಲಕ್ಷವನ್ನು ಮಾರಾಟಗಾರನಿಗೆ ಬಿಟ್ಟುಕೊಡಬೇಕಾಗುತ್ತದೆ.

3. ಮುಂದುವರಿಕಾ ಕರಾರು: ಇಲ್ಲಿ ಮಾರಾಟಗಾರರು ಮತ್ತು ಖರೀದಿಗಾರರು ಪರಸ್ಪರ ಒಪ್ಪಿ ಭವಿಷ್ಯದಲ್ಲಿ ನಿರ್ಧರಿಸಿದ ಒಂದು ದಿನ, ನಿಶ್ಚಿತ ಮೊತ್ತದ, ನಿಶ್ಚಿತ ಬೆಲೆಯನ್ನು ಇಬ್ಬರು ಪರಸ್ಪರ ಒಪ್ಪಿಕೊಂಡಂತೆ ವ್ಯವಹಾರವನ್ನು ನಡೆಸಲು ಕರಾರು ಮಾಡಿಕೊಳ್ಳುತ್ತಾರೆ. ಇದು ಇಬ್ಬರು ವ್ಯಕ್ತಿಗಳ ನಡುವೆ ನಡೆಯುವ ವ್ಯವಹಾರದ ಸ್ವರೂಪದಲ್ಲಿರುತ್ತದೆ. ಭವಿಷ್ಯತ್ ಕರಾರು ಷೇರು ವಿನಿಮಯ ಸಂಸ್ಥೆಯಲ್ಲಿ ನೋಂದಾಯಿತವಾಗುವ ಕಾರಣ ಹೆಚ್ಚು ಸ್ಪಷ್ಟವಾಗಿದ್ದು, ಕರಾರಿಗೆ ಒಳಪಡುವ ತಂಡಗಳ ಮೇಲೆ ಕರಾರನ್ನು ನಿರ್ವಹಿಸುವ ಭಾದ್ಯತೆಯನ್ನು ಹೊರಿಸುತ್ತದೆ.

4. ಅದಲು ಬದಲು ಮಾಡಿಕೊಳ್ಳುವಿಕೆ: ಇಂತಹ ವ್ಯವಹಾರಗಳು ಹೆಚ್ಚಾಗಿ ವಿದೇಶಿ ವಿನಿಮಯದ ವ್ಯವಹಾರಗಳಲ್ಲಿ ಕಂಡುಬರುವಂತಹದು. ಉದಾಹರಣೆಗೆ ಭಾರತದಲ್ಲಿ ಕಾರ್ಯನಿರ್ವಹಿಸುವ ಅಮೇರಿಕದ ವಾಲ್ ಮಾರ್ಟ್ ಕಂಪೆನಿ ಮತ್ತು ಅಮೇರಿಕಾದಲ್ಲಿ ಕಾರ್ಯನಿರ್ವಹಿಸುವ ಭಾರತದ ಇನ್‍ಫೋಸಿಸ್‍ನಂತಹ ಕಂಪೆನಿಯನ್ನು ತೆಗೆದುಕೊಳ್ಳಬಹುದು. ಇನ್‍ಫೋಸಿಸ್ ಕಂಪೆನಿಗೆ ಅಮೇರಿಕನ್ ಡಾಲರ್ ಬೇಕು, ಮತ್ತು ಅಮೇರಿಕಾದ ವಾಲ್‍ಮಾರ್ಟ್ ಭಾರತದಲ್ಲಿ ವ್ಯವಹರಿಸಲು ರೂಪಾಯಿ ಬೇಕು ಎಂದಿಟ್ಟುಕೊಳ್ಳೋಣ. ಇನ್‍ಫೋಸಿಸ್ ಅಮೇರಿಕಾದ ಬ್ಯಾಂಕ್‍ನಲ್ಲಿ ಡಾಲರ್ ರೂಪದಲ್ಲಿ ಸಾಲ ಪಡೆದುಕೊಂಡರೆ ಹೆಚ್ಚಿನ ಬಡ್ಡಿಯ ದರದಲ್ಲಿ ಸಾಲ ಪಡೆಯಬೇಕಾಗುತ್ತದೆ. ಹಾಗೆಯೇ ವಾಲ್‍ಮಾರ್ಟ್ ಮತ್ತು ಇನ್‍ಫೋಸಿಸ್ ತಮ್ಮ ತಮ್ಮ ದೇಶದಲ್ಲಿ ಸಾಲ ಪಡೆದು ಅದನ್ನು ಅದಲು ಬದಲು ಮಾಡಿಕೊಳ್ಳುತ್ತವೆ. ಅಂದರೆ ಭಾರತದಲ್ಲಿ ಇನ್‍ಫೋಸಿಸ್ ಪಡೆದ ಸಾಲವನ್ನು ವಾಲ್‍ಮಾರ್ಟ್‌ಗೆ ನೀಡುತ್ತದೆ ಮತ್ತು ಅಮೇರಿಕಾದಲ್ಲಿ ವಾಲ್‍ಮಾರ್ಟ್ ಪಡೆದ ಸಾಲವನ್ನು ಇನ್‍ಫೋಸಿಸ್ ಕಂಪೆನಿಗೆ ನೀಡುತ್ತದೆ. ಸಾಲ ಮರುಪಾವತಿ ಮಾಡಬೇಕಾದ ಸಮಯದಲ್ಲಿ ಮತ್ತು ಬಡ್ಡಿ ಪಾವತಿಗೆ ಸಂಬಂಧಿಸಿದಂತೆ ಪೂರ್ವಾಭಾವಿಯಾಗಿ ನಿರ್ಧರಿಸಿದ ಷರತ್ತಿನಂತೆ ಪರಸ್ಪರರು ನಡೆದುಕೊಳ್ಳಬೇಕಾಗುತ್ತದೆ.

ಭವಿಷ್ಯದಲ್ಲಿ ವ್ಯವಹಾರ ನಡೆಸಲು ಅನುಕೂಲವಾಗುವ ಈ ರೀತಿಯ ಕರಾರುಗಳಲ್ಲಿ ಭೌತಿಕವಾಗಿ ಅಥವಾ ವಾಸ್ತವವಾಗಿ ಆಸ್ತಿ ಯಾ ಭದ್ರತಾ ಪತ್ರಗಳ ವರ್ಗಾವಣೆ, ಸ್ವಾಮ್ಯತ್ವ ಇರುವುದಿಲ್ಲ. ಇದರಲ್ಲಿ ಕರಾರುಗಳ ನಿರ್ವಹಣೆ ಮತ್ತು ನಿಭಾವಣೆಯ ಮೂಲಕ ಉತ್ಪಾದಿಸಲ್ಪಡುವ (ಅಂದರೆ ಕರಾರಿನ ನಿರ್ವಹಣೆಯ ಫಲವಾಗಿ) ಉತ್ಪನ್ನಗಳು ಲಾಭ ಅಥವಾ ನಷ್ಟಕ್ಕೆ ಕಾರಣವಾಗಿರುತ್ತವೆ. ಮಾರುಕಟ್ಟೆಯ ನಾಡಿಮಿಡಿತವನ್ನು ಅರಿತ ಸಟ್ಟಾಬಾಜಿಗಳು, ನಷ್ಟದ ಹೊರೆಯನ್ನು ಎದುರಿಸುವ ಅಪಾಯವನ್ನು ಆಹ್ವಾನಿಸಿ ವ್ಯವಹಾರಕ್ಕೆ ಮುಂದಾಗುತ್ತಾರೆ. ಅದಕ್ಕಾಗಿ ಅವರಿಗೆ ಒಂದು ನಿರ್ಧರಿತ ಮೊತ್ತದ ಬೆಲೆಯನ್ನು ತೆರಬೇಕಾಗುತ್ತದೆ. ನಾವು ಬಸ್‍ನಿಲ್ದಾಣದಿಂದ ನಡೆದುಕೊಂಡೇ ಮನೆಗೆ ಹೋಗಬಹುದು, ಅದು ಸಮಯ ಶ್ರಮ ಬೇಡುತ್ತದೆ. ಅದರ ಬದಲಿಗೆ ರಿಕ್ಷಾದಲ್ಲಿ ಯಾ ಟ್ಯಾಕ್ಸಿಯಲ್ಲಿ ಹೋದರೆ ಶ್ರಮವೂ ಇರುವುದಿಲ್ಲ, ಸಮಯವೂ ಉಳಿತಾಯವಾಗುತ್ತದೆ. ಆದರೆ ಅದಕ್ಕಾಗಿ ನಾವು ಒಂದಿಷ್ಟು ಬೆಲೆ ತೆರಲೇಬೇಕು. ಈ ಉತ್ಪನ್ನ ಆಧರಿತ ಕರಾರುಗಳ ವ್ಯವಹಾರದಲ್ಲಿಯೂ ಅದೇ ನಿಯಮ ಅನ್ವಯವಾಗುತ್ತದೆ.

ಷೇರು ಮಾರುಕಟ್ಟೆಯಲ್ಲಿ 1992 ರಿಂದ ಇತ್ತೀಚಿನವರೆಗೆ ನಡೆದು ಪ್ರಮುಖ ಹಗರಣಗಳ ಕುರಿತು ಮುಂದಿನ ಸಂಚಿಕೆಯಲ್ಲಿ ತಿಳಿಯೋಣ.

ಡಾ. ಉದಯ ಕುಮಾರ ಇರ್ವತ್ತೂರು

ವಿಶ್ರಾಂತ ಪ್ರಾಂಶುಪಾಲರು


ಇದನ್ನೂ ಓದಿ- ಷೇರು ಮಾರುಕಟ್ಟೆಯ ಸೂಚ್ಯಂಕಗಳು, ಗೂಳಿ ಕರಡಿ ಇತ್ಯಾದಿ

More articles

Latest article