ಕಬ್ಬು ಬೆಳೆಗಾರರ ಸಮಸ್ಯೆ: ಕೇಂದ್ರ ಸರ್ಕಾರದ ಜವಬ್ದಾರಿಯೇ ಹೆಚ್ಚು; ಸಿಎಂ ಸಿದ್ದರಾಮಯ್ಯ ಅಭಿಪ್ರಾಯ

Most read

ಬೆಂಗಳೂರು: ಕಬ್ಬು ಬೆಳೆಗಾರರ ಬೇಡಿಕೆಗಳನ್ನು ಈಡೇರಿಸುವಲ್ಲಿ ಕೇಂದ್ರ ಸರ್ಕಾರದ ಜವಾಬ್ದಾರಿ ಪ್ರಮುಖವಾಗಿದೆ ಮತ್ತು ಕಾರ್ಖಾನೆಗಳ ಜವಾಬ್ದಾರಿಯೂ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.

ವಿಧಾನಸೌಧದಲ್ಲಿ ಇಂದು ಕಬ್ಬು ಬೆಳೆಗಾರರ ಸಮಸ್ಯೆ ಕುರಿತು ಸಕ್ಕರೆ ಕಾರ್ಖಾನೆ ಮಾಲೀಕರ ಜತೆ ನಡೆದ ಸಭೆಯಲ್ಲಿ ಅವರು ಈ ಅಭಿಪ್ರಾಯಪಟಿದ್ದಾರೆ.

ನಾವು ರೈತರ ಪರವಾಗಿ ನಿಲ್ಲುತ್ತೇವೆ. ರೈತರ ಸಮಸ್ಯೆ ಬಗೆಹರಿಸಲು ನೀವೂ ಸಿದ್ದರಿರಬೇಕು. ಸಕ್ಕರೆ ಕಾರ್ಖಾನೆ ಮಾಲೀಕರ ಸಮಸ್ಯೆಗಳಲ್ಲಿ ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರುವ ಸಮಸ್ಯೆಗಳನ್ನು ಬಗೆಹರಿಸುವ ಬಗ್ಗೆ ಪರಿಶೀಲಿಸುವುದಾಗಿ ಭರವಸೆ ನೀಡಿದರು.

ಸಭೆಯಲ್ಲಿ ಕೇಂದ್ರ ಸರ್ಕಾರ FRP ದರಕ್ಕೆ ಪೂರಕವಾಗಿ MSP ದರ ಏರಿಸುತ್ತಿಲ್ಲ. 2019 ರಿಂದ ಕೇಂದ್ರ MSP ದರ ಏರಿಸಿಲ್ಲ. ಎಥೆನಾಲ್ ದರವನ್ನೂ ಏರಿಸಿಲ್ಲ. ನಮ್ಮ ಈ ಸಮಸ್ಯೆ ಬಗ್ಗೆಯೂ ರಾಜ್ಯ ಸರ್ಕಾರ ಕೇಂದ್ರಕ್ಕೆ ಪತ್ರ ಬರೆದು ಒತ್ತಾಯಿಸಬೇಕು ಎಂದು ಕಾರ್ಖಾನೆ ಮಾಲೀಕರು ಮುಖ್ಯಮಂತ್ರಿಗಳಿಗೆ ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು MSP ದರ ಹೆಚ್ಚಿಸುವಂತೆ ಬಹಳ ಹಿಂದೆಯೇ ಕೇಂದ್ರಕ್ಕೆ, ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದಿದ್ದೇನೆ. ಇಲ್ಲಿಯವರೆಗೂ ಕೇಂದ್ರ ಸರ್ಕಾರ MSP ಹೆಚ್ಚಿಸಿಲ್ಲ. ರಾಜ್ಯ ಪ್ರತಿ‌ನಿಧಿಸುವ ಕೇಂದ್ರ ಮಂತ್ರಿಗಳೂ ಕಬ್ಬು ಬೆಳೆಗಾರರಿಗೆ MSP ದರ ಹೆಚ್ಚಿಸುವುದಕ್ಕೆ ಸಹಕರಿಸಲಿಲ್ಲ, ಪ್ರಧಾನಿ ಅವರ ಜೊತೆ ಮಾತಾಡುತ್ತಿಲ್ಲ. ಏನು ಮಾಡುವುದು ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಸಕ್ಕರೆ ಉತ್ಪಾದನೆ ಮತ್ತು ಮಾರಾಟ, ಎಥೆನಾಲ್ ಉತ್ಪಾದನೆ ಮತ್ತು ಬೆಲೆ ನಿಗಧಿ, ಸಕ್ಕರೆ ರಫ್ತು ಮತ್ತು ಬೆಲೆ ನಿಗಧಿ ಎಲ್ಲವೂ ಕೇಂದ್ರ ಸರ್ಕಾರದ ಕೈಯಲ್ಲಿದೆ. ಕೇಂದ್ರದ ನೀತಿಯಿಂದ ದಕ್ಷಿಣ ಭಾರತದ ಕಾರ್ಖಾನೆಗಳು ಸಮಸ್ಯೆಯಲ್ಲಿವೆ, ಉತ್ತರ ಭಾರತದ ಕಾರ್ಖಾನೆಗಳು ಅನುಕೂಲಕರವಾಗಿವೆ ಎಂದು ಸಕ್ಕರೆ ಕಾರ್ಖಾನೆ ಮಾಲೀಕರು ಒಮ್ಮತದ ಅಭಿಪ್ರಾಯ ವ್ಯಕ್ತಪಡಿಸಿದರು.

ಸಕ್ಕರೆ ಕಾರ್ಖಾನೆ ನಡೆಸುವುದು ಬಹಳ ಕ್ಲಿಷ್ಟಕರವಾಗಿದೆ. ಸಕ್ಕರೆ, ಎಥೆನಾಲ್, ವಿದ್ಯುತ್ ಉತ್ಪಾದನೆ ಮಾಡಿದರೂ ನಾವು ಸಂಕಷ್ಟದಲ್ಲಿದ್ದೇವೆ. ಜತೆಗೆ ರೈತರಿಂದ ಕೆಟ್ಟ ಬೈಗುಳ ತಿನ್ನುತ್ತಿದ್ದೇವೆ. ನಾವು ಉದ್ಯೋಗ ಸೃಷ್ಟಿಸಿ ಗ್ರಾಮೀಣ ಆರ್ಥಿಕತೆಗೆ ಅಪಾರ ಕೊಡುಗೆ ನೀಡುತ್ತಿದ್ದೇವೆ. ಆದರೂ ಕೇಂದ್ರದ ನೀತಿಗಳಿಂದ ನಮಗೆ ನಷ್ಟ ಆಗುತ್ತಿದೆ. ರೈತರಿಂದಲೂ ಒತ್ತಡ ಇದೆ. ಹೀಗಾದರೆ ನಾವು ಕಾರ್ಖಾನೆ ನಡೆಸುವುದೇ ಕಷ್ಟ ಆಗುತ್ತದೆ. ಬೇಕಿದ್ದರೆ ಸರ್ಕಾರವೇ ನಮ್ಮ ಕಾರ್ಖಾನೆಗಳನ್ನು ನಡೆಸಲಿ ಎಂದು ಕಾರ್ಖಾನೆ ಮಾಲೀಕರು ತಮ್ಮ ಸಂಕಷ್ಟ ಹೇಳಿಕೊಂಡರು.

ಆಗ ಮುಖ್ಯಮಂತ್ರಿಗಳು, ಸಕ್ಕರೆ ಕಾರ್ಖಾನೆ ನಡೆಸುವುದು ನೀವು ಹೇಳುವಷ್ಟೇ ಕಷ್ಟ ಆಗಿದ್ದರೆ ಒಂದು ಕಾರ್ಖಾನೆ ಇದ್ದವರು ಎರಡು, ಮೂರು ಕಾರ್ಖಾನೆ ಮಾಲೀಕರಾಗಿದ್ದು ಹೇಗೆ ಎಂಬ ರೈತರ ಪ್ರಶ್ನೆಗೆ ಏನು ಸಮಜಾಯಿಷಿ ನೀಡುತ್ತೀರಿ ಎಂದು ಪ್ರಶ್ನಿಸಿದರು.

More articles

Latest article