ಹಾಸನ: ಪ್ರಜ್ವಲ್ ರೇವಣ್ಣನ ಲೈಂಗಿಕ ಹಗರಣ ಬೆಳಕಿಗೆ ಬಂದಾಗ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಮಾಜಿ ಸಚಿವ ರೇವಣ್ಣ ಹಾಗೂ ಬಿಜೆಪಿಯವರು ಏನೂ ಗೊತ್ತಿಲ್ಲದವರಂತೆ ನುಣಚಿಕೊಂಡರು. ಈ ನುಣುಚುಕೋರರಿಗೆ ಹಾಸನದಲ್ಲಿ ನಡೆದಿರುವ ಹೋರಾಟ ಒಂದು ಪಾಠ ಕಲಿಸಲಿದೆ. ಅಪರಾಧಗಳ ಹೊಣೆ ಪ್ರತಿಬಾರಿಯೂ ಹೆಣ್ಣುಮಕ್ಕಳು ಹೊತ್ತುಕೊಳ್ಳುವುದು ಬೇಡ.. ಈ ನುಣುಚುಕೋರರನ್ನು ರಾಜಕೀಯದಿಂದ ನಿವೃತ್ತಿಗೊಳಿಸುವ ಹೋರಾಟ ಇದಾಗಿದೆ ಎಂದು ಸಾಮಾಜಿಕ ಹೋರಾಟಗಾರ್ತಿ, ಕರ್ನಾಟಕ ಜನಶಕ್ತಿಯ ಮುಖಂಡರಾದ ಮಲ್ಲಿಗೆ ಸಿರಿಮನೆ ಹೇಳಿದರು.
ಕಾಮಕಾಂಡ ನಡೆಸಿ ವಿದೇಶಕ್ಕೆ ಪರಾರಿಯಾಗಿರುವ ಸಂಸದ, ಎನ್ ಡಿಎ ಅಭ್ಯರ್ಥಿ ಪ್ರಜ್ವಲ್ ರೇವಣ್ಣನನ್ನು ಬಂಧಿಸಬೇಕು ಮತ್ತು ಸಂತ್ರಸ್ತೆಯರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿ ಹಾಸನದಲ್ಲಿ ಇಂದು ನಡೆಯುತ್ತಿರುವ ಬೃಹತ್ ಹೋರಾಟದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಹಿರಿಯ, ಮುತ್ಸದ್ದಿ ಎಂದು ಕರೆಯಿಸಿಕೊಳ್ಳುವ ದೇವೆಗೌಡರು, ಪ್ರಜ್ವಲ್ ರೇವಣ್ಣನ ಮೇಲೆ ಕಾನೂನು ಕ್ರಮಕ್ಕೆ ಒತ್ತಾಯಿಸಬೇಕು. ರಾಜ್ಯ ಸರ್ಕಾರ ನಿದ್ದೆಯಿಂದ ಎದ್ದು ಬಂದು ದೌರ್ಜನ್ಯಕ್ಕೊಳಗಾದವರ ನ್ಯಾಯ ಕೇಳಬೇಕು. ಪ್ರಕರಣ ಬಯಲಿಗೆ ಬಂದಾಗ ಒಂದೇ ರೀತಿಯ ಪ್ರತಿಕ್ರಿಯೆಗಳು ಬಂದವು. ಅಪರಾಧಿಗಳು ಮತ್ತವರ ಕುಟುಂಬಗಳು ಪೆನ್ ಡ್ರೈವ್‌ನ ಹಂಚಿದ್ಯಾರು ಎಂಬುದರ ಬಗ್ಗೆ ಮಾತನಾಡುತ್ತಾ ಪ್ರಕರಣದಿಂದ ನುಣುಚಿಕೊಳ್ಳಲು ಯತ್ನಿಸಿದರು. ಸಂತ್ರಸ್ತ ಮಹಿಳೆಯರನ್ನೇ ಅಪರಾಧಿಗಳನ್ನಾಗಿ ಮಾಡುವ ಯತ್ನಗಳು ನಡೆದವು. ಸರ್ಕಾರವೂ ಕೂಡ ಪ್ರಕರಣದಲ್ಲಿ ತಮ್ಮದು ಹೆಚ್ಚಿನ ಪಾತ್ರವಿಲ್ಲ ಎಂಬಂತೆ ನುಣುಚಿಕೊಳ್ಳಲು ಯತ್ನಿಸಿತು. ಈ ಎಲ್ಲ ನುಣುಚುಕೋರರ ಬಣ್ಣ ಬಯಲಾಗಿದೆ. ಇದು, ಇಡೀ ವ್ಯವಸ್ಥೆಯ ವೈಫಲ್ಯ ಎಂದು ಅವರು ಮಲ್ಲಿಗೆ ಸಿರಿಮನೆ ಹೇಳಿದರು.
“ಹೆಣ್ಣು ಮಕ್ಕಳು ತಮ್ಮ ಚಿಕ್ಕ ಕೆಲಸಕ್ಕಾಗಿ, ಪ್ರಮೋಷನ್‌ಗಾಗಿ, ಪಂಚಾಯತಿ ಮಟ್ಟದ ಟಿಕೆಟ್‌ಗಾಗಿ ಇಂತಹ ಕಾಮುಕರ ದೌರ್ಜನ್ಯಕ್ಕೆ ಬಲಿಯಾಗಬೇಕಿರುವ ಪರಿಸ್ಥಿತಿಯನ್ನು ಈ ವ್ಯವಸ್ಥೆ ಮಹಿಳೆಯರಿಗೆ ನೀಡಿದೆ. ಈ ವ್ಯವಸ್ಥೆಯನ್ನು ಬದಲಿಸಲು ಇಡೀ ದೇಶ ಒಗ್ಗೂಡಿ ಹೋರಾಟ ನಡೆಸಬೇಕು. ಇಂತಹ ದೌರ್ಜನ್ಯ ಪ್ರಕರಣಗಳನ್ನ ಸಮಗ್ರವಾಗಿ ಪರಿಶೀಲಿಸಲು ಉನ್ನತ ಸಮಿತಿಯನ್ನು ಸರ್ಕಾರ ರಚನೆ ಮಾಡಬೇಕು. ಗುಹೆಯಲ್ಲಿ ಅವಿತಿರುವ ಪ್ರಧಾನಿ ಮೋದಿ ಅವರು ಗುಹೆಯಿಂದ ಹೊರಬರಬೇಕು. ತಮ್ಮದೇ ಮಿತ್ರ ಪಕ್ಷದ ಸಂಸದ ಎಸಗಿರುವ ದೌರ್ಜನ್ಯದ ವಿರುದ್ಧ ಕ್ರಮಕ್ಕೆ ಮುಂದಾಗಬೇಕು” ಎಂದು ಅವರು ಆಗ್ರಹಿಸಿದರು.