ಮುಜಾಫರ್‌ಪುರ: ಪ್ರಧಾನಿ ನರೇಂದ್ರ ಮೋದಿ ಅವರು ವೋಟಿಗಾಗಿ ವೇದಿಕೆ ಮೇಲೆ ನೃತ್ಯ ಮಾಡಲೂ ಹಿಂಜರಿಯುವುದಿಲ್ಲ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವ್ಯಂಗ್ಯವಾಡಿದ್ದಾರೆ. ಮುಜಾಫರ್‌ಪುರದಲ್ಲಿ ನಡೆದ ಚುನಾವಣಾ ಸಮಾವೇಶದಲ್ಲಿ ಅವರು ಪ್ರಧಾನಿ ಮೋದಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಛತ್ ಪೂಜಾ ನಡೆಯುವಾಗ ಯಮುನಾ ನದಿಯಲ್ಲಿ ಪುಣ್ಯಸ್ನಾನ ಮಾಡುವುದಾಗಿ ಪ್ರಧಾನಿ ಮೋದಿ ಹೇಳಿದ್ದರು. ಯುಮುನಾ ನದಿ ಪಕ್ಕದಲ್ಲೇ ಪೈಪ್ ಮೂಲಕ ನೀರು ತುಂಬಿಸಿ ಕೊಳ ನಿರ್ಮಿಸಲಾಗಿತ್ತು. ಈ ವಿಷಯ ಬಹಿರಂಗವಾಗುತ್ತಿದ್ದಂತೆ ಮೋದಿ ಪುಣ್ಯಸ್ನಾನದಿಂದ ಹಿಂದೆ ಸರಿದಿದ್ದಾರೆ ಎಂದು ರಾಹುಲ್ ಟೀಕಿಸಿದರು.
ಪ್ರಧಾನಿ ಮೋದಿ ಅವರ ಬಣ್ಣ ಬಣ್ಣದ ಮಾತುಗಳಿಗೆ ಮರುಳಾಗಬೇಡಿ ಎಂದು ಕರೆ ನೀಡಿದ ಅವರು, ವೋಟು ಸಿಗುತ್ತವೆ ಎನ್ನುವುದಾದರೆ ವೇದಿಕೆ ಮೇಲೆ ನರ್ತಿಸಲೂ ಸಿದ್ದರಾಗಿರುತ್ತಾರೆ ಎಂದು ವ್ಯಂಗ್ಯವಾಡಿದರು.
ಕಾಂಗ್ರೆಸ್ ನಾಯಕ, ಬಿಹಾರದಲ್ಲೂ ವೋಟ್ ಚೋರಿ ನಡೆಸಿ ಗೆಲ್ಲಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದೂ ಆಪಾದಿಸಿದರು
ಆರ್‌ಜೆಡಿ ಮುಖಂಡ ತೇಜಸ್ವಿ ಯಾದವ್ ಮಾತನಾಡಿ ಬಿಹಾರದಲ್ಲಿ ನಿತೀಶ್ ಕುಮಾರ್ ನಾಮಕಾವಸ್ತೆ ಮುಖ್ಯಮಂತ್ರಿಯಾಗಿದ್ದು, ಸರ್ಕಾರವನ್ನು ರಿಮೋಟ್ ಕಂಟ್ರೋಲ್ ಮೂಲಕ ನಡೆಸಲಾಗುತ್ತಿದೆ ಎಂದು ಹೇಳಿದರು.

