ಬೆಂಗಳೂರು; ರಾಜ್ಯ ಸರ್ಕಾರ 2025–26 ಶೈಕ್ಷಣಿಕ ಸಾಲಿನಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ 51,000 ಅತಿಥಿ ಶಿಕ್ಷಕರನ್ನು ನೇಮಿಸಲು ಸರ್ಕಾರ ಆದೇಶ ಹೊರಡಿಸಿದೆ.
ಮೇ 29, 2025 ರಂದು ಶಾಲೆಗಳು ಪುನರಾರಂಭವಾಗಲಿರುವ ಹಿನ್ನೆಲೆಯಲ್ಲಿ ಶೈಕ್ಷಣಿಕ ಚಟುವಟಿಕೆಗಳು ನಿರಂತರವಾಗಿ ಹಾಗೂ ಸಮಯಕ್ಕೆ ಸರಿಯಾಗಿ ಆರಂಭವಾಗಲಿ ಎಂಬ ಉದ್ದೇಶ ಈ ತಾತ್ಕಾಲಿಕ ನೇಮಕಾತಿಗೆ ಆದೇಶ ಹೊರಡಿಸಿದೆ.
ತಾತ್ಕಾಲಿಕವಾಗಿ ನೇರ ನೇಮಕಾತಿ ಮೂಲಕ ಶಿಕ್ಷಕರನ್ನು ಭರ್ತಿ ಮಾಡುವವರೆಗೆ ಅಥವಾ ಶೈಕ್ಷಣಿಕ ವರ್ಷದ ಅಂತ್ಯದವರೆಗೆ ಎಂಬ ಷರತ್ತಿಗೊಳಪಟ್ಟು ಅತಿಥಿ ಶಿಕ್ಷಕರನ್ನು ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳಲು ಸರ್ಕಾರ ಮಂಜೂರಾತಿ ನೀಡಿದೆ. 51,000 ಅತಿಥಿ ಶಿಕ್ಷಕರ ಪೈಕಿ 40,000 ಶಿಕ್ಷಕರನ್ನು ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಹಾಗೂ ಉಳಿದ 11,000 ಶಿಕ್ಷಕರನ್ನು ಸರ್ಕಾರಿ ಪ್ರೌಢ ಶಾಲೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತದೆ.
ಶಿಕ್ಷಕರ ಕೊರತೆಯಿಂದ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬುದು ನಮ್ಮ ಗುರಿ. ಈ ತ್ವರಿತ ನಿರ್ಧಾರ ಶೈಕ್ಷಣಿಕ ಕೊರತೆಯನ್ನು ಪೂರೈಸಲು ಅಗತ್ಯವಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ. ಹೊಸ ಶೈಕ್ಷಣಿಕ ವರ್ಷ ಆರಂಭದ ದಿನದಿಂದಲೇ ಗುಣಮಟ್ಟದ ಶಿಕ್ಷಣ ಎಲ್ಲರಿಗೂ ಲಭ್ಯವಾಗುವುದು ನಮ್ಮ ಆದ್ಯತೆ ಎಂದೂ ಅವರು ತಿಳಿಸಿದ್ದಾರೆ.
ಗೌರವಧನ ರೂ.2,000 ಹೆಚ್ಚಳ:
ರಾಜ್ಯದ ಸರ್ಕಾರಿ ಪ್ರಾಥಮಿಕ, ಪ್ರೌಢ ಶಾಲೆಗಳು ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಶಿಕ್ಷಕರು ಮತ್ತು ಉಪನ್ಯಾಸಕರ ಗೌರವ ಧನವನ್ನು ಹೆಚ್ಚಳ ಮಾಡಿ ಸರ್ಕಾರ ಆದೆಶ ಹೊರಡಿಸಿದೆ. ಎಲ್ಲಾ ಅತಿಥಿ ಬೋಧಕರ ಮಾಸಿಕ ಗೌರವಧನವನ್ನು ತಲಾ ರೂ.2,000 ಹೆಚ್ಚಿಸಲಾಗಿದೆ.
ಈ ಹಿಂದೆ ಸರ್ಕಾರ ಪ್ರಾಥಮಿಕ ಶಾಲಾ ಅತಿಥಿ ಶಿಕ್ಷಕರಿಗೆ ರೂ.10,000 ಹಾಗೂ ಪ್ರೌಢಶಾಲಾ ಅತಿಥಿ ಶಿಕ್ಷಕರಿಗೆ ರೂ.10,500 ಗೌರವ ಸಂಭಾವನೆಯನ್ನು ನಿಗದಿಪಡಿಸಿತ್ತು. ಇದೀಗ, ಈ ಮೊತ್ತಕ್ಕೆ ಹೆಚ್ಚುವರಿಯಾಗಿ ರೂ. 2,000 ಸೇರ್ಪಡೆಯಾಗಲಿದೆ. ಹಾಗೆಯೇ ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಅತಿಥಿ ಉಪನ್ಯಾಸಕರ ಗೌರವಧನ ರೂ.12,000 ಇದ್ದು ಇದೀಗ ರೂ.14,000 ಕ್ಕೆ ಹೆಚ್ಚಳವಾಗಲಿದೆ.