ಬೆಂಗಳೂರು: ಹೆದ್ದಾರಿಗಳ ಟೋಲ್ ನಿಂದ ರೈಲ್ವೇ ತನಕ, ಅಡುಗೆ ಸಿಲಿಂಡರ್ ನಿಂದ ಹಿಡಿದು ದಿನಬಳಕೆ ವಸ್ತುಗಳ ಬೆಲೆ ಏರಿಕೆ ಮಾಡುವ ಮೂಲಕ ಪ್ರಧಾನಿ ಮೋದಿ ಅವರು ದೇಶದ ಜನಸಾಮಾನ್ಯರ ಪರಿಸ್ಥಿತಿಯನ್ನು ಜರ್ಜರಿತಗೊಳಿಸಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಆರೋಪ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿಯಿಂದಾಗಿ ಗ್ಯಾಸ್ ಸಿಲಿಂಡರ್ ಸೇರಿದಂತೆ ದಿನಬಳಕೆಯ ವಸ್ತುಗಳಿಗೆ ಕೆಲವೇ ದಿನಗಳಲ್ಲಿ ʼಝಡ್ ಪ್ಲಸ್ʼ ಸೆಕ್ಯೂರಿಟಿ ನೀಡಬೇಕಾದ ಪರಿಸ್ಥಿತಿ ಎದುರಾಗಲಿದೆ ಎಂದು ವ್ಯಂಗ್ಯವಾಡಿದರು.
ಮೋದಿಯವರೇ ಇದು ಆಡಳಿತ ನಡೆಸುವ ಮಾದರಿಯಲ್ಲ ಬದಲಾಗಿ ಹೆದ್ದಾರಿಗಳ್ಳತನ. ರೈಲ್ವೇ ಹಳಿ ಮತ್ತು ಹೆದ್ದಾರಿಗಳ ಮೂಲಕ ನಡೆಸುತ್ತಿರುವ ದರೋಡೆ. ಸಾರ್ವಜನಿಕವಾಗಿ ಜನರನ್ನು ಪಿಕ್ ಪಾಕೆಟ್ ಮಾಡುವ ಷಡ್ಯಂತ್ರ. ಭಾರತೀಯ ಜೇಬ್ ಕಾಟೋ ಪಾರ್ಟಿ (ಭಾರತೀಯ ಜನರ ಜೇಬು ಕತ್ತರಿಸುವ ಪಕ್ಷ) ಎಂದು ಬಿಜೆಪಿಯನ್ನು ವ್ಯಾಖ್ಯಾನಿಸಬಹುದು. ಕೂಡಲೇ ಬಿಜೆಪಿಯು ರೈಲ್ವೇ ಬೆಲೆ ಏರಿಕೆಯನ್ನು ಹಿಂದಕ್ಕೆ ಪಡೆಯಬೇಕು ಎಂದು ಅವರು ಆಗ್ರಹಪಡಿಸಿದರು.
ಜುಲೈ 1 ರಿಂದ ರೈಲ್ವೇ ದರಗಳನ್ನು ಹೆಚ್ಚಳ ಮಾಡಿ ಸುಮಾರು 700 ಕೋಟಿಯಷ್ಟು ಹೊರೆಯನ್ನು ಜನರ ಮೇಲೆ ಹಾಕಲಾಗುತ್ತಿದೆ. ಏಪ್ರಿಲ್ 1 ರಂದು ಟೋಲ್ ಬೆಲೆ ಏರಿಕೆಯ ಕೊಡುಗೆ ನೀಡಿತ್ತು. ಈಗ ರೈಲ್ವೇ ಬೆಲೆ ಏರಿಕೆ ಮಾಡಿ ಹೊಸ ಕೊಡುಗೆ ನೀಡಿದೆ. ಈಗ ಬೆಂಗಳೂರು ಎಲಿವೇಟೆಡ್ ಕಾರಿಡಾರ್ ಟೋಲ್ ಬೆಲೆಯನ್ನು ಹೆಚ್ಚಳ ಮಾಡಿ ಬರೆ ಹಾಕಿದೆ. ಬುಲೆಟ್ ಟ್ರೈನ್ ನೀಡುತ್ತೇವೆ ಎಂದು ರೈಲುಗಳನ್ನೇ ಮಾಯ ಮಾಡಿದ್ದಾರೆ. ಜನರ ನಿರೀಕ್ಷೆಗಳನ್ನು ಹುಸಿಗೊಳಿಸಿದ್ದಾರೆ. ರೈಲಿನಲ್ಲಿ ಜಾಗ ಸಿಗದೆ ನೇತಾಡುತ್ತಿದ್ದ ಪ್ರಯಾಣಿಕರು ರೈಲಿನಿಂದ ಬಿದ್ದು ಮಹಾರಾಷ್ಟ್ರದಲ್ಲಿ ಪ್ರಾಣ ಕಳೆದುಕೊಂಡರು ಎಂದು ವಾಗ್ದಾಳಿ ನಡೆಸಿದರು.
ಅಚ್ಚೇದಿನ್ ಯೋಜನೆ ರೈಲುಗಳ ಮಂಗಮಾಯದ ಮೂಲಕ ಪ್ರಾರಂಭವಾಗಿದೆ. ವಿಕಾಸದಿಂದ ವಿನಾಶದ ಕಡೆಗೆ ದೇಶ ಹೆಜ್ಜೆ ಹಾಕುತ್ತಿದೆ. 2024 ರ 1ನೇ ಏಪ್ರಿಲ್ ನಿಂದ 31 ರ 2025 ವರೆಗಿನ ರೈಲ್ವೇ ಪ್ರಯಾಣಿಕರ ಅಂಕಿಅಂಶಗಳನ್ನು ತೆಗೆದುಕೊಂಡರೆ 715 ಕೋಟಿ ಪ್ರಯಾಣ ಒಂದು ವರ್ಷದಲ್ಲಿ ದಾಖಲಾಗಿದೆ. 2023-24 ರಲ್ಲಿ ಸೌತ್ ವೆಸ್ಟರ್ನ್ ರೈಲ್ವೇಯ ಪ್ರಯಾಣಿಕರ ಸಂಖ್ಯೆ 2 ಕೋಟಿ 48 ಲಕ್ಷ ಜನರು ಪ್ರಯಾಣ ಮಾಡಿದ್ದಾರೆ. 2023- 24ರ ಸಾಲಿನಲ್ಲಿ 2.56 ಲಕ್ಷ ಕೋಟಿ ವಹಿವಾಟು ನಡೆಸಿದ್ದು 3 ಸಾವಿರ ಕೋಟಿ ನಿವ್ವಳ ಲಾಭ ಮಾಡಿದೆ. ರೈಲ್ವೇ ಅಪಘಾತದಿಂದ 2 ಲಕ್ಷ 60 ಸಾವಿರ ಜನರು ದೇಶದಲ್ಲಿ ಸತ್ತಿದ್ದಾರೆ. ಹಿರಿಯ ನಾಗರೀಕರಿಗೆ ರೈಲ್ವೇ ರಿಯಾಯಿತಿ ಕಿತ್ತುಕೊಳ್ಳಲಾಗಿದೆ ಎಂದು ಟೀಕಿಸಿದರು.
ಕಳೆದ 10 ವರ್ಷಗಳಲ್ಲಿ ಶೇ. 100 ರಷ್ಟು ಟಿಕೆಟ್ ದರವನ್ನು ಕೇಂದ್ರ ಸರ್ಕಾರ ಏರಿಕೆ ಮಾಡಿತ್ತು. ಕಳೆದ 2014 ರಲ್ಲಿ ಇಡೀ ದೇಶದ ವಾರ್ಷಿಕ ಟೋಲ್ ಸಂಗ್ರಹ 17,700,59 ಕೋಟಿ. ಆದರೆ ಈಗ 85 ಸಾವಿರ ಕೋಟಿಗೆ ಏರಿಕೆಯಾಗಿದೆ. ಈ ರೀತಿ ಹಣವನ್ನು ಲೂಟಿ ಮಾಡಲಾಗುತ್ತಿದೆ. ಶೇ 500 ರಷ್ಟು ಬೆಲೆ ಹೆಚ್ಚಳವೇ ದೇಶದ ಜನರಿಗೆ ನೀಡಿರುವ ಕೊಡುಗೆಯಾಗಿದೆ. ಕರ್ನಾಟಕದ ಜನರಿಂದ ಕಳೆದ ಐದು ವರ್ಷಗಳಲ್ಲಿ 10 ಸಾವಿರ ಕೋಟಿಯನ್ನು ಟೋಲ್ ಮೂಲಕವೇ ಸಂಗ್ರಹ ಮಾಡಿದೆ. 2024 ರಲ್ಲಿ 4.86 ಸಾವಿರ ಕೋಟಿ ಟೋಲ್ ಅನ್ನು ಕರ್ನಾಟಕದ ಜನ ತೆತ್ತಿದ್ದಾರೆ. ಹೊಸೂರು ಟೋಲ್ ಪ್ಲಾಜಾದಲ್ಲಿ ಮತ್ತೆ ಕೇಂದ್ರ ಸರ್ಕಾರ ಟೋಲ್ ಬೆಲೆ ಹೆಚ್ಚಳ ಮಾಡಿದೆ ಎಂದು ಟೀಕಿಸಿದರು.
ಮಾಧ್ಯಮಗೋಷ್ಠಿಯಲ್ಲಿ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿ.ಕೆ. ಶಿವಕುಮಾರ್, ಎಐಸಿಸಿ ಕಾರ್ಯದರ್ಶಿ ಅಭಿಶೇಕ್ ದತ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಜಿ.ಸಿ. ಚಂದ್ರಶೇಖರ್, ಕೆಪಿಸಿಸಿ ಉಪಾಧ್ಯಕ್ಷರಾದ ಬಿ.ಎಲ್. ಶಂಕರ್, ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಮುಖ್ಯಸ್ಥ ರಮೇಶ್ ಬಾಬು ಅವರು ಉಪಸ್ಥಿತರಿದ್ದರು.