ಹಾಸನ: ಹಾಸನದ ಜನತೆಯೇ ನಿಮ್ಮಲ್ಲಿ ವಿನಂತಿ, ಪ್ರಜ್ವಲ್ ಗೆದ್ದರೂ- ಸೋತರೂ ಆತನನ್ನು ಒಪ್ಪಿಕೊಳ್ಳಬೇಡಿ. ಹುಚ್ಚಾಸ್ಪತ್ರೆಯಲ್ಲಿ ಇರಬೇಕಾದವನನ್ನು ಎಂಪಿ ಮಾಡಿಬಿಟ್ಟಿರಿ, ಅದರ ಪರಿಣಾಮವೇ ಹಾಸನದ ಹೆಣ್ಣುಮಕ್ಕಳನ್ನು ಶೋಷಣೆ ಮಾಡೋದಕ್ಕೆ ಕಾರಣವಾಗಿದೆ. ಇವತ್ತು ಇದೇ ಕಾರಣಕ್ಕೆ ಇಡೀ ಕರ್ನಾಟಕದ ಜನವೇ ಹಾಸನಕ್ಕೆ ಬರುವಂತಾಗಿದೆ ಎಂದು ಸಾಮಾಜಿಕ ಹೋರಾಟಗಾರ್ತಿ ಕೆ.ನೀಲಾ ಹೇಳಿದರು.
ಕಾಮಕಾಂಡ ನಡೆಸಿ ವಿದೇಶಕ್ಕೆ ಪರಾರಿಯಾಗಿರುವ ಸಂಸದ, ಎನ್ ಡಿಎ ಅಭ್ಯರ್ಥಿ ಪ್ರಜ್ವಲ್ ರೇವಣ್ಣನನ್ನು ಬಂಧಿಸಬೇಕು ಮತ್ತು ಸಂತ್ರಸ್ತೆಯರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿ ಹಾಸನದಲ್ಲಿ ಇಂದು ನಡೆಯುತ್ತಿರುವ ಬೃಹತ್ ಹೋರಾಟದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಬಿಜೆಪಿಯವರು ರಾಮಾಯಣ- ಮಹಾಭಾರತ ನಮ್ಮವು ಅಂತ ಹೇಳಿಕೊಳ್ತಾರೆ. ಇಂತಹ ಸಂದರ್ಭದಲ್ಲಿ ಮಹಾಭಾರತದ ದ್ರೌಪದಿ ಕತೆಯನ್ನ ನೆನಪು ಮಾಡುವೆ. ಆಕೆಯ ವಸ್ತ್ರವನ್ನು ಸೆಳೆದಾಗ ಆಕೆಯ ಐವರು ಗಂಡಂದಿರು ಸಹಾಯಕ್ಕೆ ಬರುವುದಿಲ್ಲ. ಆಕೆ ಪ್ರತಿಜ್ಞೆ ಮಾಡಿದಂತೆ ದುಶ್ಯಾಸನನ ತೊಡೆ ಸೀಳಿ ಆ ರಕ್ತದಿಂದ ಮುಡಿಕಟ್ಟಿದಳು. ಪ್ರಜ್ವಲ ನೀನು ನನ್ನ ಮೊಮ್ಮಗನ ವಯಸ್ಸಿನವನು. 4ನೇ ತಾರೀಖಿನ ನಂತರ ಗೆದ್ದಬಿಡಬಹುದು ಎಂಬ ಅಹಂಕಾರ ನಿನಗಿದ್ರೆ ಎಚ್ಚರಿಕೆ, ನಿನ್ನ ಅಟ್ಟಹಾಸಕ್ಕೆ ಕೊನೆಯಿದೆ. ಹೆಣ್ಣುಮಕ್ಕಳನ್ನು ಅಸಹಾಯಕತೆಯ ಖೆಡ್ಡಾಗೆ ತೋಡಿ ವಿಡಿಯೋ ಮಾಡಿ ಅವರ ಘನತೆಯನ್ನು ಉಲ್ಲಂಘಿಸಲಾಗಿದೆ ಎಂದು ಅವರು ನುಡಿದರು.
ದೇಶದ ಪ್ರಧಾನಿ ನಾನು ಜೈವಿಕವಾಗಿ ಹುಟ್ಟಿಲ್ಲ, ದೇವರು ಕಳಿಸಿದ್ದಾನೆ ಅಂತಾರೆ. ಆದರೆ, ಈಗ ಹೇಳ್ತಾ ಇದೀನಿ ಈ ದೇಶದ ಪ್ರಧಾನಿ ತಾಯಿದ್ರೋಹಿ. ರಕ್ತ ಸುರಿಸಿ ಜನ್ಮ ಕೊಡುವವಳನ್ನು ತಾಯಿ ಅಲ್ಲ ಎಂದು ಹೇಳುವವರಿಗೆ ನಾಚಿಕೆಯಾಗಬೇಕು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಹಾಸನದ ಡಿಸಿ, ಎಸ್ಪಿ ನೀವು ಮಹಿಳೆಯಾಗಿದ್ದುಕೊಂಡು ನೀವು ತಪ್ಪು ಮಾಡಿದ್ದೀರಿ, ನೀವು ಕೂಡ ತಪ್ಪಿತಸ್ಥರೆ… ಆ ವಿಡಿಯೋಗಳು ಹೆಚ್ಚಿನ ಪ್ರಮಾಣದಲ್ಲಿ ಹರಡುವುದನ್ನು ತಡೆಯುವುದರಲ್ಲಿ ನೀವುಗಳು ವಿಫಲವಾಗಿದ್ದೀರಿ ಎಂದು ಅವರು ಟೀಕಿಸಿದರು.
ಸಂತ್ರಸ್ತ ಮಹಿಳೆ ಅನ್ನಬೇಡಿ, ಆ ಪದವನ್ನು ಕಿತ್ತಾಕಿ. ತೊಂದರೆಗೆ ಒಳಗಾದ ಮಹಿಳೆಯರ ಜತೆ ನಾವಿದ್ದೇವೆ ಎಂದು ಹೇಳುವುದಕ್ಕೆ ನಾವಿಲ್ಲಿ ಬಂದಿದ್ದೀವಿ. ಈ ಸರ್ಕಾರ ಮಹಿಳೆಯರನ್ನು ರಕ್ಷಿಸಬೇಕು ಎಂದು ಅವರು ಹೇಳಿದರು.
ಬಿಜೆಪಿಯವರು ನೇಹಾ ಪ್ರಕರಣಕ್ಕೆ ಕೋಮು ಬಣ್ಣ ಬಳಿದರು. ಹಾಸನಕ್ಕೆ ಬಂದು ಅತ್ಯಾಚಾರಿ ಪ್ರಜ್ವಲನಿಗೆ ಮತ ಹಾಕಿ ಎಂದು ಕೇಳಿದರಿ. ಪ್ರಧಾನಿ ಮೋದಿ, ಶೋಭಕ್ಕ, ಅಮಿತ್ ಶಾ ಎಲ್ಲರೂ ಎಲ್ಲಿದ್ದೀರಿ? ಹಾಸನಕ್ಕೆ ಕಾಂಗ್ರೆಸ್, ಬಿಜೆಪಿ- ಜೆಡಿಎಸ್ ಮೂರು ಪಕ್ಷದವರು ಯಾರು ಒಳ್ಳೆಯದನ್ನು ಮಾಡಿಲ್ಲ. ಹಾಸನದ ಜನತೆಯ ಬದುಕಲ್ಲಿ ಆಟ ಆಡಿದ್ದಾರೆ ಎಂದು ಅವರು ಹೇಳಿದರು.