ಪ್ರಜ್ವಲ್‌ ಪ್ರಕರಣ | ಪಿತೃಪ್ರಧಾನ ರಾಜಕಾರಣದ ಅಟ್ಟಹಾಸ

Most read

ಭಯೋತ್ಪಾದಕ ಕೃತ್ಯಗಳಲ್ಲಿ ಆರೋಪಿ ಪ್ರಪಂಚದ ಯಾವುದೇ ಮೂಲೆಯಲ್ಲಿ ಅವಿತು ಕುಳಿತಿದ್ದರೂ ಹುಡುಕಿ, ಮನೆಯೊಳಗೆ ನುಗ್ಗಿ ಹೊಡೆಯುವ ಶಕ್ತಿ ಇರುವ ಒಂದು ಆಡಳಿತ ವ್ಯವಸ್ಥೆಗೆ, ನೂರಾರು ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಎಸಗಿರುವ ವ್ಯಕ್ತಿಯನ್ನು ಗುರುತಿಸಲಾಗುವುದಿಲ್ಲವೇ?  ವಿದೇಶಕ್ಕೆ ಪರಾರಿಯಾಗಿರುವ ಆರೋಪಿಯನ್ನು ರಾಜತಾಂತ್ರಿಕ ಮಾರ್ಗಗಳ ಮೂಲಕ ಹಿಡಿದು ತರುವ ಜವಾಬ್ದಾರಿ ಕೇಂದ್ರ ಸರ್ಕಾರದ್ದೇ ಅಲ್ಲವೇ?-ನಾ ದಿವಾಕರ, ಚಿಂತಕರು.

2024 ರ ಅತ್ಯಾಧುನಿಕ ಸಮಾಜವೊಂದು ತನ್ನೆಲ್ಲಾ ಔನ್ನತ್ಯಗಳ ಹೊರತಾಗಿಯೂ ತನ್ನೊಳಗೆ ಅವಶ್ಯವಾಗಿ ಇರಬೇಕಿದ್ದ ಮನುಜ-ಲಿಂಗ ಸೂಕ್ಷ್ಮತೆಯನ್ನು ಕಳೆದುಕೊಂಡಿರುವುದು ಹಾಸನದ ಸಾಮೂಹಿಕ ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ.  ಚುನಾಯಿತ ಸರ್ಕಾರಗಳ ದೃಷ್ಟಿಯಲ್ಲಿ ಮಹಿಳೆ ಎಂತಹ ಪಾಶವೀ ಕ್ರೌರ್ಯಕ್ಕೆ ಬಲಿಯಾದರೂ ಅದು ಕೇವಲ ಕಾನೂನು ಸುವ್ಯವಸ್ಥೆಯ ʼಸಮಸ್ಯೆʼ ಆಗಿಬಿಡುತ್ತದೆ. ಚುನಾವಣಾ ರಾಜಕಾರಣದಲ್ಲಿ ಶೋಷಿತ-ಮುಂದುವರೆದ ಮಹಿಳಾ ಸಮುದಾಯ ಎದುರಿಸುವ ಪುರುಷಾಧಿಪತ್ಯದ ಚಿತ್ರಹಿಂಸೆ ಎಲ್ಲವೂ ಮಾರುಕಟ್ಟೆಯ ಸರಕುಗಳಂತೆ ಕಾಣುತ್ತವೆ. ಸಂಪ್ರದಾಯವಾದಿ-ಸಂಸ್ಕೃತಿ ಸಂರಕ್ಷಕರಿಗೆ ಕ್ರೌರ್ಯಕ್ಕೆ ಬಲಿಯಾದ ಮಹಿಳೆಯ ಜೈವಿಕ ಅಸ್ತಿತ್ವವೂ ಸಹ ಗಣನೆಗೆ ಬಾರದೆ  ಧಾರ್ಮಿಕ ಅಸ್ಮಿತೆಗಳಲ್ಲಿ ಮಾತ್ರ ಕಾಣುತ್ತದೆ. ಬಹುತೇಕ ಮಾಧ್ಯಮಗಳಿಗೆ ಈ ಪಾಶವಿ ಕೃತ್ಯಗಳ ಹಿಂದಿನ ಕ್ರೌರ್ಯಕ್ಕಿಂತಲೂ, ಅದನ್ನು ಚಿತ್ರೀಕರಿಸಿ ಹಂಚುವ ಪ್ರಕ್ರಿಯೆ, ಅರ್ಥಾತ್‌ ಪೆನ್‌ಡ್ರೈವ್‌, ರೋಚಕವಾಗಿ-ರಂಜನೀಯವಾಗಿ ಲಾಭದಾಯಕ ಕಚ್ಚಾವಸ್ತುಗಳಾಗಿ ಕಾಣುತ್ತವೆ.

ಇದು ನಮ್ಮ ನಾಗರಿಕತೆಯನ್ನು ಹೊದ್ದಿರುವ ಆಧುನಿಕ ಸಮಾಜದ ಒಂದು ಚಿತ್ರಣ. ವಿಶಾಲ ಸಮಾಜದ ಹಿತವಲಯದ ನಡುವೆ, ಐಷಾರಾಮಿ ಬದುಕಿನ ಗಗನಚುಂಬಿ ಸಮುಚ್ಛಯಗಳಲ್ಲಿ ವಾಸಿಸುವವರಿಗೆ ಈ ಪ್ರಕರಣಗಳು ಒಂದು ವಿಷಯವೇ ಅಲ್ಲ.  ಕೇಂದ್ರ ಸರ್ಕಾರದ ದೃಷ್ಟಿಯಲ್ಲಿ ಇದು ರಾಜ್ಯ ಸರ್ಕಾರದ ಹೊಣೆ, ಕಾನೂನು ಸುವ್ಯವಸ್ಥೆಯ ವೈಫಲ್ಯ ಇತ್ಯಾದಿ. ರಾಜ್ಯ ಕಾಂಗ್ರೆಸ್ ಸರ್ಕಾರದ ದೃಷ್ಟಿಯಲ್ಲಿ ವಿರೋಧ ಪಕ್ಷವನ್ನು ಮಣಿಸಲು, ಒಕ್ಕಲಿಗ ಮತಬ್ಯಾಂಕ್‌ ಬಳಸಿಕೊಳ್ಳುವ ಒಂದು ಸದಾವಕಾಶ. ಧರ್ಮ, ಸಂಸ್ಕೃತಿ, ಪರಂಪರೆ ಮುಂತಾದ ಔದಾತ್ಯದ ಬೌದ್ಧಿಕ ಪಂಡಿತರಿಗೆ ಜಾಣ ಮೌನಕ್ಕೆ ಕಾರಣವಾಗುವ ಒಂದು ಸಾಧಾರಣ ಘಟನೆ.  ವಿದ್ಯುನ್ಮಾನ ಸುದ್ದಿಮನೆಗಳಿಗೆ ಇದು ಟಿಆರ್‌ಪಿ ಹೆಚ್ಚಿಸುವ ಮಾರುಕಟ್ಟೆ ಸರಕು ಮಾತ್ರ.

ಈ ವಿಕೃತಿಗಳ ನಡುವೆಯೇ ನಮ್ಮನ್ನು ಕಾಡಬೇಕಿರುವುದು ವಿಶಾಲ ಸಮಾಜದ ನಿಷ್ಕ್ರಿಯತೆ ಮತ್ತು ಅಸೂಕ್ಷ್ಮತೆ.  ಲೇಖಕಿ, ಮಹಿಳಾ ಹೋರಾಟಗಾರರಾದ ರೂಪ ಹಾಸನ ಅವರ ಮನದಾಳದ ಈ ಅಭಿವ್ಯಕ್ತಿ ಇಡೀ ನಾಡಿನ ಮಹಿಳಾ ಸಂಕುಲದ ಆಂತರ್ಯದ ನೋವು-ಯಾತನೆ-ಆಕ್ರೋಶಗಳನ್ನು ಒಮ್ಮೆಲೆ ಹೊರಸೂಸುವಂತಿದೆ-

“ಇದು ಕೇವಲ ಲೈಂಗಿಕ ಹಗರಣ ಅಲ್ಲ. ಘನಘೋರ ಲೈಂಗಿಕ ಹತ್ಯಾಕಾಂಡ! ತನ್ಮೂಲಕ ತಮ್ಮ ಮಾನ ಪ್ರಾಣ ಬದುಕನ್ನು ಪಣಕ್ಕಿಡಬೇಕಾಗಿ ಬಂದ ನೂರಾರು ಹೆಣ್ಮಕ್ಕಳ ತೀವ್ರ ನೋವು, ಸಂಕಟದ ತಳಪಾಯದ ಮೇಲೆ ತಮ್ಮ ಕೀಳು ಹಾಗೂ ಅಸಹ್ಯಕರ ಆಟಗಳ ಮೂಲಕ ಗಂಡಾಳ್ವಿಕೆಯ ರಾಜಕೀಯದ ಭವ್ಯ ಮಹಲನ್ನು ಕಟ್ಟಿಕೊಳ್ಳ ಹೊರಟಿರುವ ಪ್ರತಿಯೊಂದು ಪಕ್ಷವೂ ಹೆಣ್ಣು ಸಂಕುಲಕ್ಕೆಸಗಿರುವ ಅಕ್ಷಮ್ಯ ಅಪರಾಧವಿದು! ಇದು ಏಳ್ಗೆಯಲ್ಲ, ವಿನಾಶದ ಹಾದಿ!ರೂಪ ಹಾಸನ 

ಸಾಮಾಜಿಕ ಜೀವಪರ ಕಳಕಳಿ ಮತ್ತು ಕಾಳಜಿ ಇರುವ ಯಾವುದೇ ಮನುಷ್ಯ ಜೀವಿಯನ್ನು ಈ ಮಾತುಗಳು ಇರಿಯಲೇ ಬೇಕಲ್ಲವೇ? ಏಕೆ ಇರಿಯುತ್ತಿಲ್ಲ?. ಹಾಸನದ ಸಾಮೂಹಿಕ ಲೈಂಗಿಕ ದೌರ್ಜನ್ಯದ ಸುತ್ತ ನಡೆಯುತ್ತಿರುವ ಸಂಕಥನಗಳನ್ನು ಗಮನಿಸಿದರೆ ಮುಖ್ಯವಾಗಿ ಕಾಣುತ್ತಿರುವುದು ನೊಂದ ಮಹಿಳೆಯೂ ಅಲ್ಲ, ಪುರುಷಾಹಮಿಕೆಗೆ ಬಲಿಯಾದ ನೂರಾರು ಹೆಣ್ಣು ಮಕ್ಕಳೂ ಅಲ್ಲ. ಬದಲಾಗಿ ಎಲ್ಲೆಡೆ ಪೆನ್‌ಡ್ರೈವ್‌ ಮತ್ತದರ ಸುತ್ತಲಿನ ವ್ಯಾಖ್ಯಾನ-ನಿರೂಪಣೆಗಳು ಕಾಣುತ್ತಿವೆ. ಈ ಸಂಕಥನಗಳಲ್ಲಿ ಸಮಾಜವು ಅಶ್ಲೀಲತೆಯನ್ನು, ಅಸಭ್ಯತೆಯನ್ನು ಶೋಧಿಸುತ್ತಿದೆ, ಕೆಲವೆಡೆ ಅನಾಗರಿಕತೆಯನ್ನೂ ಕಾಣುತ್ತಿದೆ. ಆದರೆ ಪೆನ್‌ಡ್ರೈವ್‌ ಮೂಲಕ ನೋಡುವವರಿಗೆ ಇಂತಹ ಘೋರ ಪಾಶವೀ ಕೃತ್ಯದ ಹಿಂದಿನ ಕ್ರೌರ್ಯ-ಹಿಂಸೆ ಹಾಗೂ ಅಮಾನುಷತೆ ಎಲ್ಲಿಯೂ ಪ್ರಸ್ತಾಪವಾಗುತ್ತಿಲ್ಲ.

ಮಹಿಳೆಗೆ ಒಂದು ಜೈವಿಕ ಅಸ್ತಿತ್ವ ಇದೆ ಎನ್ನುವುದನ್ನೇ ನಮ್ಮ ಪಿತೃಪ್ರಧಾನ ಸಮಾಜ ಮರೆತಂತಿದೆ. ಏಕೆಂದರೆ ಪ್ರಧಾನಮಂತ್ರಿ ಆದಿಯಾಗಿ ಪ್ರತಿಯೊಬ್ಬ ರಾಜಕಾರಣಿಯೂ ಮಹಿಳೆ ಎಂಬ ಜೀವಿಯನ್ನು ಮಾಂಗಲ್ಯ ಅಥವಾ ಮಂಗಳ ಸೂತ್ರದ ಮುಖೇನ ನೋಡಲಾರಂಭಿಸಿದ್ದಾರೆ. ಮಾಂಗಲ್ಯ ಎನ್ನುವುದು ಭಾರತದ ವೈದಿಕಶಾಹಿ-ಸಾಂಪ್ರದಾಯಿಕ ಸಮಾಜ ಮಹಿಳೆಯನ್ನು ನಿರ್ಬಂಧಿಸಲು ವಿಧಿಸಿರುವ ಒಂದು ಸಂಕೋಲೆ-ಸಾಧನ ಮಾತ್ರ ಅಲ್ಲವೇ ? ಮಾಂಗಲ್ಯ ಧರಿಸದ ಮಹಿಳೆಗೆ ಅಸ್ತಿತ್ವವೇ ಇಲ್ಲವೇ ? ಮಾಂಗಲ್ಯ ಧರಿಸುವ ವಯಸ್ಸನ್ನೂ ತಲುಪದ ಲಕ್ಷಾಂತರ ಅಪ್ರಾಪ್ತೆಯರ ಅಸ್ತಿತ್ವವೇನು ? ಲೈಂಗಿಕ ದೌರ್ಜನ್ಯಕ್ಕೆ ತುತ್ತಾದ ಈ ಅಪ್ರಾಪ್ತೆಯರು ಕಳೆದುಕೊಳ್ಳುವುದು ಏನನ್ನು ? ಪುರುಷ ಸಮಾಜದ ಪರಿಭಾಷೆಯಲ್ಲಿ ಬಳಸುವ ಅದೇ ಶೀಲ, ಮಾನ ಇತ್ಯಾದಿಗಳೇ ? ಮಹಿಳೆಯ ಜೈವಿಕ ಅಸ್ತಿತ್ವವನ್ನು ಆಕೆ ಧರಿಸುವ ಚಿಹ್ನೆ ಲಾಂಛನಗಳ ಮುಖಾಂತರ ನೋಡುವ ಪಿತೃಪ್ರಧಾನ ದೃಷ್ಟಿಕೋನವೇ ಸಾಮಾಜಿಕ-ಸಾಂಸ್ಕೃತಿಕ ಪರಿಭಾಷೆಯನ್ನೂ ಹುಟ್ಟುಹಾಕುತ್ತವೆ.

ಆದರೆ ಪುರುಷಾಧಿಪತ್ಯ ಮತ್ತು ಊಳಿಗಮಾನ್ಯ ಧೋರಣೆಯ ಸಮಾಜವೊಂದು ಮಹಿಳೆಯ ಬದುಕುವ ಹಕ್ಕಿನ ಮೇಲೆ, ಹೆಣ್ತನದ ಘನತೆಯ ಮೇಲೆ, ಹೆಣ್ಣಿನ ಜೈವಿಕ ಅಸ್ತಿತ್ವದ ಮೇಲೆ ನಡೆಸುತ್ತಿರುವ ದರ್ಪ, ದಬ್ಬಾಳಿಕೆ, ದೌರ್ಜನ್ಯಗಳು ನಮ್ಮ ಸಾಮಾಜಿಕ-ಸಾರ್ವಜನಿಕ ಪ್ರಜ್ಞೆಯನ್ನು ಕದಡುತ್ತಲೇ ಇಲ್ಲ.  ರಾಜಕೀಯ ಸಂಕಥನಗಳಲ್ಲಿ, ಮಾಧ್ಯಮ ಚರ್ಚೆಗಳಲ್ಲಿ ಪೆನ್‌ಡ್ರೈವ್‌ ಹಂಚಿದವರನ್ನೇ ಕೇಂದ್ರ ಬಿಂದುವಾಗಿ ಚರ್ಚಿಸುವುದರಿಂದ, ಇಂತಹ ಪಾಶವೀ ಕೃತ್ಯ ಎಸಗಿದವರ ಅಮಾನುಷತೆಯಾಗಲೀ, ಇದನ್ನು ಅನುವು ಮಾಡಿಕೊಟ್ಟ ನಾಗರಿಕ ಸಮಾಜವಾಗಲೀ, ಇದಕ್ಕೆ ಕವಲುಹಾದಿಗಳನ್ನು ಸೃಷ್ಟಿಸಿದ ರಾಜಕೀಯ-ಆಡಳಿತ ವ್ಯವಸ್ಥೆಯಾಗಲೀ ಚರ್ಚೆಗೆ ಬರುತ್ತಲೇ ಇಲ್ಲ. ಪೆನ್‌ಡ್ರೈವ್‌ಗಳೆಲ್ಲವೂ ಕಾಂಗ್ರೆಸ್‌-ಜೆಡಿಎಸ್‌ ಹೊಂದಾಣಿಕೆ ಮಾಡಿಕೊಂಡಿದ್ದ ಅವಧಿಯಲ್ಲಿ ಚಿತ್ರಿತವಾಗಿರುವುದರಿಂದ ರಾಜ್ಯ ಸರ್ಕಾರವೇ ಇದರ ಹೊಣೆ ಹೊರಬೇಕು ಎನ್ನುವ ಅರ್ಥದಲ್ಲಿ ಪ್ರಧಾನಿ ಮೋದಿ ಸಹ ಮಾತನಾಡಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರೂ ಸಹ ಇದೇ ಅರ್ಥಸೂಸುವ ಮಾತುಗಳನ್ನಾಡಿದ್ದಾರೆ.

ಪ್ರಜ್ಡಲ್‌ ವಿರುದ್ಧ ಮಹಿಳೆಯರ ಪ್ರತಿಭಟನೆ

ಹಾಸನದಲ್ಲಿ ದೌರ್ಜನ್ಯಕ್ಕೊಳಗಾಗಿರುವ ನೂರಾರು ಮಹಿಳೆಯರ ಅಸ್ತಿತ್ವಕ್ಕಿಂತಲೂ, ವಿದ್ಯುನ್ಮಾನ Gadget ಒಂದರ ಹಂಚಿಕೆ ಮತ್ತು ವಿತರಣೆಯೇ ಪ್ರಧಾನವಾಗಿದೆ. ಈ ಪೆನ್‌ಡ್ರೈವ್‌ ಹಂಚಿಕೆಯಿಂದ “ ಮಹಿಳೆಯ ಮಾನ ಹರಾಜಾಗುತ್ತಿದೆ ”, “ ಮಹಿಳೆಯ ಶೀಲಕ್ಕೆ ಧಕ್ಕೆ ಉಂಟಾಗುತ್ತಿದೆ ” ಎಂದೆಲ್ಲಾ ಬಿಂಬಿಸುವ ಪ್ರಯತ್ನಗಳು ಇಡೀ ಸಮಾಜದ ಅಸೂಕ್ಷ್ಮತೆಯ ಸಂಕೇತವಾಗಿಯೇ ಕಾಣುತ್ತದೆ. “ಮಾನ, ಮನೆ, ಮಾಂಗಲ್ಯ ದೋಚಲಾಗಿದೆ, ಸಂತ್ರಸ್ತ ಮಹಿಳೆಯರ ಮಾನಹರಣವಾಗಿದೆ, ನೂರಾರು ಹಿಂದೂ ಮಹಿಳೆಯರ ಮಾಂಗಲ್ಯಹರಣವಾಗಿದೆ” ಎಂದು ವ್ಯಾಖ್ಯಾನಿಸುವ ಮೂಲಕ, ತಪ್ಪಿತಸ್ಥರಿಗೆ ಶಿಕ್ಷೆ ನೀಡುವ ಭರವಸೆ ನೀಡುತ್ತಲೇ, ಹಾಸನದಲ್ಲಿ ಘಾಸಿಗೊಳಗಾಗಿರುವ ಹೆಣ್ತನದ ಘನತೆಯ ಬಗ್ಗೆ, ನೊಂದ ಮಹಿಳೆಯರ ವ್ಯಕ್ತಿಗತ ಘನತೆ ಮತ್ತು ನೆಮ್ಮದಿಯ ಬದುಕಿನ ಹಕ್ಕಿನ ಬಗ್ಗೆ ಚಕಾರವೆತ್ತದೆ ಇರುವುದು ಆಡಳಿತಾರೂಢ ಕಾಂಗ್ರೆಸ್‌ ಪಕ್ಷದ ಲಿಂಗ ಸೂಕ್ಷ್ಮತೆಯ ಕೊರತೆಯನ್ನು ಎತ್ತಿ ತೋರಿಸುತ್ತದೆ.

ಹಾಸನದಲ್ಲಿ ನಡೆದಿರುವ ಪೈಶಾಚಿಕ ಕೃತ್ಯಗಳಲ್ಲಿ, ಸಾಮೂಹಿಕ ಲೈಂಗಿಕ ದೌರ್ಜನ್ಯಗಳಲ್ಲಿ ಮಾನ ಮರ್ಯಾದೆ ಕಳೆದು ಕೊಂಡಿರುವುದು, ಗೌರವಕ್ಕೆ ಧಕ್ಕೆ ತಂದುಕೊಂಡಿರುವುದು ನಮ್ಮ ಪಿತೃಪ್ರಧಾನ ಗಂಡಾಳ್ವಿಕೆಯ ಸಮಾಜ ಮತ್ತು ಅದರಿಂದಲೇ ನಿರ್ದೇಶಿಲ್ಪಡುವ ಆಳ್ವಿಕೆಯ ಕೇಂದ್ರಗಳು. ನಾಚಿ ತಲೆ ತಗ್ಗಿಸಬೇಕಿರುವುದೂ ಈ ಸಮಾಜವೇ. ಅತ್ಯಾಧುನಿಕ ತಂತ್ರಜ್ಞಾನದ ಕಣ್ಗಾವಲಿನ ಯುಗದಲ್ಲೂ ಸಹ ಆರೋಪಿ ಎಲ್ಲಿರುವನೋ ತಿಳಿಯುತ್ತಿಲ್ಲ ಎಂದು ಹೇಳುವ ಗೃಹ ಸಚಿವಾಲಯಕ್ಕೆ ಏನು ಹೇಳಬೇಕು ? ಆರೋಪಿಯನ್ನು ಗುರುತುಹಚ್ಚಿ ಬಂಧಿಸಲು ಕೇಂದ್ರ ಸರ್ಕಾರ ನೆರವಾಗಬಹುದಲ್ಲವೇ ? ಕಾನೂನು ದೃಷ್ಟಿಯಲ್ಲಿ ರಾಜ್ಯ ಸರ್ಕಾರದ ಜವಾಬ್ದಾರಿಯಾದರೂ, ಮಾನವೀಯ ನೆಲೆಯಲ್ಲಿ, ಸಂವೇದನಾತ್ಮಕವಾಗಿ ನೋಡಿದಾಗ ಇದು ಒಟ್ಟು ಆಳ್ವಿಕೆಯ ನೈತಿಕ ಜವಾಬ್ದಾರಿ ಅಲ್ಲವೆ? ಭಯೋತ್ಪಾದಕ ಕೃತ್ಯಗಳಲ್ಲಿ ಆರೋಪಿ ಪ್ರಪಂಚದ ಯಾವುದೇ ಮೂಲೆಯಲ್ಲಿ ಅವಿತು ಕುಳಿತಿದ್ದರೂ ಹುಡುಕಿ, ಮನೆಯೊಳಗೆ ನುಗ್ಗಿ ಹೊಡೆಯುವ ಶಕ್ತಿ ಇರುವ ಒಂದು ಆಡಳಿತ ವ್ಯವಸ್ಥೆಗೆ, ನೂರಾರು ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಎಸಗಿರುವ ವ್ಯಕ್ತಿಯನ್ನು ಗುರುತಿಸಲಾಗುವುದಿಲ್ಲವೇ?  ವಿದೇಶಕ್ಕೆ ಪರಾರಿಯಾಗಿರುವ ಆರೋಪಿಯನ್ನು ರಾಜತಾಂತ್ರಿಕ ಮಾರ್ಗಗಳ ಮೂಲಕ ಹಿಡಿದು ತರುವ ಜವಾಬ್ದಾರಿ ಕೇಂದ್ರ ಸರ್ಕಾರದ್ದೇ ಅಲ್ಲವೇ ?

ಇದನ್ನೂ ಓದಿ- ಪ್ರಜ್ವಲ್ ಈಗ ಶಿಶ್ನ ಗೊಂಚಲಿನ ಬೇತಾಳ !

ಈ ಪ್ರಶ್ನೆಗಳಿಗೆ ಉತ್ತರಿಸಲಾಗದ ಒಂದು ಆಳ್ವಿಕೆಯು ಪೆನ್‌ಡ್ರೈವ್‌ ಸುತ್ತಲೂ ಗಿರಕಿ ಹೊಡೆಯುತ್ತಿರುವುದು ಸ್ಥಾಪಿತ ಸಾಮಾಜಿಕ ಮೌಲ್ಯಗಳನ್ನು ರಕ್ಷಿಸುವ ಒಂದು ವಿಧಾನವಾಗಿ ಕಾಣುತ್ತದೆ. ಅಪರಾಧಗಳನ್ನು ಗುರುತಿಸಲು ಬೇಕಾದ ಒಳನೋಟ-ಕಣ್ಣೋಟ-ಮುನ್ನೋಟ ಎಲ್ಲವನ್ನೂ ಕಳೆದುಕೊಂಡಿರುವ ಒಂದು ವ್ಯವಸ್ಥೆಯಲ್ಲಷ್ಟೇ ಇದು ಸಂಭವಿಸಲು ಸಾಧ್ಯ. ಇದು ವ್ಯವಸ್ಥಿತವಾಗಿರಲು ಕಾರಣವೆಂದರೆ ಅಲ್ಲಿ ಘಾಸಿಗೊಳಗಾಗಿರುವುದು ʼ ಮಹಿಳೆ ʼ. ಆರೋಪ-ಅಪರಾಧ-ಸಂತ್ರಸ್ತರ ಸಾಲಿನಲ್ಲಿ ಈ ಕ್ಷುದ್ರ ರಾಜಕೀಯ ವ್ಯವಸ್ಥೆಗೆ ಬೇಕಾದ ಮತೀಯ, ಜಾತೀಯ, ಪ್ರಾದೇಶಿಕ, ಧಾರ್ಮಿಕ ಅಸ್ಮಿತೆಗಳನ್ನು ಗುರುತಿಸಲು ಅಧಿಕಾರ ರಾಜಕಾರಣಕ್ಕೆ ಸಾಧ್ಯವಾಗುತ್ತಿಲ್ಲ. ಹಾಗಾಗಿಯೇ ಬಹುಸಂಖ್ಯಾತರಲ್ಲೂ ಸ್ವಾಭಿಮಾನದ ಕಿಚ್ಚು ಕೆರಳುತ್ತಿಲ್ಲ. ರಾಜಕೀಯ ಅಧಿಕಾರಕ್ಕಾಗಿ ಕಂಡಕಂಡಲ್ಲಿ ಕಣ್ಣೀರು ಗರೆಯುವ ರಾಜಕಾರಣಿಗಳ ಕಣ್ಣಲ್ಲಿ ಈ ದೌರ್ಜನ್ಯಕ್ಕೀಡಾದ ಮಹಿಳೆಯರ ಬಗ್ಗೆ ಒಂದು ಹನಿಯೂ ಮೂಡುವುದಿಲ್ಲ.  ಇದು ನಮ್ಮ ನಾಗರಿಕ ಜಗತ್ತಿನ ದುರಂತ ಅಲ್ಲವೇ ?

ನಾ.ದಿವಾಕರ

ಚಿಂತಕರು

ಇದನ್ನೂ ಓದಿ- ʻರೇವಣ್ಣ ರಿಪಬ್ಲಿಕ್‌ʼನ ದೌರ್ಜನ್ಯಗಳ ಕಥೆಗಳು: ದಿ ಪ್ರಿಂಟ್‌ ತೆರೆದಿಟ್ಟ ಮೈ ಜುಮ್ಮೆನಿಸುವ ಭಯಾನಕ ಕ್ರೌರ್ಯಗಳು

More articles

Latest article