ಅಧಿಕಾರ ಹಸ್ತಾಂತರ; ಯಾವುದೇ ಒಪ್ಪಂದ ಆಗಿಲ್ಲ: ಸಿಎಂ ಸಿದ್ದರಾಮಯ್ಯ

Most read

ಮಂಡ್ಯ: ಅಧಿಕಾರ ಹಸ್ತಾಂತರ ಕುರಿತು ಒಪ್ಪಂದ ಆಗಿದೆ ಎಂಬ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು,  ನಮ್ಮ ನಡುವೆ ಯಾವ ಒಪ್ಪಂದ ಆಗಿಲ್ಲ. ಆದರೆ ಹೈಕಮಾಂಡ್ ಮಾತಿನಂತೆ ನಡೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

ಅಧಿಕಾರ ಹಂಚಿಕೆ ಕುರಿತು  ನಮ್ಮ ನಡುವೆ ಒಪ್ಪಂದವಾಗಿರುವುದು ನಿಜ. ಸಮಯ ಬಂದಾಗ ಆ ಬಗ್ಗೆ ಮಾತನಾಡುವೆ ಎಂದು ಶಿವಕುಮಾರ್ ಇತ್ತೀಚೆಗೆ ಹೇಳಿಕೆ ನೀಡಿದ್ದರು. ಶಿವಕುಮಾರ್‌ ಅವರ ಪ್ರತಿಕ್ರಿಯೆ ಚರ್ಚೆಗೆ ಗ್ರಾಸವೊದಗಿಸಿತ್ತು. ಈ ಹೇಳಿಕೆ ಕುರಿತು ಮುಖ್ಯಮಂತ್ರಿಗಳು ಬೇರೆಯದ್ದೇ ಆದ ರೀತಿಯಲ್ಲಿ ಹೇಳಿಕೆ ನೀಡಿದ್ದಾರೆ. ಮಂಡ್ಯ ಜಿಲ್ಲೆಯ ಕೆಆರ್ ಪೇಟೆ ತಾಲೂಕಿನ ಬಂಡಬೋಯಿನಹಳ್ಳಿಯಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು ಹೈಕಮಾಂಡ್ ತೀರ್ಮಾನದಂತೆ ನಾವು ನಡೆದುಕೊಳ್ಳುತ್ತೇವೆ. ನಮ್ಮ ಮಧ್ಯೆ ಯಾವ ಒಪ್ಪಂದವೂ ಆಗಿಲ್ಲ ಎಂದರು.

ಖಾಸಗಿ ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದ ಶಿವಕುಮಾರ್, ಕರ್ನಾಟಕದಲ್ಲಿ ಸದ್ಯಕ್ಕೆ ಮುಖ್ಯಮಂತ್ರಿ ಕುರ್ಚಿ ಖಾಲಿ ಇಲ್ಲ. ಅಧಿಕಾರ ಹಂಚಿಕೆಗೆ ಸಂಬಂಧಿಸಿ ನಮ್ಮ ನಡುವೆ ಒಪ್ಪಂದವಾಗಿರುವುದು ನಿಜ. ಸಮಯ ಬಂದಾಗ ಆ ಬಗ್ಗೆ ಬಹಿರಂಗಪಡಿಸುವೆ ಎಂದು ಹೇಳಿದ್ದರು. ನಾನೀಗ ಉಪ ಮುಖ್ಯಮಂತ್ರಿ ಮಾತ್ರ.  ಮುಖ್ಯಮಂತ್ರಿ ಹುದ್ದೆ ಬಗ್ಗೆ ಈಗ ಮಾತನಾಡುವುದಿಲ್ಲ. ರಾಜ್ಯದ ಹಿತಕ್ಕಾಗಿ ಸಿದ್ದರಾಮಯ್ಯ ಹಾಗೂ ನಾನು ಜತೆಯಾಗಿ ಕೆಲಸ ಮಾಡುತ್ತಿದ್ದೇವೆ. ನಮ್ಮ ಮಧ್ಯೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಹೇಳೀದ್ದರು.

ನಾಳೆ ಹಾಸನದಲ್ಲಿ ಕಾಂಗ್ರೆಸ್ ಪಕ್ಷ, ಸ್ವಾಭಿಮಾನಿ ಒಕ್ಕೂಟದ ವತಿಯಿಂದ ಸಮಾವೇಶ ನಡೆಯುತ್ತದೆ. ಸಮಾವೇಶದ ಹೆಸರಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಸಮಾವೇಶಕ್ಕೆ ಜನರನ್ನು ಕರೆತರುವ ಕೆಲಸವನ್ನು ಸ್ವಾಭಿಮಾನಿ ಒಕ್ಕೂಟದವರು ಮಾಡುತ್ತಾರೆ. ಸ್ವಾಭಿಮಾನಿ ಒಕ್ಕೂಟ, ಕಾಂಗ್ರೆಸ್​​ ಎರಡೂ ಸೇರಿ ಸಮಾವೇಶ ನಡೆಸುತ್ತಿವೆ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

More articles

Latest article