ಬೆಂಗಳೂರು: ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಹೇಳದ ವಿಷಯವನ್ನು ಸೃಷ್ಟಿಸಿ ಸಮಾಜದಲ್ಲಿ ಅಶಾಂತಿ ಮೂಡಿಸಲು ಯತ್ನಿಸಿದ ಪೋಸ್ಟ್ ಕಾರ್ಡ್ ಮಹೇಶ್ ಹೆಗಡೆ ಜಾಮೀನು ಅರ್ಜಿಯನ್ನು ನ್ಯಾಯಾಲಯ ಮತ್ತೆ ತಿರಸ್ಕರಿಸಿದ್ದು, ಆತನ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.
ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದ ಮಹೇಶ್ ಹೆಗಡೆಯ ಮನವಿಯನ್ನು 56ನೇ ಹೆಚ್ಚುವರಿ ಸಿವಿಲ್ ಅಂಡ್ ಸೆಷನ್ಸ್ ಕೋರ್ಟ್ ಇಂದು ತಿರಸ್ಕರಿಸಿದೆ.
ಕೇಂದ್ರ CEN ಸೈಬರ್ ಠಾಣೆಯಲ್ಲಿ ಮಹೇಶ್ ಹೆಗಡೆ ವಿರುದ್ಧ FIR ದಾಖಲಿಸಲಾಗಿದ್ದು, ಈತನ ವಿರುದ್ಧ ಚುನಾವಣಾ ಆಯೋಗಕ್ಕೂ ದೂರು ನೀಡಲಾಗಿದೆ.
ಮಹೇಶ್ ಹೆಗಡೆ ಎಂಬ ಈ ವ್ಯಕ್ತಿ ಟಿವಿ ವಿಕ್ರಮ, ಪೋಸ್ಟ್ ಕಾರ್ಡ್ ಸೇರಿದಂತೆ ಹಲವಾರು ಸೋಷಿಯಲ್ ಮೀಡಿಯಾಗಳನ್ನು ನಿರ್ವಹಿಸುತ್ತಿದ್ದು, ಸಮಾಜದಲ್ಲಿ ಶಾಂತಿಯನ್ನು ಕದಡುವ, ಗಲಭೆಗಳಿಗೆ ಪ್ರಚೋದನೆ ಮಾಡುವ ಕಾರ್ಯ ನಡೆಸುತ್ತ ಬಂದಿದ್ದಾನೆ. ಈತನನ್ನು ಬಂಧಿಸಿ ವಿಚಾರಣೆ ನಡೆಸುವುದು ಅಗತ್ಯವಾಗಿದೆ ಎಂದು ಸರ್ಕಾರಿ ಅಭಿಯೋಜಕರು ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡರು. ವಾದವನ್ನು ಪುರಸ್ಕರಿಸಿದ ನ್ಯಾಯಾಲಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿತು.
ಮಹೇಶ್ ಹೆಗಡೆ ತಲೆಮರೆಸಿಕೊಂಡಿದ್ದು, ಪೊಲೀಸರು ಅವನ ಬಂಧನಕ್ಕೆ ಬಲೆ ಬೀಸಿದ್ದಾರೆ.