ಪೋಕ್ಸೊ ಪ್ರಕರಣ: ಆರೋಪಿ ದೋಷಮುಕ್ತಗೊಳಿಸಿದ ದೆಹಲಿ ಹೈಕೋರ್ಟ್‌

Most read

ನವದೆಹಲಿ: ಪೋಕ್ಸೊ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿದ್ದ ವ್ಯಕ್ತಿಯೊಬ್ಬನನ್ನು ದೆಹಲಿ ಹೈಕೋರ್ಟ್‌ ದೋಷಮುಕ್ತಗೊಳಿಸಿ ಆದೇಶ ಹೊರಡಿಸಿದೆ. ಬಾಲಕ ಅಥವಾ ಬಾಲಕಿಯು ದೈಹಿಕ ಸಂಬಂಧ ಎಂಬ ಪದವನ್ನು ಬಳಸಿದ್ದಾರೆ ಎಂದ ಮಾತ್ರಕ್ಕೆ, ಅದನ್ನು ಲೈಂಗಿಕ ಹಲ್ಲೆ ಎಂದು ಅರ್ಥ ಮಾಡಿಕೊಳ್ಳಬೇಕಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ನ್ಯಾಯಮೂರ್ತಿಗಳಾದ ಪ್ರತಿಭಾ ಎಂ. ಸಿಂಗ್ ಮತ್ತು ಅಮಿತ್ ಶರ್ಮ ಅವರ ವಿಭಾಗೀಯ ಪೀಠ, ಸಂತ್ರಸ್ತೆಯು ಆರೋಪಿಯ ಜೊತೆ ಸ್ವಇಚ್ಛೆಯಿಂದ ತೆರಳಿದ್ದಾಗ, ಆಕೆಯ ಮೇಲೆ ಲೈಂಗಿಕ ಹಲ್ಲೆ ನಡೆದಿದೆ ಎಂಬ ತೀರ್ಮಾನಕ್ಕೆ ವಿಚಾರಣಾ ನ್ಯಾಯಾಲಯವು ಹೇಗೆ ಬಂದಿತು ಎಂಬುದು ಸ್ಪಷ್ಟವಾಗಿಲ್ಲ ಎಂದು ಹೇಳಿದೆ.

ಈ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ವ್ಯಕ್ತಿಯು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದ. ಮೇಲ್ಮನವಿಯನ್ನು ವಿಭಾಗೀಯ ಪೀಠವು ಮಾನ್ಯ ಮಾಡಿದೆ. ದೈಹಿಕ ಸಂಬಂಧವನ್ನು ಲೈಂಗಿಕ ಹಲ್ಲೆ ಮತ್ತು ಲೈಂಗಿಕ ಸಂಪರ್ಕದ ಮೂಲಕ ನಡೆದ ಹಲ್ಲೆ ಎಂಬುದನ್ನು ಹೇಳುವಾಗ, ಅದನ್ನು ಸಾಬೀತು ಮಾಡುವ ಸಾಕ್ಷ್ಯಗಳು ಇರಬೇಕು. ಅದನ್ನು ತರ್ಕ ಅಥವಾ  ಅನುಮಾನದ ಆಧಾರದಲ್ಲಿ ತೀರ್ಮಾನಿಸಬಾರದು ಎಂದು ಪೀಠ ತಿಳಿಸಿದೆ.  ಸಂತ್ರಸ್ತೆಯು 18 ವರ್ಷಕ್ಕಿಂತ ಕಡಿಮೆ ವಯಸ್ಸಿನವಳು ಎಂಬ ಮಾತ್ರಕ್ಕೆ ಅಲ್ಲಿ ಲೈಂಗಿಕ ಸಂಪರ್ಕದ ಮೂಲಕ ಹಲ್ಲೆ ನಡೆದಿತ್ತು ಎಂಬ ತೀರ್ಮಾನಕ್ಕೆ ಬರಲು ಸಾಕಾಗುವುದಿಲ್ಲ. ಸಂತ್ರಸ್ತೆಯು ದೈಹಿಕ ಸಂಬಂಧ ಎಂಬ ಪದವನ್ನು ಬಳಸಿದ್ದಾಳೆ. ಆದರೆ ಅದರ ಅರ್ಥ ಏನು ಎಂಬುದು ಸ್ಪಷ್ಟವಾಗಿಲ್ಲ ಎಂದು ಪೀಠ ವಿವರಿಸಿದೆ.

ಯಾವತ್ತೂ ಅನುಮಾನದ ಲಾಭವನ್ನು ಆರೋಪಿಗೆ ನೀಡಬೇಕು ಎಂದೂ ಪೀಠ ಅಭಿಪ್ರಾಯಪಟ್ಟಿದೆ. ಸಂತ್ರಸ್ತ ಬಾಲಕಿಯ ತಾಯಿ ನೀಡಿದ್ದ ದೂರು ಆಧರಿಸಿ ಪ್ರಕರಣ ದಾಖಲಿಸಲಾಗಿತ್ತು. 14 ವರ್ಷ ವಯಸ್ಸಿನ ತನ್ನ ಮಗಳನ್ನು ಆಮಿಷವೊಡ್ಡಿ ಅಪಹರಿಸಲಾಗಿದೆ ಎಂದು ದೂರಿನಲ್ಲಿ ಅವರು ತಿಳಿಸಿದ್ದರು.  ನಂತರ ಸಂತ್ರಸ್ತೆಯು ಆರೋಪಿಯ ಜೊತೆಯಲ್ಲಿ ಫರೀದಾಬಾದ್‌ನಲ್ಲಿ ಪತ್ತೆಯಾಗಿದ್ದಳು. ಆರೋಪಿಯನ್ನು ಐಪಿಸಿ ಅಡಿ ಹಾಗೂ ಪೋಕ್ಸೊ ಕಾಯ್ದೆಯ ಅಡಿಯಲ್ಲಿ ಶಿಕ್ಷೆಗೆ ಗುರಿಪಡಿಸಲಾಗಿತ್ತು

More articles

Latest article