ಬೆಂಗಳೂರು: ಪೋಕ್ಸೋ ಪ್ರಕರಣದ ಆರೋಪಿ ಸಾಗರದ ವನಶ್ರೀ ಗುರುಕುಲ ಮಾದರಿ ಶಾಲೆಯ ಮುಖ್ಯಸ್ಥ ವನಶ್ರೀ ಮಂಜಪ್ಪ ಹೈಕೋರ್ಟಿನಲ್ಲಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಿ ಇಂದು ಹೈಕೋರ್ಟ್ ಏಕಸದಸ್ಯ ಪೀಠ ಆದೇಶ ಹೊರಡಿಸಿದೆ.
ವನಶ್ರೀ ಮಂಜಪ್ಪ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಮತ್ತು ದೌರ್ಜನ್ಯ ಎಸಗಿದ್ದಾನೆ ಎಂದು ಈ ವರ್ಷದ ನವಂಬರ್ 6ರಂದು ಸಾಗರ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆ ಮತ್ತು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆ ಅಡಿ ಪ್ರಕರಣ ದಾಖಲಾಗಿತ್ತು. ಆ ನಂತರ ವನಶ್ರೀ ಮಂಜಪ್ಪ ತಲೆಮರೆಸಿಕೊಂಡಿದ್ದು ಇದುವರೆಗೂ ಪೊಲೀಸರಿಗೆ ಸಿಕ್ಕಿಲ್ಲ. ಈತ ತನ್ನ ವಕೀಲರ ಮೂಲಕ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಜಿಲ್ಲಾ ನ್ಯಾಯಾಲಯದ ತಿರಸ್ಕರಿಸಿತ್ತು. ನಂತರ ಹೈಕೋರ್ಟ್ ನಲ್ಲಿ ಪುನಃ ಜಾಮೀನು ಅರ್ಜಿ ಸಲ್ಲಿಸಿದ್ದ. ಇಂದು ಈ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಏಕ ಸದಸ್ಯ ಪೀಠ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಿ ತೀರ್ಪು ನೀಡಿದೆ.
ಇದೀಗ ಆರೋಪಿ ವನಶ್ರೀ ಮಂಜಪ್ಪ ತಾನಾಗಿಯೇ ಪೊಲೀಸರಿಗೆ ಶರಣಾಗಬೇಕು ಇಲ್ಲವೇ ಪೊಲೀಸರು ಬಂಧಿಸಿ ನ್ಯಾಯಾಲಯದಲ್ಲಿ ಹಾಜರುಪಡಿಸಬೇಕಾಗಿದೆ.
ಬೆಂಗಳೂರು ಮೂಲದ ವಿದ್ಯಾರ್ಥಿನಿ ವನಶ್ರೀ ವಸತಿ ವಿದ್ಯಾಲಯದಲ್ಲಿ ದಾಖಲಾಗಿದ್ದಳು. ಈಕೆಗೆ ನಾಲ್ಕು ತಿಂಗಳು ಮಂಜಪ್ಪ ಲೈಂಗಿಕ ಕಿರುಕುಳ ನೀಡುತ್ತಿದ್ದ ಆರೋಪ ದಾಖಲಾಗಿತ್ತು. ಈ ಸಂಬಂಧ ಬಾಲಕಿಯ ಪೋಷಕರು ಮಂಜಪ್ಪ ವಿರುದ್ದ ಪೋಕ್ಸೋ ಹಾಗೂ ಪರಿಶಿಷ್ಟ ಜಾತಿ, ಪಂಗಡದ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ಪೊಲೀಸರು ಪ್ರಕರಣ ದಾಖಲಿಸಿದ್ದರು.ಕಳೆದ ವರ್ಷವೂ ವನಶ್ರೀ ಮಂಜಪ್ಪನ ಮೇಲೆ ಪೋಕ್ಸೋ ಪ್ರಕರಣ ದಾಖಲಾಗಿತ್ತು. ಆದರೆ ಆತನ ವಿರುದ್ದ ಸೂಕ್ತ ಸಾಕ್ಷಾಧಾರಗಳನ್ನು ಪೊಲೀಸರು ಹಾಜರುಪಡಿಸಲು ವಿಫಲವಾದ ಕಾರಣ ಕಾನೂನಿನ ಶಿಕ್ಷೆಯಿಂದ ಪಾರಾಗಿದ್ದನ್ನು ಇಲ್ಲಿ ಸ್ಮರಿಸಬಹುದು