ಪೊಲ್ಲಾಚಿ ಲೈಂಗಿಕ ದೌರ್ಜನ್ಯ ಪ್ರಕರಣ: ಎಲ್ಲ 9 ಮಂದಿ ತಪ್ಪಿತಸ್ಥರು: ಮಹಿಳಾ ನ್ಯಾಯಾಲಯ ಶಿಕ್ಷೆ ಪ್ರಕಟ

Most read

ಕೊಯಮತ್ತೂರು: ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಪೊಲ್ಲಾಚಿ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಬಂಧಿತರಾಗಿರುವ ಎಲ್ಲಾ 9 ಮಂದಿಯೂ ತಪ್ಪಿತಸ್ಥರು ಎಂದು ಕೊಯಮತ್ತೂರು ಮಹಿಳಾ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ. ನ್ಯಾಯಾಧೀಶೆ ಆರ್. ನಂದಿನಿ ದೇವಿ ಅವರು ಶಿಕ್ಷೆಯ ಪ್ರಮಾಣವನ್ನು ಮಧ್ಯಾಹ್ನ ಪ್ರಕಟಿಸಲಿದ್ದಾರೆ.
ಆರೋಪಿಗಳ ವಿರುದ್ಧ ಕ್ರಿಮಿನಲ್ ಪಿತೂರಿ, ಲೈಂಗಿಕ ಕಿರುಕುಳ, ಅತ್ಯಾಚಾರ, ಸಾಮೂಹಿಕ ಅತ್ಯಾಚಾರ ಮತ್ತು ಸುಲಿಗೆ ಆರೋಪವನ್ನು ಹೊರಿಸಲಾಗಿತ್ತು. ನಾಲ್ವರು ಪುರುಷರ ತಂಡವೊಂದು ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಆ ದೃಶ್ಯವನ್ನು ಮೊಬೈಲ್‌ ನಲ್ಲಿ ರೆಕಾರ್ಡ್‌ ಮಾಡಿದ್ದರು. ನಂತರ ಆ ದೃಶ್ಯದ ವಿಡಿಯೊಗಳನ್ನಿಟ್ಟುಕೊಂಡು ಬ್ಲಾಕ್ ಮೇಲ್ ಮಾಡುತ್ತಿದ್ದಾರೆ ಎಂದು 2019ರ ಫೆಬ್ರುವರಿಯಲ್ಲಿ ಯುವತಿಯೊಬ್ಬರು ಪೊಲೀಸರಿಗೆ ದೂರು ನೀಡಿದ್ದರು.
ಇದೇ ವೇಳೆ ಪೊಲ್ಲಾಚಿಯಲ್ಲಿ ಅನೇಕ ಮಹಿಳೆಯರ ಮೇಲೆ ಇಂಥದ್ದೇ ಗುಂಪೊಂದು ಲೈಂಗಿಕ ದೌರ್ಜನ್ಯ ಎಸಗಿ, ಬ್ಲಾಕ್‌ ಮೇಲ್ ಮಾಡುತ್ತಿದೆ ಎಂದಬ ಸುದ್ದಿ ಹರಿದಾಡುತ್ತಿತ್ತು. ಸಾರ್ವಜನಿಕ ವಲಯದಲ್ಲಿ ಈ ಸುದ್ದಿ ಹರಡುತ್ತಿದ್ದಂತೆ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಭುಗಿಲೆದ್ದಿತ್ತು. ರಾಜ್ಯ ವಿಧಾನಸಭೆಯಲ್ಲೂ ಈ ವಿಚಾರ ಪ್ರತಿಧ್ವನಿಸಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲಾಗಿತ್ತು.
ಆರಂಭದಲ್ಲಿ ಸ್ಥಳೀಯ ಪೊಲೀಸರು ಈ ಪ್ರಕರಣದ ತನಿಖೆ ನಡೆಸಿದ್ದರು. ಬಳಿಕ ಪ್ರಕರಣದ ತನಿಖೆ ನಡೆಸುವಂತೆ ಸಿಬಿ ಸಿಐಡಿ ಪೊಲೀಸರಿಗೆ ತಮಿಳುನಾಡು ಸರ್ಕಾರ ಆದೇಶಿಸಿತ್ತು. ನಂತರ ಪ್ರಕರಣವನ್ನು ಕೇಂದ್ರ ತನಿಖಾ ದಳಕ್ಕೆ (ಸಿಬಿಐ) ವರ್ಗಾಯಿಸಲಾಗಿತ್ತು.
ಶಬರಿರಾಜನ್ ಅಲಿಯಾಸ್ ರಿಶ್ವಂತ್, ತಿರುನಾವುಕರಸು, ಟಿ ವಸಂತ ಕುಮಾರ್, ಎಂ ಸತೀಶ್, ಆರ್.ಮಣಿ ಅಲಿಯಾಸ್ ಮಣಿವಣ್ಣನ್, ಪಿ ಬಾಬು, ಹರೋನ್ ಪಾಲ್, ಅರುಳಾನಂದಮ್, ಮತ್ತು ಅರುಣ್ ಕುಮಾರ್ ಶಿಕ್ಷೆಗೊಳಗಾದ ಆರೋಪಿಗಳು.

More articles

Latest article