ಮೈಸೂರು: ಹಿರಿಯ ಪತ್ರಕರ್ತ, ಪ್ರಗತಿಪರ ಚಿಂತಕ ಕೆ.ದೀಪಕ್ ಅವರಿಗೆ ಮೈಸೂರು ಪೊಲೀಸರು ಐಪಿಸಿ ೧೧೧ ಕಲಂ ನಡಿ ಸಮನ್ಸ್ ಜಾರಿ ಮಾಡಿ ಮುಚ್ಚಳಿಕೆ ಬರೆದುಕೊಡುವಂತೆ ತಾಕೀತು ಮಾಡಿರುವುದು ವ್ಯಾಪಕ ಟೀಕೆಗೆ ಕಾರಣವಾಗಿದೆ.
ಮೈಸೂರಿನಲ್ಲಿ ಪ್ರಜಾಭಾರತ ಸಾಮಾಜಿಕ ಮಾಧ್ಯಮ ಸಂಸ್ಥೆಯನ್ನು ನಡೆಸುತ್ತಿರುವ ಹಿರಿಯ ಪತ್ರಕರ್ತ ಕೆ. ದೀಪಕ್ ೨೦೧೯ ರಲ್ಲಿ ಮತಭಾರತ ನ್ಯೂಸ್ ವಿಶ್ಲೇಷ ಸರಣಿಯಲ್ಲಿ ಅಂದಿನ ಸಂಸದ ಪ್ರತಾಪ್ ಸಿಂಹ ಅವರ ಕುರಿತಾದ ಪ್ರತಾಪಸಿಂಹನ ಬೆತ್ತಲೆ ಜಗತ್ತು ವರದಿಯಪ್ರಸಾರ ಮಾಡಿದ್ದು, ಈ ಬಗ್ಗೆ ದೀಪಕ್ ವಿರುದ್ದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿ ನ್ಯಾಯಾಲಯದಲ್ಲಿ ವಿಚಾರಣೆಯ ಹಂತದಲ್ಲಿದೆ.
ಆದರೆ ನೆನ್ನೆ ಸಂಜೆ ಮೈಸೂರು ಪೊಲೀಸ್ ಡಿಸಿಪಿ ಮುತ್ತುರಾಜ್ ಅವರು ದೀಪಕ್ ಅವರಿಗೆ ಸಮನ್ಸ್ ಜಾರಿಗೊಳಿಸಿದ್ದು, ೨೦೧೯ ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಪ್ರತಾಪ ಸಿಂಹ ಅವರ ವೈಯುಕ್ತಿಕ ಚಾರಿತ್ಯ ಕುರಿತಾಗಿ ಸುಳ್ಳಾಗಿರುವ ಹೇಳಿಕೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿ ಶಾಂತಿಭಂಗ ಉಂಟು ಮಾಡುವ ಅಥವಾ ಸಾರ್ವಜನಿಕ ನೆಮ್ಮದಿಗೆ ತೊಂದರೆಯುಂಟು ಮಾಡುವ ಸಂಭವವಿರುವುದರಿಂದ ನಿಮ್ಮ ವಿರುದ್ದ ಮುಂದಿನ ಕ್ರಮಕ್ಕೆ ನೀಡಿದ ವರದಿ ಮೇರೆಗೆ ಪ್ರಕರಣ ದಾಖಲಿಸಿಲಾಗಿದ್ದು, ಈ ರೀತಿಯ ದುರ್ವರ್ತನೆಯನ್ನು ತೋರದಂತೆ ನಿಮ್ಮ ವಿರುದ್ದ ವಿಚಾರಣೆ ಕೈಗೊಂಡು ನಿಗದಿತ ಅವಧಿಯವರೆಗೆ ವೈಯುಕ್ತಿಕ ಮುಚ್ಚಳಿಕೆ ಮತ್ತು ಅಷ್ಟೇ ಮೊತ್ತದ ಸೂಕ್ತ ಗಣ್ಯ ವ್ಯಕ್ತಿಯ ಜಾಮೀನುದಾರತೆಯನ್ನು ಏಕೆ ಪಡೆಯಬಾರದು ಎಂದು ಸಮನ್ಸ್ ಮಾಡಲಾಗಿದ್ದು ಏ.೧೨ ರಂದು ಬೆಳಗ್ಗೆ ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ಜಾರಿ ಮಾಡಲಾಗಿದೆ.
ಕಳೆದ ೨೫ ವರ್ಷಗಳಿಂದ ಮೈಸೂರಿನ ಪ್ರತಿಷ್ಠಿತ ಪತ್ರಿಕೆಗಳಾದ ಸಾಧ್ವಿ, ವಿಜಯ, ಸಂಜೆವಾಣಿ, ಪ್ರಜಾನುಡಿ, ಸುರ್ಯೋದಯ, ವಾರ್ತಾಭಾರತಿ, ರಾಜ್ಯಧರ್ಮ, ಉದಯಟಿವಿ, ಅಮೋಘ್ ವಾಹಿನಿ, ಸೇರಿದಂತೆ ಅನೇಕ ಸುದ್ದಿಮಾಧ್ಯಮಗಳಲ್ಲಿ ಸೇವೆಸಲ್ಲಿಸಿದ್ದಾರೆ. ಪ್ರತಿಷ್ಠಿತ ಹಾಲಿ ಮೈಸೂರು ಪತ್ರಕರ್ತರ ಸಹಕಾರ ಸಂಘದ ಅಧ್ಯಕ್ಷರಾಗಿರುವ ದೀಪಕ್, ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ, ಮೈಸೂರು ವಿವಿ ಪತ್ರಿಕೋದ್ಯಮ ವಿಭಾಗದ ಸಂಶೋಧನಮಂಡಳಿ ಸದಸ್ಯರಾಗಿ ನಿಷ್ಪಕ್ಷಪಾತ, ಜನಪರ ಪತ್ರಿಕೋದ್ಯಮದ ಜೊತೆಗೆ ದಲಿತ ಚಳವಳಿ, ಪ್ರಗತಿಪರ ಚಳವಳಿಗಳಲ್ಲೂ ಮುಂಚೂಣಿ ಸಾಲಿನಲ್ಲಿ ಗುರುತಿಸಿಕೊಂಡಿರುವ ಕೆ.ದೀಪಕ್ ಸಂವಿಧಾನದ ಪ್ರಖರ ಪ್ರತಿಪಾದಕರು ಮತ್ತು ಮನುವಾದ, ಕೋಮುವಾದ, ಭ್ರಷ್ಟಾಚಾರಗಳ ವಿರುದ್ಧ ರಾಜೀ ರಹಿತ ಹೋರಾಟಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
೨೦೧೯ ರ ಲೋಕಸಭಾ ಚುನಾವಣೆಯಲ್ಲಿ ತಮ್ಮ ವೆಬ್ ನ್ಯೂಸ್ ಚಾನಲ್ ಪ್ರಜಾಭಾರತ ದಲ್ಲಿ ಸರಣಿ ವರದಿಗಳ ಮತದಾರರನ್ನುಜಾಗೃತಿಗೊಳಿಸುವಲ್ಲಿ ಯಶಸ್ವಿಯಾಗಿದ್ದವು, ಈ ಸಂದರ್ಭದಲ್ಲಿ ಬಿಜೆಪಿಸಂಸದ ಪ್ರತಾಪಸಿಂಹ ಅವರ ಕುರಿತಾದ ವರದಿವಿಶ್ಲೇಷಣೆ ವಿರುದ್ದ ಕೇಸು ದಾಖಲಿಸಲಾಗಿದ್ದು, ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಈ ಪ್ರಕರಣದಲ್ಲಿ ದೀಪಕ್ ವಿರುದ್ದ ಆರೋಪಪಟ್ಟಿಯನ್ನುಸಲ್ಲಿಸುವ ಮೂಲಕ ಪತ್ರಕರ್ತನ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನ ನಡೆಸಿತ್ತು.
ಇದೀಗ ರಾಜ್ಯದಲ್ಲಿ ಪ್ರಗತಿಪರ ಸಿದ್ದಾಂತಗಳ ಪ್ರತಿಪಾದನೆಯ ಕಾಂಗ್ರೇಸ್ ಸರ್ಕಾರ ಅಧಿಕಾರದಲ್ಲಿದ್ದಾಗಲೂ ಅದರಲ್ಲೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸ್ವಕ್ಷೇತ್ರ ಮೈಸೂರಿನಲ್ಲಿ ಪ್ರಗತಿಪರ ಪತ್ರಕರ್ತ ದೀಪಕ್ ಅವರಿಗೆ ಪೊಲೀಸ್ ಆಯುಕ್ತರು ಊಹಾಪೋಹ ಮತ್ತು ಕಲ್ಪಿತ ಮನೋಃಸ್ಥಿತಿಯಿಂದ ಸಮನ್ಸ್ ಜಾರಿಮಾಡಿರುವುದು ವಿಪರ್ಯಾಸದ ಸಂಗತಿ.
ದೀಪಕ್ ಮೇಲಿನ ಆರೋಪದ ವಿಚಾರಣೆ ನ್ಯಾಯಾಯಲದಲ್ಲಿ ನಡೆಯುತ್ತಿರುವಾಗಲೆ ಮೈಸೂರು ಪೊಲೀಸರು ಈ ಪ್ರಕರಣವನ್ನು ಮುಂದಿಟ್ಟುಕೊಂಡು ದೀಪಕ್ ಅವರು ಇದೀಗ ನಡೆಯುತ್ತಿರುವ ಲೋಕಸಭಾ ಚುನಾವಣೆಯಲ್ಲಿ ಸುಳ್ಳು ಹೇಳಿಕೆಗಳನ್ನು ನೀಡಿ, ಸಾರ್ವಜನಿಕ ಶಾಂತಿ -ನೆಮ್ಮದಿಯನ್ನು ಕದಡುತ್ತಾರೆ ಎಂದು ಭಾವಿಸಿರುವುದು ಸೋಜಿಗದ ಸಂಗತಿ. ಇದು ಪತ್ರಕರ್ತರೊಬ್ಬರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಸಂವಿಧಾನವಿರೋಧಿ ಕ್ರಮವಾಗಿದೆ. ಪೊಲೀಸರು ಪೂರ್ವಾಗ್ರಹ ಪೀಡಿತರಾಗಿಯೂ ಅಥವಾ ರಾಜಕೀಯ ಪ್ರಭಾವಕ್ಕೆ ಮಣಿದಿರುವ ಸಂಶಯ ವ್ಯಕ್ತವಾಗುತ್ತಿದೆ.