ಬೆಂಗಳೂರು : ಕಾನ್ಸ್ಟೆಬಲ್ ಒಬ್ಬರು ನಗರದ ಹೃದಯ ಭಾಗದಲ್ಲಿರುವ ಖಾಸಗಿ ವಾಣಿಜ್ಯ ಆಸ್ತಿಯ ಡ್ರೈವ್ವೇಯಲ್ಲಿ ಮೂತ್ರ ವಿಸರ್ಜನೆ ಮಾಡಿ, ವಿರೋಧಿಸಿದ ವಕೀಲರಿಗೆ ಕಪಾಳಮೋಕ್ಷ ಮಾಡಿರುವ ಘಟನೆ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದಿದೆ
ಕೋರಮಂಗಲ ಪೊಲೀಸ್ ಠಾಣೆಗೆ ನಿಯೋಜಿಸಲಾದ ಕಾನ್ಸ್ಟೆಬಲ್ ಈ ರೀತಿ ಮಾಡಿದ್ದಾರೆ ಎಂದು ವಕೀಲ ಆದರ್ಶ್ ಗಂಗಲ್ ಪೊಲೀಸರಿಗೆ ದೂರು ನೀಡಿದ್ದಾರೆ. ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಈ ಘಟನೆ ಫೆಬ್ರವರಿ 6 ರಂದು ರಾತ್ರಿ 9 ಗಂಟೆ ಸುಮಾರಿಗೆ ಚರ್ಚ್ ಸ್ಟ್ರೀಟ್ನ 46/27 ರ ಕಲ್ಪಕ್ ಆರ್ಕೇಡ್ನಲ್ಲಿ ನಡೆದಿದೆ. ನಾಲ್ಕನೇ ಮಹಡಿಯಲ್ಲಿರುವ ಕಚೇರಿ ಸಂಖ್ಯೆ 401 ರಿಂದ ಕೆಲಸ ನಿರ್ವಹಿಸುತ್ತಿರುವ ಹಾಗೂ ಆಸ್ತಿಯ ಸಹ-ಮಾಲೀಕರಲ್ಲಿ ಒಬ್ಬರಾಗಿರುವ ವಕೀಲ ಆದರ್ಶ್ ಗಂಗಲ್ ಎಂಬುವರು ಕೆಲಸ ಮುಗಿಸಿ ಮುಖ್ಯ ದ್ವಾರದ ಡ್ರೈವ್ವೇ ಮೂಲಕ ನಡೆದುಕೊಂಡು ಹೋಗುತ್ತಿದ್ದಾಗ, ಕಟ್ಟಡದ ಹಿಂಭಾಗದಲ್ಲಿ ಗೋಡೆಗೆ ಮೂತ್ರ ವಿಸರ್ಜಿಸುತ್ತಿರುವ ವ್ಯಕ್ತಿಯನ್ನು ನೋಡಿದ್ದಾರೆ.
ಇದನ್ನು ಗಮನಿಸಿದ ಆದರ್ಶ್ ಇಲ್ಲಿ ಮೂತ್ರ ಮಾಡದಂತೆ ಹೇಳಿದ್ದಾರೆ. ಆದರೆ, ಆ ಮಾತನ್ನು ನಿರ್ಲಕ್ಷಿಸಿದ ಪೇದೆ, ಮೂತ್ರ ವಿಸರ್ಜನೆ ನಂತರ ಅವಾಚ್ಯ ಶಬ್ಧಗಳಿಂದ ನಿಂದಿಸಿ, ಆದರ್ಶ್ ಎಂಬುವರಿಗೆ ಕಪಾಳಮೋಕ್ಷ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಈ ದೃಶ್ಯವನ್ನು ಮೊಬೈಲ್ನಲ್ಲಿ ಸೆರೆ ಹಿಡಿದದ್ದಕ್ಕೆ ಪೇದೆಯೊಟ್ಟಿಗೆ ಇದ್ದ ಇಬ್ಬರು ವ್ಯಕ್ತಿಗಳು ಆದರ್ಶ್ ಅವರ ಕೈಯನ್ನು ಹಿಡಿದುಕೊಂಡು, ಕನ್ನಡಕವನ್ನು ಮುರಿದಿದ್ದಾರೆ. ಇದಾದ ಬಳಿಕ ಫೋಟೋ ಡಿಲೀಟ್ ಮಾಡಿಸಿದ್ದಾರೆ ಎನ್ನಲಾಗಿದೆ. ಆ ವೇಳೆ ಕಟ್ಟಡದ ಭದ್ರತಾ ಸಿಬ್ಬಂದಿ ಆಗಮಿಸಿ, ಗಲಾಟೆಯಿಂದ ಬಿಡಿಸಿದ್ದಾರೆ ಎಂದು ದೂರಿನಲ್ಲಿ ದಾಖಲಿಸಿದ್ದಾರೆ.
ಈ ಘಟನೆ ಸಿಸಿಟಿವಿ ದೃಶ್ಯಾವಳಿಯಲ್ಲಿ ಸೆರೆಯಾಗಿದ್ದು, ಈಗ ಪೊಲೀಸರ ಬಳಿ ಇದೆ. ಕೋರಮಂಗಲ ಪೊಲೀಸ್ ಠಾಣೆಗೆ ನಿಯೋಜಿಸಲಾದ ಕಾನ್ಸ್ಟೆಬಲ್ ಸತೀಶ್ ಎಂದು ಗುರುತಿಸಲಾಗಿದೆ. ಅವರು ಮತ್ತು ಅವರ ಇಬ್ಬರು ಸಹಚರರ ವಿರುದ್ಧ ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 115(2), 126(2), 3(5), 352 ಮತ್ತು 324(4) ಅಡಿಯಲ್ಲಿ ಹಲವಾರು ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.


