ಪೋಕ್ಸೋ ಪ್ರಕರಣ: ಮುರುಘಾ ಮಠದ ಶಿವಮೂರ್ತಿ ಶರಣರು ನಿರ್ದೋಷಿ: ನ್ಯಾಯಾಲಯ ಆದೇಶ; ಮೇಲ್ಮನವಿ ಸಲ್ಲಿಸಲು ಒಡನಾಡಿ ನಿರ್ಧಾರ

Most read

ಚಿತ್ರದುರ್ಗ: ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಎದುರಿಸುತ್ತಿದ್ದ (ಪೋಕ್ಸೋ) ಪ್ರಕರಣದಲ್ಲಿ ಮುರುಘಾ ಮಠದ ಶಿವಮೂರ್ತಿ ಶರಣರು ಮತ್ತು ಮತ್ತಿಬ್ಬರನ್ನು ನಿರ್ದೋಷಿಗಳು ಎಂದು ಚಿತ್ರದುರ್ಗ ಜಿಲ್ಲಾ ಎರಡನೇ ಹೆಚ್ಚುವರಿ ಮತ್ತು ಜಿಲ್ಲಾ ನ್ಯಾಯಾಲಯ ಆದೇಶ ಪ್ರಕಟಿಸಿದೆ. ಇಂದು ಮಧ್ಯಾಹ್ನ ನ್ಯಾಯಾಧೀಶರಾದ ಚನ್ನಬಸಪ್ಪ ಜಿ ಹಡಪದ ಅದೇಶ ಪ್ರಕಟಿಸಿದರು.

ಎರಡು ಪೋಕ್ಕೊ ಪ್ರಕರಣಗಳ ಪೈಕಿ ಮೊದಲ ಪ್ರಕರಣದ ವಿಚಾರಣೆ ಪೂರ್ಣಗೊಂಡಿತ್ತು. ಮತ್ತೊಂದು ಪ್ರಕರಣದ ವಿಚಾರಣೆಗೆ ಬಾಕಿ ಇದ್ದು, ಅದರ ವಿಚಾರಣೆಗೆ ಹೈಕೋರ್ಟ್ ತಡೆ ನೀಡಿದೆ.

ನ್ಯಾಯಾಧೀಶರು ʼಪೋಕ್ಸೋ ಪ್ರಕರಣದ ಆರೋಪಿಗಳು ದೋಷಮುಕ್ತರಾಗಿದ್ದಾರೆ’ ಎಂದು ಒಂದು ಸಾಲಿನ ಆದೇಶ ಪ್ರಕಟಿಸಿದರು.

ಸುಪ್ರೀಂ ಕೋರ್ಟ್ ಸೂಚನೆಯಂತೆ ಇಬ್ಬರು ಸಂತ್ರಸ್ತೆಯರು, ಮೂವರು ಆರೋಪಿಗಳು ಹಾಗೂ 14 ಸಾಕ್ಷಿಗಳ ಸುದೀರ್ಘ ವಿಚಾರಣೆ ನಡೆದಿತ್ತು. ನ.18ರಂದು ಸಂತ್ರಸ್ತೆಯರ ಪರ ಸರ್ಕಾರಿ ವಕೀಲ ಎಚ್.ಆರ್.ಜಗದೀಶ್ ವಾದ ಮಂಡಿಸಿದ್ದರೆ ಆರೋಪಿಗಳ ಪರ ಸಿ.ವಿ.ನಾಗೇಶ್ ವಾದಿಸಿದ್ದರು. ನ್ಯಾಯಾಧೀಶರು

ಇಂದಿಗೆ ಆದೇಶ ಕಾಯ್ದಿರಿಸಿದ್ದರು. ಇಂದು ಬೆಳಿಗ್ಗೆ 10 ಗಂಟೆಗೆ ಆರೋಪಿಗಳಾದ ಶಿವಮೂರ್ತಿ ಶರಣರು, ಮಠದ ವ್ಯವಸ್ಥಾಪಕ ಪರಮಶಿವಯ್ಯ, ವಾರ್ಡನ್ ರಶ್ಮಿ ನ್ಯಾಯಾಲಯದಲ್ಲಿ ಹಾಜರಾಗಿದ್ದರು. ಮಧ್ಯಾಹ್ನ 3 ಗಂಟೆ ವೇಳೆಗೆ ನ್ಯಾಯಾಧೀಶರು ಆದೇಶ ಪ್ರಕಟಿಸಿದರು.

ಪ್ರಕರಣದ ಹಿನ್ನೆಲೆ:

ಮುರುಘಾ ಶರಣರು ನಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಇಬ್ಬರು ಅಪ್ರಾಪ್ತ ವಯಸ್ಸಿನ ಬಾಲಕಿಯರು ಮೈಸೂರಿನ ನಜರಾಬಾದ್ ಪೊಲೀಸ್ ಠಾಣೆಯಲ್ಲಿ 2022ರ ಅ. 26ರಂದು ದೂರು ದಾಖಲಿಸಿದ್ದರು. ಮುರುಘಾಶ್ರೀ, ವಾರ್ಡನ್ ರಶ್ಮಿ, ಬಸವಾದಿತ್ಯ, ಮ್ಯಾನೇಜರ್ ಪರಮಶಿವಯ್ಯ, ವಕೀಲ ಗಂಗಾಧರಯ್ಯ ವಿರುದ್ಧ ದೂರು ದಾಖಲಿಸಲಾಗಿತ್ತು.  ಆಗಸ್ಟ್​ 27ರಂದು ಪ್ರಕರಣ ಚಿತ್ರದುರ್ಗ ಗ್ರಾಮಾಂತರ ಠಾಣೆಗೆ ವರ್ಗಾವಣೆಯಾಗಿತ್ತು. 2022ರ ಸೆಪ್ಟಂಬರ್​ 1ರಂದು ಮುರುಘಾಶ್ರೀ, ರಶ್ಮಿ ಅವರನ್ನು ಪೊಲೀಸರು ಬಂಧಿಸಿದ್ದರು. ಚಾರ್ಜ್​​ಶೀಟ್​​ ವೇಳೆ ಎ3 ಬಸವಾದಿತ್ಯ, ಎ5 ವಕೀಲ‌ ಗಂಗಾಧರಯ್ಯ ಅವರನ್ನು ಕೈಬಿಡಲಾಗಿತ್ತು.

14 ತಿಂಗಳ ಕಾಲ ಸೆರೆವಾಸ ಅನುಭವಿಸಿದ್ದ ಶ್ರೀಗಳು 2023 ನವೆಂಬರ್ 16ರಂದು ಷರತ್ತು ಬದ್ಧ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.

ಮತ್ತಿಬ್ಬರು ಬಾಲಕಿಯರು ಮುರುಘಾ ಶರಣರ ವಿರುದ್ಧ ಲೈಂಗಿಕ ಕಿರುಕುಳ ಆರೋಪಿಸಿ ಮತ್ತೊಂದು ದೂರು ನೀಡಿದ್ದರು. ಈ ಪ್ರಕರಣ ವಿಚಾರಣೆ ಇನ್ನೂ ನಡೆಯಬೇಕಿದೆ.

ಮೇಲ್ಮನವಿ ಸಲ್ಲಿಸಲು ಒಡನಾಡಿ ನಿರ್ಧಾರ:

ಪೋಕ್ಸೋ ಪ್ರಕರಣ ದಾಖಲಿಸಿದ್ದ ಮೈಸೂರಿನ ಒಡನಾಡಿ ಸಂಸ್ಥೆಯ ಪರಶು ಪ್ರತಿಕ್ರಿಯೆ ನೀಡಿದ್ದು, ಮಕ್ಕಳಿಗೆ ನ್ಯಾಯ ಕೇಳಿದ್ದಕ್ಕೆ ಪ್ರಕರಣ ದಾಖಲಾಗಿತ್ತು. ವಿನಾಕಾರಣ ನಾವು ಕೋರ್ಟ್‌ ಗೆ ಅಲೆದಾಡುವ ಪರಿಸ್ಥಿತಿ ಉಂಟಾಗಿತ್ತು. ನಾಗರಿಕ ಸಮಾಜ ಇದ್ದೂ ಈ ರೀತಿಯಾಗಿದೆ. ಕೋರ್ಟ್ ತೀರ್ಪನ್ನು ಸಂಪೂರ್ಣವಾಗಿ ಪರಿಶೀಲಿಸುತ್ತೇವೆ.

ಒಡನಾಡಿ ಸಂಸ್ಥೆಯ ಮತ್ತೊಬ್ಬ ಮುಖ್ಯಸ್ಥ ಸ್ಟ್ಯಾನ್ಲಿ ಮಾತನಾಡಿ, ಈ ತೀರ್ಪನ್ನುಹೈಕೋರ್ಟ್ ನಲ್ಲಿ ಪ್ರಶ್ನೆ ಮಾಡುತ್ತೇವೆ. ಸರ್ಕಾರ ಮೇಲ್ಮನವಿ ಹಾಕದಿದ್ದರೆ ನಾವೇ ಹಾಕುತ್ತೇವೆ. ಇಡೀ ವ್ಯವಸ್ಥೆ ಆರೋಪಿ ಪರ ನಿಂತಿದೆ. ಸಂತ್ರಸ್ತ ಮಕ್ಕಳ ಪರ ಯಾರೂ ನಿಲ್ಲಲಿಲ್ಲ. ತನಿಖೆಯಲ್ಲಿ ನೂರಾರು ತಪ್ಪುಗಳು ನಡೆದಿವೆ ಎಂದು ಹೇಳಿದ್ದಾರೆ.

More articles

Latest article