ಛತ್ರಪತಿ ಶಿವಾಜಿ ಪ್ರತಿಮೆ ಕುಸಿತ: ಮಹಾರಾಷ್ಟ್ರ ಜನತೆಗೆ ತಲೆಬಾಗಿ ಕ್ಷಮೆ ಕೇಳುತ್ತೇನೆ- ಪ್ರಧಾನಿ ಮೋದಿ

Most read

ಸಿಂಧುದುರ್ಗ್​ನಲ್ಲಿನ ಶಿವಾಜಿ ಪ್ರತಿಮೆ ಕುಸಿತ ಘಟನೆಯಿಂದಾಗಿ ಘಾಸಿಗೊಂಡ ಮಹಾರಾಷ್ಟ್ರ ಜನರಿಗೆ ನಾನು ತಲೆಬಾಗಿ ಕ್ಷಮೆ ಕೋರುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

ಮಹಾರಾಷ್ಟ್ರದ ಪಾಲ್ಘಾರ್​ನ ಮಲ್ವಾನ್​ನಲ್ಲಿ 76 ಸಾವಿರ ಕೋಟಿ ವೆಚ್ಚದ ದೇಶದ ಅತಿದೊಡ್ಡ ವಧವನ್​ ಬಂದರು ಯೋಜನೆ ಭೂಮಿ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ನಾನು ಇಲ್ಲಿಗೆ ಬಂದಿಳಿದ ತಕ್ಷಣ ಮೊದಲಿಗೆ ಶಿವಾಜಿ ಪ್ರತಿಮೆ ಕುಸಿತ ಸಂಬಂಧ ಕ್ಷಮೆ ಕೇಳುತ್ತೇನೆ. ಛತ್ರಪತಿ ಶಿವಾಜಿ ಮಹಾರಾಜ್​​ ಅವರನ್ನು ತಮ್ಮ ದೇವರು ಎಂದು ನಂಬಿರುವವರಿಗೆ ಘಟನೆಯಿಂದ ತೀವ್ರ ನೋವುಂಟಾಗಿದೆ. ಅವರಿಗೆ ನಾನು ತಲೆಬಾಗಿ ಕ್ಷಮೆ ಕೋರುತ್ತೇನೆ. ನಮ್ಮ ಮೌಲ್ಯಗಳು ಭಿನ್ನವಾಗಿವೆ. ಆದರೆ, ನಮಗೆ ನಮ್ಮ ದೇವರಿಗಿಂತ ಯಾವುದು ದೊಡ್ಡದಲ್ಲ ಎಂದು ತಿಳಿಸಿದರು.

ಶಿವಾಜಿ, ವೀರ ಸಾವರ್ಕರ್​ ಈ ನೆಲದ ಮಕ್ಕಳು. ಭಾರತ ಮಾತೆಯ ಶ್ರೇಷ್ಠ ಮಗನನ್ನು ಕೆಲವರು ಅವಮಾನಿಸುತ್ತಾರೆ. ಆದರೆ, ಅವರು ಇದಕ್ಕಾಗಿ ಕ್ಷಮೆಯಾಚಿಸಲು ಸಿದ್ಧರಿರುವುದಿಲ್ಲ ಎಂದರು.

ಕಳೆದ ವರ್ಷ ಡಿಸೆಂಬರ್‌ನಲ್ಲಿ ನೌಕಾಸೇನೆ ದಿನಾಚರಣೆಯ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಪ್ರತಿಮೆಯನ್ನು ಅನಾವರಣಗೊಳಿಸಿದ್ದರು. ಈ ಪ್ರತಿಮೆಯು ಮರಾಠಾ ನೌಕಾಪಡೆ ಮತ್ತು ಛತ್ರಪತಿ ಶಿವಾಜಿ ಮಹಾರಾಜರ ಕಡಲ ರಕ್ಷಣೆ ಮತ್ತು ಭದ್ರತೆಯ ಪರಂಪರೆಯನ್ನು ಗೌರವಿಸುವ ಗುರಿಯನ್ನು ಹೊಂದಿದೆ. ಆಧುನಿಕ ಭಾರತೀಯ ನೌಕಾಸೇನೆಯೊಂದಿಗೆ ಐತಿಹಾಸಿಕ ಸಂಬಂಧವನ್ನು ಹೊಂದಿದೆ ಎಂದು ಮಾತನಾಡಿದ್ದಾರೆ.

ಪ್ರತಿಮೆ ಉದ್ಘಾಟನೆಯಾಗಿ ವರ್ಷದೊಳಗೆ ಕುಸಿದು ಬಿದ್ದಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಪ್ರತಿಮೆ ನಿರ್ಮಾಣದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದ್ದ ಎಂವಿಎ, ಸಿಎಂ ಶಿಂಧೆ ಮತ್ತು ಡಿಸಿಎಂ ದೇವೇಂದ್ರ ಫಡ್ನವೀಸ್ ರಾಜೀನಾಮೆಗೆ ಆಗ್ರಹಿಸಿತ್ತು.

More articles

Latest article