ಮದ್ಯದ ಅಬಕಾರಿ ನೀತಿ ಸಂಬಂಧಿತ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿದ ಒಂದು ದಿನದ ನಂತರ ಆಮ್ ಆದ್ಮಿ ಪಕ್ಷದ (ಎಎಪಿ) ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ವಜಾಗೊಳಿಸುವಂತೆ ಕೋರಿ ಶುಕ್ರವಾರ ದೆಹಲಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ.
ಕೇಜ್ರಿವಾಲ್ ಅವರು ಯಾವ ಅಧಿಕಾರದ ಅಡಿಯಲ್ಲಿ ಸಿಎಂ ಹುದ್ದೆಯಲ್ಲಿದ್ದಾರೆ ಎಂಬುದನ್ನು ವಿವರಿಸಲು ಕೇಂದ್ರ, ದೆಹಲಿ ಸರ್ಕಾರ ಮತ್ತು ಲೆಫ್ಟಿನೆಂಟ್ ಗವರ್ನರ್ ಅವರ ಪ್ರಧಾನ ಕಾರ್ಯದರ್ಶಿಯನ್ನು ಕೇಳಬೇಕು ಎಂದು ಸುರ್ಜಿತ್ ಸಿಂಗ್ ಯಾದವ್ ತಮ್ಮ ಅರ್ಜಿಯಲ್ಲಿ ಒತ್ತಾಯಿಸಿದ್ದಾರೆ.
ಎಎಪಿ ಸರ್ವೋಚ್ಛ ನಾಯಕ, ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ನಿನ್ನೆ ರಾತ್ರಿ ಬಂಧಿಸಿದ್ದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಇಂದು ರೋಸ್ ಅವೆನ್ಯೂ ಕೋರ್ಟ್ ಗೆ ಹಾಜರುಪಡಿಸಿದರು. ಅರವಿಂದ ಕೇಜ್ರಿವಾಲ್ ವಿರುದ್ಧ ಆರೋಪಗಳ ಸುರಿಮಳೆಯನ್ನೇ ಹೊರೆಸಿರುವ ಇಡಿ ಅಧಿಕಾರಿಗಳು ಅಬಕಾರಿ ಹಗರಣದ ಮೂಲ ಸೂತ್ರಧಾರಿ ಕೇಜ್ರಿವಾಲ್ ಎಂದು ಹೇಳಿದ್ದಾರೆ.
ಜಾರಿ ನಿರ್ದೇಶನಾಲಯದಿಂದ ನ್ಯಾಯಾಲಯಕ್ಕೆ ಕರೆದೊಯ್ಯುವಾಗ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಎಎಪಿ ಮುಖ್ಯಸ್ಥರು, “ನನ್ನ ಜೀವನ ದೇಶಕ್ಕಾಗಿ ಸಮರ್ಪಿತವಾಗಿದೆ, ನಾನು ಕಂಬಿಗಳ ಹಿಂದೆ ಇದ್ದರೂ ದೇಶಕ್ಕೆ ಸೇವೆ ಸಲ್ಲಿಸುತ್ತೇನೆ” ಎಂದು ಹೇಳಿದ್ದಾರೆ.