ಬೆಂಗಳೂರು: ಬೆಂಗಳೂರಿನ ಕೆಲವು ಹೋಟೆಲ್, ದರ್ಶಿನಿ ಮತ್ತು ಉಪಾಹಾರ ಕೇಂದ್ರಗಳಲ್ಲಿ ಇಡ್ಲಿ ತಯಾರಿಸಲು ಪ್ಲಾಸ್ಟಿಕ್ ಹಾಳೆಗಳನ್ನು ಬಳಸುತ್ತಿದ್ದು, ಅದರಿಂದಾಗಿ ಗ್ರಾಹಕರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಉಂಟಾಗುತ್ತಿರುವುದು ಪತ್ತೆಯಾಗಿದೆ. ಬೆಂಗಳೂರಿನ ವಿವಿಧ ಹೋಟೆಲ್ ಹಾಗೂ ಉಪಹಾರ ಕೇಂದ್ರಗಳಿಂದ ಸಂಗ್ರಹಿಸಲಾದ ಇಡ್ಲಿ ಮಾದರಿಗಳಲ್ಲಿ ಸುಮಾರು 51 ರಷ್ಟು ಅಸುರಕ್ಷಿತ ಎಂಬ ವಿಷಯ ಆಹಾರ ಇಲಾಖೆಯ ಪ್ರಯೋಗಾಲಯದಲ್ಲಿ ದೃಢಪಟ್ಟಿದೆ. ಇದರ ಬೆನ್ನಲ್ಲೇ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು, ರಾಜ್ಯದ ಹೋಟೆಲ್, ಉಪಾಹಾರ ಕೇಂದ್ರಗಳಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಉಪಹಾರ ಕೇಂದ್ರ, ಹೋಟೆಲ್, ರಸ್ತೆಬದಿ ಹೋಟೆಲ್ ಗಳಲ್ಲೂ ಪ್ಲಾಸ್ಟಿಕ್ ಹಾಳೆ ಅಥವಾ ಕವರ್ ಬಳಸುವಂತಿಲ್ಲ. ಇನ್ನು ಮುಂದೆ ಆಹಾರ ತಯಾರಿಕೆ, ವಿತರಣೆ ವೇಳೆ ಪ್ಲಾಸ್ಟಿಕ್ ಬಳಸಬಾರದು ಎಂದು ಸಚಿವರು ಹೇಳಿದ್ದಾರೆ.
ಸುಮಾರು 251 ಹೋಟೆಲ್, ಉಪಹಾರ ಕೇಂದ್ರ, ದರ್ಶಿನಿಗಳಿಂದ ಸ್ಯಾಂಪಲ್ಸ್ ಸಂಗ್ರಹಿಸಲಾಗಿತ್ತು. ಅವುಗಳ ಪೈಕಿ 51 ಹೋಟೆಲ್ ಗಳ ಇಡ್ಲಿ ಸ್ಯಾಂಪಲ್ಸ್ ಅಸುರಕ್ಷಿತ ಎನ್ನುವುದು ಪ್ರಯೋಗಾಲಯ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಆ ಇಡ್ಲಿಗಳಲ್ಲಿ ಕಾರ್ಸಿನೋಜೆನಿಕ್ ಅಂಶ ಪತ್ತೆಯಾಗಿದೆ. ಪ್ಲಾಸ್ಟಿಕ್ ಬಳಕೆಯಿಂದ ಇಡ್ಲಿಯಲ್ಲಿ ಕಾರ್ಸಿನೋಜೆನಿಕ್ ಅಂಶ ಸೇರಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಮಾಹಿತಿ ನೀಡಿದ್ದಾರೆ.
ಕ್ಯಾನ್ಸರ್ಗೆ ಕಾರಣವಾಗುವ ಕಾರ್ಸಿನೋಜೆನಿಕ್
ಮೊದಲು ಹೋಟೆಲ್ಗಳಲ್ಲಿ ಇಡ್ಲಿ ತಯಾರಿಗೆ ಹತ್ತಿ ಬಟ್ಟೆ ಬಳಸಲಾಗುತ್ತಿತ್ತು. ಆದರೆ ಈಗ ಪ್ಲಾಸ್ಟಿಕ್ ಬಳಸಲಾಗುತ್ತಿದೆ. ಪ್ಲಾಸ್ಟಿಕ್ ಬಳಕೆಯಿಂದ ಇಡ್ಲಿಯಲ್ಲಿ ಕಾರ್ಸಿನೋಜೆನಿಕ್ ಅಂಶ ಮಿಶ್ರಣವಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.