ಬೆಂಗಳೂರು: 12,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕುವ ಬಗ್ಗೆ ವಿವರಣೆ ನೀಡುವಂತೆ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್‌ಗೆ (ಟಿಸಿಎಸ್) ಸಮನ್ಸ್ ನೀಡಲಾಗಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ತಿಳಿಸಿದ್ದಾರೆ.
ಈ ವಿಷಯ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟಿಸಿಎಸ್ ಕಂಪನಿಯು 12,000 ಉದ್ಯೋಗಿಗಳನ್ನು ತೆಗೆದುಹಾಕುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಯಾವ ಕಾರಣಕ್ಕಾಗಿ ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಲಾಗುತ್ತಿದೆ ಎಂಬ ಬಗ್ಗೆ ಮಾಹಿತಿ ನೀಡಿ ಎಂದು ಸೂಚನೆ ನೀಡಲಾಗಿದೆ ಎಂದರು.
ಈಗಾಗಲೇ ಟಿಸಿಎಸ್ ನಂತಹ ಕಂಪನಿಗಳಿಗೆ ಕಾರ್ಮಿಕ ಕಾನೂನುಗಳಿಂದ ವಿನಾಯತಿ ನೀಡಲಾಗಿದೆ. ಐದು ವರ್ಷಗಳಿಂದ ವಿನಾಯತಿಯನ್ನು ವಿಸ್ತರಿಸಿಕೊಂಡೇ ಬರಲಾಗುತ್ತಿದೆ. ಆದರೂ ಕೆಲವು ಷರತ್ತುಗಳು ಅವರಿಗೂ ಅನ್ವಯವಾಗುತ್ತವೆ. ಇಂತಹ ಕಂಪನಿಗಳು ದೊಡ್ಡ ಸಂಖ್ಯೆಯಲ್ಲಿ ಉದ್ಯೋಗಿಗಳನ್ನು ತೆಗೆದುಹಾಕಬೇಕು ಎಂದರೆ ಮುಂಚಿತವಾಗಿ ಇಲಾಖೆಗೆ ಮಾಹಿತಿ ಒದಗಿಸಬೇಕು. ಈ ನಿಯಮದ ಅಡಿಯಲ್ಲೇ ಅವರಿಂದ ವಿವರಣೆ ಕೇಳಲಾಗಿದೆ. ನಮ್ಮ ಇಲಾಖೆಯ ಅಧಿಕಾರಿಗಳು ಟಿಸಿಎಸ್ ಪ್ರತಿನಿಧಿಗಳಿಗೆ ಕರೆ ಮಾಡಿ, ಮಾಹಿತಿ ನೀಡುವಂತೆ ಸೂಚಿಸಿದ್ದಾರೆ ಎಂದು ತಿಳಿಸಿದರು.
ಟಿಸಿಎಸ್ ಸೇರಿ ಹಲವು ಮಾಹಿತಿ ತಂತ್ರಜ್ಞಾನ ಕಂಪನಿಗಳು ಕೆಲಸದ ಅವಧಿಯನ್ನು 10 ಗಂಟೆಗಳಿಗೆ ಹೆಚ್ಚಿಸಲು ಅನುಮತಿ ನೀಡುವಂತೆ ಮನವಿ ಸಲ್ಲಿಸಿದ್ದವು. ಕೆಲಸದ ಅವಧಿಯನ್ನು 10 ತಾಸಿಗೆ ಹೆಚ್ಚಿಸಲು ಸಾಧ್ಯವಿಲ್ಲ ಎಂದು ಕಂಪನಿಗಳಿಗೆ ಈಗಾಗಲೇ ತಿಳಿಸಲಾಗಿದೆ ಎಂದು ಸಂತೋಷ್ ಲಾಡ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.