ಹೊಸದಿಲ್ಲಿ: ನಿನ್ನೆಯಷ್ಟೇ ಜಾರಿಯಾಗಿರುವ ಪೌರತ್ವ ತಿದ್ದುಪಡಿ ಕಾಯ್ದೆ (CAA)ಗೆ ತಡೆಯಾಜ್ಞೆ ನೀಡಬೇಕೆಂದು ಕೋರಿ ಕೇರಳ ಮೂಲದ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (IUML) ಇಂದು ಸುಪ್ರೀಂ ಕೋರ್ಟ್ ಮೊರೆಹೋಗಿದೆ.
ಕೇಂದ್ರ ಸರ್ಕಾರ ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆ-2019 ಜಾರಿಗೊಳಿಸುವ ಸಂಬಂಧ ನಿನ್ನೆ ನೋಟಿಫಿಕೇಷನ್ ಜಾರಿ ಮಾಡಿತ್ತು.
2019ರ ಡಿಸೆಂಬರ್ 11ರಂದು ಸಂಸತ್ತಿನಲ್ಲಿ ಪೌರತ್ವ ತಿದ್ದುಪಡಿ ಬಿಲ್ ಮಂಡಿಸಿದ್ದ ಕೇಂದ್ರ ಸರ್ಕಾರ, ಸಂಸತ್ತಿನ ಅಂಗೀಕಾರ ಪಡೆದು ರಾಷ್ಟ್ರಪತಿಗಳ ಸಹಿಯನ್ನೂ ಪಡೆದಿತ್ತು. ರಾಷ್ಟ್ರಪತಿಗಳ ಅಂಕಿತ ಬೀಳುತ್ತಿದ್ದಂತೆ IUML ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು. ಕಾಯ್ದೆ ಜಾರಿಗೆ ತಡೆ ನೀಡಲು ಕೋರಿದ್ದ ಅರ್ಜಿದಾರರು, CAA ಕಾಯ್ದೆ ದೇಶದಲ್ಲಿ ಮುಸ್ಲಿಮರ ಕುರಿತು ತಾರತಮ್ಯವನ್ನು ತೋರುತ್ತದೆ. ಕಾಯ್ದೆಯಲ್ಲಿ ಮುಸ್ಲಿಮರು ಇತರರಿಂದ ಪ್ರತ್ಯೇಕವಾಗಿ ನೋಡಲಾಗಿರುವುದು ಸಂವಿಧಾನದ 14ನೇ ವಿಧಿಯನ್ವಯ ಸಮಾನತೆಯ ಹಕ್ಕಿಗೆ ವಿರೋಧವಾಗಿದೆ ಎಂದು ವಾದಿಸಿದ್ದರು.
ಕಾಯ್ದೆಗೆ ಇನ್ನೂ ನಿಯಮಾವಳಿಗಳನ್ನು ರೂಪಿಸದ ಹಿನ್ನೆಲೆಯಲ್ಲಿ ಸದ್ಯದಲ್ಲೇ ಕಾಯ್ದೆಯನ್ನು ಜಾರಿಗೊಳಿಸುತ್ತಿಲ್ಲ. ಹೀಗಾಗಿ ತಡೆಯಾಜ್ಞೆ ನೀಡುವ ಅವಶ್ಯಕತೆ ಇಲ್ಲ ಎಂದು ಕೇಂದ್ರ ಸರ್ಕಾರ ಮನವಿ ಮಾಡಿಕೊಂಡಿತ್ತು.
ನಿನ್ನೆ ಸಿಎಎ ಕಾಯ್ದೆಗೆ ನಿಯಮಾವಳಿ ರೂಪಿಸಿ ಜಾರಿಗೆ ತಂದಿರುವ ಹಿನ್ನೆಲೆಯಲ್ಲಿ IUML ಮತ್ತೆ ಸುಪ್ರೀಂ ಕೋರ್ಟ್ ಕದ ತಟ್ಟಿದೆ.
ಸಿಎಎ ಮತ್ತು ಎನ್ ಆರ್ ಸಿ ವಿರುದ್ಧ ರಾಷ್ಟ್ರವ್ಯಾಪಿ ನಡೆದ ಭಾರೀ ಪ್ರಮಾಣದ ಪ್ರತಿಭಟನೆಗಳಿಂದಾಗಿ ಕೇಂದ್ರ ಸರ್ಕಾರ ಹಲವು ವರ್ಷಗಳಿಂದ ಕಾಯ್ದೆಯನ್ನು ಜಾರಿಗೊಳಿಸಿರಲಿಲ್ಲ. ಈಗ ಇನ್ನೇನು ಲೋಕಸಭಾ ಚುನಾವಣೆಗಳ ದಿನಾಂಕ ಘೋಷಣೆಯಾಗುವ ಕೆಲವೇ ದಿನಗಳಿಗೆ ಮುನ್ನ ಕಾಯ್ದೆಯನ್ನು ಜಾರಿಗೊಳಿಸಲಾಗಿದೆ.
ಸಿಎಎ ಕಾಯ್ದೆ ಅನ್ವಯ 2014ರ ಡಿಸೆಂಬರ್ 31ಕ್ಕೂ ಮುನ್ನ ಭಾರತಕ್ಕೆ ನೆರೆಯ ಬಾಂಗ್ಲಾದೇಶ, ಪಾಕಿಸ್ತಾನ, ಅಫಘಾನಿಸ್ತಾನ ದೇಶಗಳಿಂದ ವಲಸೆ ಬಂದ ಮುಸ್ಲಿಮೇತರ ನಾಗರಿಕರಿಗೆ ಪೌರತ್ವ ನೀಡಲು ಬಿಜೆಪಿ ಸರ್ಕಾರ ಮುಂದಾಗಿದೆ. 1955ರ ಪೌರತ್ವ ಕಾಯ್ದೆಯ ಸೆಕ್ಷನ್ 2 ನ್ನು ಇದಕ್ಕಾಗಿ ಮಾರ್ಪಾಡು ಮಾಡಲಾಗಿದೆ.