ಹಾಸನ: ಎಚ್.ಡಿ.ರೇವಣ್ಣನಿಗೆ ಜಾಮೀನು ಕೊಡಲಾಗಿದೆ. ರಾಜ್ಯ ಸರ್ಕಾರ ಅದನ್ನು ಹೈಕೋರ್ಟ್ ನಲ್ಲಿ ಚಾಲೆಂಜ್ ಮಾಡಬೇಕಿತ್ತು. ಇನ್ನೂ ಯಾಕೆ ಮಾಡಿಲ್ಲ? ಪ್ರಜ್ವಲ್ ರೇವಣ್ಣನಿಗೂ ಹೀಗೆಯೇ ಜಾಮೀನು ಕೊಡುವ ಸಂಶಯ ಇದೆ. ಕೇಂದ್ರ ಸರ್ಕಾರ ಮಾತ್ರವಲ್ಲ ರಾಜ್ಯ ಸರ್ಕಾರವೂ ಪ್ರಜ್ವಲ್ ನನ್ನು ರಕ್ಷಿಸುತ್ತಿರುವ ಅನುಮಾನವಿದೆ ಎಂದು ಹಿರಿಯ ನ್ಯಾಯವಾದಿ ಬಾಲನ್ ಹೇಳಿದ್ದಾರೆ
ಕಾಮಕಾಂಡ ನಡೆಸಿ ವಿದೇಶಕ್ಕೆ ಪರಾರಿಯಾಗಿರುವ ಸಂಸದ, ಎನ್ ಡಿಎ ಅಭ್ಯರ್ಥಿ ಪ್ರಜ್ವಲ್ ರೇವಣ್ಣನನ್ನು ಬಂಧಿಸಬೇಕು ಮತ್ತು ಸಂತ್ರಸ್ತೆಯರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿ ಹಾಸನದಲ್ಲಿ ಇಂದು ನಡೆಯುತ್ತಿರುವ ಬೃಹತ್ ಹೋರಾಟದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೊಂದ ಸಹೋದರಿಯರಿಗೆ ತಲಾ ಒಂದು ಕೋಟಿ ಪರಿಹಾರ ನೀಡಬೇಕು. ಐಪಿಸಿ ಕಾಯಿದೆ ಸೆಕ್ಷನ್ 357 ಅಡಿಯಲ್ಲಿ ಕೊಡಲು ಅವಕಾಶ ಇದೆ ಎಂದು ಅವರು ಹೇಳಿದರು.
ಭಾರತದಲ್ಲಿ 53 ಮಂದಿಯನ್ನು ಭಯೋತ್ಪಾದಕರು ಎಂದು ಸರ್ಕಾರ ಪಟ್ಟಿಮಾಡಿದೆ. ಪ್ರಜ್ವಲ್ ರೇವಣ್ಣ ಅವರನ್ನು 54 ಭಯೋತ್ಪಾದಕನಾಗಿ ಹೆಸರಿಸಬೇಕು. 400 ಮಂದಿ ಸಂತ್ರಸ್ತೆಯರಿದ್ದಾರೆ ಎಂದು ಹೇಳಲಾಗಿದೆ. ಪ್ರಜ್ವಲ್ ವಿರುದ್ಧ 400 ಎಫ್‌ಐಆರ್‌ಗಳನ್ನು ದಾಖಲಿಸಬೇಕು ಎಂದು ಅವರು ಹೇಳಿದರು.
ಸರ್ಕಾರಗಳು ರೇವಣ್ಣ ಮತ್ತು ಆತನ ಪುತ್ರ ಪ್ರಜ್ವಲ್ ರೇವಣ್ಣನನ್ನು ರಕ್ಷಿಸುತ್ತಿರುವ ಸಾಧ್ಯತೆಗಳಿವೆ. ಪ್ರಜ್ವಲ್ ಸೈಕೋ ಪಾತ್ ಇದ್ದಂತಿದ್ದಾನೆ. ಆತನನ್ನು ಬಂಧಿಸಿ, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಬೇಕು ಎಂದು ಆಗ್ರಹಿಸಿದರು.