ಬೆಂಗಳೂರು: ಸರಕಾರಿ ಸ್ಥಳಗಳಲ್ಲಿ ಯಾವುದೇ ಸಂಘ ಸಂಸ್ಥೆಗಳು ಚಟುವಟಿಕೆ ನಡೆಸಬೇಕಾದರೆ ಸಂಬಂಧಪಟ್ಟ ಸ್ಥಳೀಯ ಸಂಸ್ಥೆಗಳ ಅನುಮತಿ ಪಡೆಯಬೇಕು ಎಂಬ ಸಚಿವ ಸಂಪುಟದ ತೀರ್ಮಾನ ಸಮರ್ಥನೀಯ ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಜೀವನೋಪಾಯ ಮತ್ತು ರಾಯಚೂರು ಜಿಲ್ಲಾ ಉಸ್ತುವಾರಿ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಆರ್. ಪಾಟೀಲ್ ತಿಳಿಸಿದ್ದಾರೆ.
ಇಂದು ಪತ್ರಿಕಾಗೋಷ್ಠಿಯಲ್ಲಿ ಸಚಿವರು ಮಾತನಾಡಿದರು
ನಮ್ಮ ಸರ್ಕಾರ ಜಾರಿಗೆ ಈ ನಿಷೇಧ ಹೇರಿಲ್ಲ. ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ಅಧಿಕಾರಾವಧಿಯಲ್ಲಿ ಜಾರಿಗೆ ತರಲಾಗಿತ್ತು. ಇದನ್ನು ನಮ್ಮ ಸರ್ಕಾರ ಅನುಷ್ಠಾನ ಮಾಡಿದೆಯಷ್ಟೇ. ಮಾಡಲು ಕೆಲಸವಿಲ್ಲದ ಬಿಜೆಪಿಯವರು ಜನರಲ್ಲಿ ಗೊಂದಲ ಸೃಷ್ಟಿಸಲು ಯತ್ನಿಸುತ್ತಿದ್ದಾರೆ ಎಂದು ತಿರುಗೇಟು ನೀಡಿದರು.
ಗ್ರಾಮೀಣಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರು ಆರೆಸ್ಸೆಸ್ ನಿಷೇಧ ಮಾಡಬೇಕು ಎಂದು ಎಲ್ಲಿಯೂ ಹೇಳಿಲ್ಲ.ಎಲ್ಲರೂ ಅವರ ಮಾತನ್ನ ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಸರ್ಕಾರಿ ಅಧೀನದ ಸ್ಥಳಗಳಲ್ಲಿ, ಶಾಲಾ-ಕಾಲೇಜು ಆವರಣದಲ್ಲಿ ಅನುಮತಿ ಪಡೆಯಬೇಕು ಎಂದು ಅವರು ಹೇಳಿದ್ದಾರೆ. ಇದಲ್ಲಿ ತಪ್ಪೇನೂ ಇಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.
ಜನರನ್ನು ಹಾದಿ ತಪ್ಪಿಸುವುದೇ ಬಿಜೆಪಿಯ ಹುನ್ನಾರವಾಗಿದೆ. ಜನ ಇದಕ್ಕೆಲ್ಲ ಸೊಪ್ಪು ಹಾಕುವುದಿಲ್ಲ. ಕಲಬುರಗಿಯ ಚಿತ್ತಾಪುರದಲ್ಲಿ ಆರ್ ಎಸ್ ಎಸ್ ಪಥ ಸಂಚಲನ ವಿಚಾರವಾಗಿ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಇಲ್ಲ ಎದು ಸ್ಪಷ್ಟಪಡಿಸಿದರು.
ಯತ್ನಾಳ್ ಹೇಳಿಕೆ ನಗಣ್ಯ:
ಸಾರ್ವಜನಿಕ ಸ್ಥಳದಲ್ಲಿ ನಮಾಜ್‌ಗೆ ಅವಕಾಶ ಕೊಡಬಾರದು ಎಂಬ ಶಾಸಕ ಯತ್ನಾಳ್ ಪತ್ರದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಚಿವರು, ಯತ್ನಾಳ್, ಅವರ ಕ್ಷೇತ್ರಕ್ಕೆ ಸೀಮಿತವಾಗಿ ಮಾತನಾಡುತ್ತಾರೆ. ಅವರ ಕ್ಷೇತ್ರ ಹೇಗಿದೆ ಎಂದು ನಿಮಗೆ ಗೊತ್ತಿದೆ. ಈ ಹಿಂದೆ ಯತ್ನಾಳ್ ಅವರ ವರ್ತನೆ ಹೇಗಿತ್ತು?ಈಗ ಹೇಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ರಾಜಕೀಯಕ್ಕೆ ಮಾಡಲು ಮಾತ್ರ ಹೇಳಿಕೆ ನೀಡುತ್ತಾರೆ. ಅವರ ಮಾತನ್ನು ಯಾರೂ ಗಂಭೀರವಾಗಿ ಪರಿಗಣಿಸುವುದಿಲ್ಲ ಎಂದು ಡಾ. ಶರಣಪ್ರಕಾಶ ಪಾಟೀಲ್ ನಯವಾಗಿ ಚಾಟಿ ಬೀಸಿದರು.