ರಾಜ್ಯದಲ್ಲಿ ಮುಂದುವರೆದ ಮಹಾಮಳೆ: ಕೃಷ್ಣಾ ತೀರದಲ್ಲಿ ಅಪಾಯಕ್ಕೆ ಸಿಲುಕಿದ ಜನತೆ

Most read

ಬೆಂಗಳೂರು: ರಾಜ್ಯದಲ್ಲಿ‌ ಸುರಿಯುತ್ತಿರುವ ಮಹಾಮಳೆ ಮುಂದುವರೆದಿದ್ದು, ಕೃಷ್ಣಾ ನದಿ ದಂಡೆಯಲ್ಲಿರುವ ಕೆಲವು ಗ್ರಾಮಗಳು ದ್ವೀಪದಂತಾಗಿದ್ದು, ಹೊರಜಗತ್ತಿನ ಸಂಪರ್ಕ ಕಡಿದುಕೊಂಡಿವೆ.

ಅಥಣಿಯ ಹುಲಗಬಾಳ ಗ್ರಾಮದ ಸುತ್ತ ನೀರು ತುಂಬಿದ್ದು, ಇಡೀ‌ ಗ್ರಾಮ ನಡುಗಡ್ಡೆಯಂತಾಗಿದೆ. ಗ್ರಾಮದಲ್ಲಿ ಇನ್ನೂ ಉಳಿದಿರುವ 40ಕ್ಕೂ ಹೆಚ್ಚು ಕುಟುಂಬಗಳನ್ನು ಸ್ಥಳಾಂತರಿಸುವ ಕಾರ್ಯಾಚರಣೆ ಆರಂಭವಾಗಿದೆ.

ಬೋಟ್‌ ಮೂಲಕ ಜನರನ್ನು ಕರೆತರಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಸ್ಥಳಕ್ಕೆ ಅಥಣಿ ಡಿವೈಎಸ್‌ ಪಿ ಶ್ರೀಪಾದ, ಸಿಪಿಐ ರವೀಂದ್ರ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದಾರೆ.

ಭಾರಿ ಮಳೆಯಿಂದಾಗಿ ಹಾವೇರಿ ಜಿಲ್ಲೆಯಲ್ಲಿ 50 ಹೆಕ್ಟೇರ್‌ ಗೂ ಅಧಿಕ ಬೆಳೆಹಾನಿ ಸಂಭವಿಸಿದೆ. ನಿರಂತರ ಮಳೆಗೆ ವರದಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಿದ್ದು ನದಿಪಾತ್ರಗಳಲ್ಲಿ ಆತಂಕ ಮನೆಮಾಡಿದೆ. ಹಾವೇರಿ ತಾಲ್ಲೂಕಿನ ಕೊರಡೂರು ಗ್ರಾಮದ ರೈತರ ಬೆಳೆ ಜಲಾವೃತಗೊಂಡಿದೆ. ಕಬ್ಬು, ಮೆಣಸಿನಕಾಯಿ, ಟೊಮ್ಯಾಟೋ,ಬದನೆಕಾಯಿ ಬೆಳೆ ನೀರಿನಲ್ಲಿ ಮುಳುಗಿಹೋಗಿದೆ.

ಇತ್ತ ಕರಾವಳಿಯಲ್ಲಿ ಸುರಿಯುತ್ತಿರುವ ಕುಂಭದ್ರೋಣ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಮಂಗಳೂರು-ಸೋಲಾಪುರ ಹೆದ್ದಾರಿ ಸಮೀಪ ಗುಡ್ಡ ಜರಿಯುತ್ತಿದ್ದು ಭಾರೀ ಆತಂಕಕ್ಕೆ ಕಾರಣವಾಗಿದೆ. ಭಾರೀ ಮಳೆಯಿಂದ ಕೆತ್ತಿಕ್ಕಲ್‌ ಗುಡ್ಡದ ಒಂದು ಭಾಗ ಕ್ಷಣ ಕ್ಷಣಕ್ಕೂ ಕುಸಿಯುತ್ತಿದ್ದು, ಈ ದೃಶ್ಯಾವಳಿಗಳು ಆತಂಕಕ್ಕೆ ಕಾರಣವಾಗಿದೆ. ಕೆತ್ತಿಕ್ಕಲ್‌ ಗುಡ್ಡದ ಮೇಲಿರುವ ನಾಲ್ಕು ಮನೆಗಳೂ ಈಗ ಕುಸಿದುಬೀಳುವ ಸಾಧ್ಯತೆ ಕಂಡುಬರುತ್ತಿದೆ.

ಉಡುಪಿಯಲ್ಲೂ ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಜನ ಹೈರಾಣಾಗಿದ್ದಾರೆ. ಭಾರೀ ಮಳೆಯಿಂದಾಗಿ ಗದ್ದೆಗಳು ಜಲಾವೃತಗೊಂಡಿವೆ. ಜಾನುವಾರುಗಳಿಗೆ ಮೇವಿಲ್ಲದಂತಾಗಿದೆ.

ಇನ್ನು ಉತ್ತರ ಕನ್ನಡ ಜಿಲ್ಲೆ ಅಂಕೋಲಾದ ಶಿರೂರಿನಲ್ಲಿ ಸಂಭವಿಸಿದ ಗುಡ್ಡ ಕುಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತದೇಹಗಳ ಶೋಧ ಕಾರ್ಯಾಚರಣೆ ಮುಂದುವರೆದಿದ್ದು, ಸ್ಥಳಕ್ಕೆ ಶಾಸಕ ಸತೀಶ್ ಸೈಲ್ ಇಂದು ಮತ್ತೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪೋಕ್ಲೆನ್‌ ತರಿಸಿ ಕಾರ್ಯಾಚರಣೆ ಮಾಡಲಾಗಿದೆ. ನದಿಯೊಳಗೆ ಮಣ್ಣಿನಡಿ ಲಾರಿ ಇರೋದು ಖಚಿತವಾಗಿದೆ. ಸಂಜೆ ವೇಳೆ ನೌಕಾದಳ ಹೆಲಿಕ್ಯಾಪ್ಟರ್‌ ಮೂಲಕ ಕಾರ್ಯಾಚರಣೆ ನಡೆಯಲಿದೆ ಎಂದಯ ಸ್ಥಳ ಪರಿಶೀಲನೆ ಬಳಿಕ ಶಾಸಕ ಸತೀಶ್‌ ಸೈಲ್‌ ಮಾಹಿತಿ ನೀಡಿದರು.

More articles

Latest article