ಬಳ್ಳಾರಿ: ಇಂದು ಬೆಳಗ್ಗೆ ವಾಯು ವಿಹಾರ ಮಾಡುತ್ತಿದ್ದ ಬಳ್ಳಾರಿ ಜಿಲ್ಲಾಸ್ಪತ್ರೆಯ ಮಕ್ಕಳ ವೈದ್ಯ ಡಾ.ಸುನೀಲ್ ಅವರನ್ನು ಅಪಹರಿಸಲಾಗಿದೆ. ಇವರನ್ನು ಅಪಹರಿಸಿರುವ ದುಷ್ಕರ್ಮಿಗಳು 6 ಕೋಟಿ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ತಿಳಿದು ಬಂದಿದೆ. ವಾಯು ವಿಹಾರ ಮಾಡಿಕೊಂಡು ಸೂರ್ಯನಾರಾಯಣಪೇಟೆ ಶನೇಶ್ವರಗುಡಿ ಬಳಿ ಸುನೀಲ್ ಅವರು ಬರುತ್ತಿದ್ದಂತೆ ಟಾಟಾ ಇಂಡಿಗೋ ಕಾರಿನಲ್ಲಿ ಬಂದಿದ್ದ ದುಷ್ಕರ್ಮಿಗಳು ಅವರನ್ನು ಅಪಹರಿಸಿದ್ದಾರೆ.
ನಂತರ ಡಾ.ಸುನೀಲ್ ಅವರ ಮೊಬೈಲ್ನಿಂದಲೇ ಅವರ ಸಹೋದರ, ಜಿಲ್ಲಾ ಮದ್ಯ ಮಾರಾಟಗಾರರ ಸಂಘದ ಅಧ್ಯಕ್ಷ ವೇಣುಗೋಪಾಲ್ ಗುಪ್ತ ಅವರಿಗೆ ಕರೆ ಮಾಡಿ 6 ಕೋಟಿ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಕೂಡಲೇ ವೇಣುಗೋಪಾಲ್ ಗುಪ್ತ ಅವರು ಬಳ್ಳಾರಿ ನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ. ಪೊಲೀಸರು ಅಪಹರಣಕಾರರ ಪತ್ತೆ ಕಾರ್ಯದಲ್ಲಿ ನಿರತರಾಗಿದ್ದಾರೆ. ನಗರದ ಹಲವೆಡೆ ಸಿಸಿಟಿವಿ ಕ್ಯಾಮೆರಾಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ. ಬಳ್ಳಾರಿ ಹೊರ ವಲಯದ ಮೋಕಾ ಕಡೆಗೆ ಅಪಹರಣಕಾರರು ಹೋಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದ್ದು, ಈ ಮಾರ್ಗದ ಚೆಕ್‌ಪೋಸ್ಟ್‌ಗಳಲ್ಲಿ ಪರಿಶೀಲನೆ ತೀವ್ರಗೊಳಿಸಲಾಗಿದೆ. ಪ್ರಮುಖ ಪ್ರದೇಶಗಳಲ್ಲಿ ನಾಕಾಬಂಧಿ ಹಾಕಲಾಗಿದೆ. ಜಿಲ್ಲೆಯ ಪ್ರಮುಖ ಪೊಲೀಸ್ ಅಧಿಕಾರಿಗಳನ್ನು ತನಿಖೆಯಲ್ಲಿ ತೊಡಿಗಿಸಲಾಗಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶೋಭಾರಾಣಿ ವಿ.ಜೆ ಸ್ಥಳ ಪರಿಶೀಲನೆ ನಡೆಸಿದ್ದು, ತನಿಖಾ ತಂಡಕ್ಕೆ ಸಲಹೆ ಸೂಚನೆ ನೀಡಿದ್ದಾರೆ.