ಬೆಂಗಳೂರು: ರಾಜರಾಜೇಶ್ವರಿ ನಗರದ ಶೆಡ್ ಒಂದರಲ್ಲಿ ನಡೆದ ಭೀಕರ ದುಷ್ಕೃತ್ಯದಲ್ಲಿ ಪೊಲೀಸರು ಐಪಿಸಿ ಸೆಕ್ಷನ್ 302ರ ಅನ್ವಯ ಪ್ರಕರಣ ದಾಖಲಿಸಿಕೊಂಡಿದ್ದು, ಪ್ರಕರಣದ ಮೊದಲ ಆರೋಪಿಯಾಗಿ ಪವಿತ್ರ ಗೌಡ ಅವರನ್ನು ನಮೂದಿಸಲಾಗಿದೆ.
ಇಡೀ ಘಟನೆಯ ಕೇಂದ್ರಬಿಂದು ಪವಿತ್ರ ಗೌಡ ಅವರೇ ಆಗಿರುವ ಹಿನ್ನೆಲೆಯಲ್ಲಿ ಅವರ ಸೂಚನೆಯ ಮೇರೆಗೆ ಮತ್ತು ಅವರ ಸಮ್ಮುಖದಲ್ಲೇ ಕೊಲೆ ನಡೆದಿರುವ ಹಿನ್ನೆಲೆಯಲ್ಲಿ ಆಕೆಯನ್ನು ಎ-1 ಆರೋಪಿಯನ್ನಾಗಿ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಚಿತ್ರದುರ್ಗ ನಿವಾಸಿ, ಅಪೋಲೋ ಫಾರ್ಮಸಿಯಲ್ಲಿ ಕೆಲಸ ಮಾಡುವ 33 ವರ್ಷದ ಯುವಕ ರೇಣುಕಾಸ್ವಾಮಿ ಎಂಬಾತ ಪವಿತ್ರಗೌಡ ಅವರಿಗೆ ಕೆಟ್ಟದಾಗಿ ಸಂದೇಶ ಕಳಿಸಿದ್ದ ಹಿನ್ನೆಲೆಯಲ್ಲಿ ಅವರು ಆಕ್ರೋಶಿತರಾಗಿದ್ದರು. ಇದೇ ಕಾರಣಕ್ಕೆ ಆತನಿಗೆ ಪಾಠ ಕಲಿಸುವಂತೆ ದರ್ಶನ್ ಅವರಿಗೆ ದುಂಬಾಲು ಬಿದ್ದಿದ್ದರು. ಈ ಹಿನ್ನೆಲೆಯಲ್ಲಿ ದರ್ಶನ್ ಸೂಚನೆಯ ಮೇರೆಗೆ ರೇಣುಕಾಸ್ವಾಮಿಯನ್ನು ಕಿಡ್ನಾಪ್ ಮಾಡಲಾಗಿತ್ತು.
ಸೆಪ್ಟೆಂಬರ್ 8ರಂದು ಬೆಂಗಳೂರಿಗೆ ಕರೆಯಿಸಿಕೊಂಡು, ರಾಜರಾಜೇಶ್ವರಿ ನಗರ ಠಾಣೆ ವ್ಯಾಪ್ತಿಯ ಪಟ್ಟಣಗೆರೆಯ ಶೆಡ್ ಒಂದರಲ್ಲಿ ಕೂಡಿಟ್ಟುಕೊಂಡು ಚಿತ್ರಹಿಂಸೆ ನೀಡಿ ಕೊಲೆ ಮಾಡಲಾಗಿತ್ತು. ನಂತರ ಆತನ ಮೃತದೇಹವನ್ನು ಸುಮನಹಳ್ಳಿ ಸಮೀಪದ ರಾಜಾಕಾಲುವೆ ಬಳಿ ಎಸೆದು ಹೋಗಲಾಗಿತ್ತು. ಮೃತದೇಹ ಪತ್ತೆಯಾಗುತ್ತಿದ್ದಂತೆ ತನಿಖೆ ಆರಂಭಿಸಿದ ಕಾಮಾಕ್ಷಿಪಾಳ್ಯ ಪೊಲೀಸರು ಮೃತನ ಗುರುತು ಪತ್ತೆ ಮಾಡಿದ್ದಲ್ಲದೆ ಕೊಲೆಯ ಸಂಚನ್ನು ಕಂಡುಹಿಡಿಯುವಲ್ಲಿ ಯಶಸ್ವಿಯಾಗಿದ್ದರು.
ಇಂದು ಬೆಳಿಗ್ಗೆ ಮೈಸೂರಿನ RADISON BLUE ಹೊಟೇಲ್ ನಲ್ಲಿ ಜಿಮ್ ಮಾಡುತ್ತಿದ್ದ ನಟ ದರ್ಶನ್ ಇನ್ನೇನು ತಮ್ಮ ಸಿನಿಮಾದ ಶೂಟಿಂಗ್ ಗೆ ಹೋಗಬೇಕಿತ್ತು. ಈ ಸಂದರ್ಭದಲ್ಲಿ ಆಗಮಿಸಿದ ಕಾಮಾಕ್ಷಿಪಾಳ್ಯ ಪೊಲೀಸರು ದರ್ಶನ್ ಅವರನ್ನು ವಶಕ್ಕೆ ಪಡೆದು ಬೆಂಗಳೂರಿಗೆ ಕರೆತಂದರು. ಈ ನಡುವೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಎಲ್ಲ ಆರೋಪಿಗಳನ್ನೂ ಹಲವೆಡೆ ಬಂಧಿಸಿ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆ ನಡೆಸಲಾಗಿತ್ತು. ಮತ್ತೊಂದೆಡೆ ಪ್ರಕರಣದ ಕೇಂದ್ರಬಿಂದುವಾಗಿರುವ ದರ್ಶನ್ ಗೆಳತಿ ಮತ್ತು ಚಿತ್ರನಟಿ ಪವಿತ್ರಾ ಗೌಡ ಅವರನ್ನು ಸಹ ಪೊಲೀಸರು ವಶಕ್ಕೆ ಪಡೆದಿದ್ದರು. ಪ್ರಕರಣದಲ್ಲಿ ಈಗ ಬಂಧಿತರ ಸಂಖ್ಯೆ ಒಟ್ಟು 13 ಆಗಿದೆ.
ದರ್ಶನ್ ಸೇರಿದಂತೆ ಎಲ್ಲಾ 13 ಆರೋಪಿಗಳಿಗೆ ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು, ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತಾದರೂ, ಕೋರ್ಟ್ ವೇಳೆ ಮುಗಿದ್ದಿದ್ದರೆ, ನ್ಯಾಯಾಧೀಶರ ನಿವಾಸದಲ್ಲಿ ಅವರನ್ನು ಹಾಜರುಪಡಿಸುವಂತೆ ಸೂಚಿಸಲಾಗಿದೆ.