“ಮೊಹಮ್ಮದ್ ಅಬ್ದುಲ್ ಸಮದ್ ವಿರುದ್ಧ ತೆಲಂಗಾಣ ರಾಜ್ಯ ಮತ್ತು ಇನ್ನೊಬ್ಬರು, ಕ್ರಿಮಿನಲ್ ಅಪೀಲು ಪ್ರಕರಣ ಸಂಖ್ಯೆ 2842/2924” ರಲ್ಲಿ ಕಳೆದ ಜುಲೈ ಹತ್ತನೇ ತಾರೀಖಿನಂದು ಸರ್ವೋಚ್ಚ ನ್ಯಾಯಾಲಯ ನೀಡಿರುವ ತೀರ್ಪು ಬಹಳ ಮಹತ್ವದೆನಿಸುತ್ತದೆ. ವಿವಾಹ ವಿಚ್ಛೇದನಕ್ಕೆ ಒಳಗಾದ ಮುಸ್ಲಿಂ ಮಹಿಳೆ ಎಲ್ಲಾ ಮೂರು ಕಾನೂನುಗಳ ಅಡಿಯಲ್ಲಿ ಪರಿಹಾರ ಪಡೆಯ ಬಹುದು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದು ಈ ಮುಖಾಂತರ ಈಗ ಗೊಂದಲಗಳಿಗೂ ತೆರೆ ಬಿದ್ದಿದೆ- ಶಫೀರ್ ಎ ಎ, ವಕೀಲರು.
ವಿವಾಹ ವಿಚ್ಛೇದಿತ ಮುಸ್ಲಿಮ್ ಮಹಿಳೆಯ ಜೀವನಾಂಶದ ಹಕ್ಕಿನ ಕುರಿತು ಮಾನ್ಯ ಸರ್ವೋಚ್ಚ ನ್ಯಾಯಾಲಯವು ಇತ್ತೀಚೆಗೆ ಅತ್ಯಂತ ಮಹತ್ವದ ಒಂದು ತೀರ್ಪನ್ನು ನೀಡಿದೆ. ಮೊಹಮ್ಮದ್ ಅಬ್ದುಲ್ ಸಮದ್ ವಿರುದ್ಧ ತೆಲಂಗಾಣ ರಾಜ್ಯ ಮತ್ತು ಇನ್ನೊಬ್ಬರು, ಕ್ರಿಮಿನಲ್ ಅಪೀಲು ಪ್ರಕರಣ ಸಂಖ್ಯೆ 2842/2924 ರಲ್ಲಿ ಕಳೆದ ಜುಲೈ ಹತ್ತನೇ ತಾರೀಖಿನಂದು ಸರ್ವೋಚ್ಚ ನ್ಯಾಯಾಲಯ ನೀಡಿರುವ ತೀರ್ಪಿನಲ್ಲಿ ವಿವಾಹ ವಿಚ್ಛೇದಿತ ಮುಸ್ಲಿಮ್ ಮಹಿಳೆಯ ಜೀವನಾಂಶದ ಹಕ್ಕನ್ನು ವೈಯುಕ್ತಿಕ ಕಾನೂನಿನ ಆಚೆಗೂ ವಿಸ್ತರಿಸಿ ವಿವಾಹ ವಿಚ್ಛೇದನದ ನಂತರವೂ ಮುಸ್ಲಿಮ್ ಮಹಿಳೆ ತನ್ನ ಮಾಜಿ ಪತಿಯಿಂದ ಕ್ರಿಮಿನಲ್ ಪ್ರೊಸೀಜರ್ ಕೋಡ್ – ಸೆಕ್ಷನ್ 125 (ಭಾರತೀಯ ನಾಗರೀಕ ಸುರಕ್ಷಾ ಸಂಹಿತಾ, ಸೆಕ್ಷನ್ 144) ರ ಅಡಿಯಲ್ಲಿ ಜೀವನಾಂಶ ಪಡೆಯಲು ಅರ್ಹಳು ಎಂದು ಪುನರುಚ್ಚರಿಸಲಾಗಿದೆ.
ಯಾವುದೇ ಸಕಾರಣವಿಲ್ಲದೆ ಪುರುಷನೊಬ್ಬ ತನ್ನ ಪತ್ನಿ, ಅಪ್ರಾಪ್ತ ಮಕ್ಕಳು, ಅವಿವಾಹಿತ ಹೆಣ್ಣು ಮಕ್ಕಳು ಮತ್ತು ವಯಸ್ಸಾದ ಪೋಷಕರನ್ನು ಪಾಲನೆ ಮಾಡದೇ ಅಥವಾ ಜೀವನಾಂಶ ನೀಡದೆ ನಿರ್ಲಕ್ಷಿಸುವಂತಿಲ್ಲ.
ಕ್ರಿಮಿನಲ್ ಪ್ರೊಸೀಜರ್ ಕೋಡ್ – ಸೆಕ್ಷನ್ 125 (ಭಾರತೀಯ ನಾಗರೀಕ ಸುರಕ್ಷಾ ಸಂಹಿತಾ, ಸೆಕ್ಷನ್ 144) ಹೇಳುವುದು ಇದನ್ನೇ. ಈ ಸೆಕ್ಷನ್ ಪ್ರಕಾರ ಒಬ್ಬ ಪುರುಷ ತನಗೆ ಸರಿಯಾದ ಸಾಮರ್ಥ್ಯ ಇದ್ದೂ ಗಳಿಕೆ ಇಲ್ಲದ ತನ್ನ ಪತ್ನಿ, ಅಪ್ರಾಪ್ತ ಮಕ್ಕಳು, ಅವಿವಾಹಿತ ಹೆಣ್ಣು ಮಕ್ಕಳು ಮತ್ತು ವಯಸ್ಸಾದ ಪೋಷಕರನ್ನು ಪಾಲನೆ ಮಾಡದೇ ಅಥವಾ ಜೀವನಾಂಶ ನೀಡದೆ ನಿರ್ಲಕ್ಷಿಸಿದರೆ ನೊಂದವರು ಜೆ. ಎಂ. ಎಫ್.ಸಿ ನ್ಯಾಯಾಲಯದ ಮೊರೆ ಹೋಗ ಬಹುದು. ಅಂತಹ ಪ್ರಕರಣದಲ್ಲಿ ನ್ಯಾಯಿಕ ಮ್ಯಾಜಿಸ್ಟ್ರೇಟ್ ರವರು ಈ ಬಗ್ಗೆ ವಿಚಾರಣೆ ನಡೆಸಿ ಎದುರುದಾರರ ನಿರ್ಲಕ್ಷ್ಯ ಸಾಬೀತಾದಲ್ಲಿ ಎದುರುದಾರರು ಅರ್ಜಿದಾರರಿಗೆ ಮಾಸಿಕ ಇಂತಿಷ್ಟು ಜೀವನಾಂಶ ನೀಡ ಬೇಕೆಂದು ಆದೇಶಿಸ ಬಹುದು. ಈ ಸೆಕ್ಷನ್ ವಿಚ್ಛೇದಿತ ಮುಸ್ಲಿಂ ಮಹಿಳೆಗೂ ಅನ್ವಯಿಸುತ್ತದೆ ಮತ್ತು ಆಕೆ ತನಗೆ ವಿಚ್ಛೇದನ ನೀಡಿದ ಗಂಡನಿಂದ ತನ್ನ ಪುನರ್ ವಿವಾಹದವರೆಗೂ ಜೀವನಾಂಶ ಪಡೆಯಲು ಅರ್ಹಳು ಎಂದು ಮೊದಲ ಬಾರಿಗೆ “ಮೊಹಮ್ಮದ್ ಅಹಮದ್ ಖಾನ್ ವಿರುದ್ಧ ಶಾಬಾನು ಬೇಗಂ” ಪ್ರಕರಣದಲ್ಲಿ 1985 ರಲ್ಲಿ ಸರ್ವೋಚ್ಛ ನ್ಯಾಯಾಲಯವು ತೀರ್ಪು ನೀಡಿತ್ತು.
ಶಾಬಾನು ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ಈ ಐತಿಹಾಸಿಕ ತೀರ್ಪು ಸಂಪ್ರದಾಯವಾದಿ ಮುಸ್ಲಿಮರ ತೀವ್ರ ಅಸಮಾಧಾನಕ್ಕೆ ಕಾರಣವಾಗಿತ್ತು. ಇಸ್ಲಾಮ್ ನಂಬಿಕೆಯ ಪ್ರಕಾರ ಓರ್ವ ಮಹಿಳೆ ಇತರೆ ಪುರುಷನ ಕಡೆಯಿಂದ ಏನನ್ನೂ ಪಡೆಯುವಂತಿಲ್ಲ. ತನ್ನ ತಂದೆ, ಗಂಡು ಮಕ್ಕಳು , ಸಹೋದರರು ಮತ್ತು ಹತ್ತಿರದ ಸಂಬಂಧಿಗಳನ್ನು ಹೊರತು ಪಡಿಸಿ ಇತರೆ ಪುರುಷನ ಕಡೆಯಿಂದ ಮುಸ್ಲಿಂ ಮಹಿಳೆ ಏನನ್ನಾದರೂ ಪಡೆಯುವುದು ಧರ್ಮದ ಪ್ರಕಾರ ನಿಷಿದ್ಧ. ತಲಾಕ್ ಅಥವಾ ವಿವಾಹ ವಿಚ್ಛೇದನದ ನಂತರ ವಿಚ್ಛೇದಿತ ಪತಿ ಮತ್ತು ಪತ್ನಿ ಮಧ್ಯೆ ಯಾವ ವ್ಯವಹಾರಕ್ಕೂ ಇಸ್ಲಾಮ್ ಅವಕಾಶ ನೀಡುವುದಿಲ್ಲ. ಇದೇ ಕಾರಣಕ್ಕೆ ವಿವಾಹ ವಿಚ್ಛೇದನದ ನಂತರವೂ ವಿಚ್ಛೇದಿತ ಪತ್ನಿಗೆ ಮುಸ್ಲಿಮ್ ಪತಿ ಜೀವನಾಂಶ ನೀಡಬೇಕು ಎಂಬ ತೀರ್ಪು ಮುಸ್ಲಿಂ ಸಂಪ್ರದಾಯವಾದಿಗಳ ಚಡಪಡಿಕೆಗೆ ಕಾರಣವಾಗುತ್ತದೆ. ಸೆಕ್ಯುಲರಿಸಮ್ ಮತ್ತು ಸಮಾನತೆಯ ಹೆಸರಿನಲ್ಲಿ ತಮ್ಮ ಶರಿಯತ್ ಮತ್ತು ತಮ್ಮ ಪರ್ಸನಲ್ ಲಾ ಇವುಗಳ ಮೇಲೆ ಶಾಸಕಾಂಗ ಮತ್ತು ನ್ಯಾಯಾಂಗದಿಂದ ದಾಳಿಯಾಗುತ್ತಿದೆ ಎಂದು ಮುಸ್ಲಿಂ ಪುರೋಹಿತ ವರ್ಗ ಮತ್ತು ಸಂಪ್ರದಾಯವಾದಿಗಳು ಭಾವಿಸಿದ್ದಾರೆ.
ಶಾಬಾನು ಪ್ರಕರಣದ ತೀರ್ಪಿನ ನಂತರ ಅಂದಿನ ಸರಕಾರ ವಿವಾಹ ವಿಚ್ಛೇದಿತ ಮುಸ್ಲಿಮ್ ಮಹಿಳೆಯ ಹಕ್ಕುಗಳ ಸಂರಕ್ಷಣೆಗಾಗಿ 1986 ರಲ್ಲಿ the Muslim Women ( Protection of rights on divorce) Act, 1986 ಕಾಯಿದೆಯನ್ನು ಜಾರಿಗೆ ತಂದಿತು. ಈ ಕಾಯಿದೆಯು ವಿವಾಹ ವಿಚ್ಛೇದನ ನೀಡಿದ ಮುಸ್ಲಿಂ ಪತಿ ತನ್ನ ವಿಚ್ಛೇದಿತ ಪತ್ನಿಗೆ ಇದ್ದತ್ ಅವಧಿಯ (ವಿಚ್ಛೇದನದ ನಂತರ ಮರು ವಿವಾಹಕ್ಕೆ ಮುನ್ನ ಮಹಿಳೆ ಕಡ್ಡಾಯವಾಗಿ ಅನುಸರಿಸ ಬೇಕಾದ ಕೂಲಿಂಗ್ ಪಿರೇಡ್) ಒಳಗಾಗಿ ಮುಂದಿನ ಜೀವನಕ್ಕಾಗಿ ಜೀವನಾಂಶ ನೀಡಬೇಕೆಂದು ಕಡ್ಡಾಯ ಪಡಿಸಿತು. ಈ ಕಾಯಿದೆಯು ವಿಚ್ಛೇದಿತ ಮುಸ್ಲಿಂ ಮಹಿಳೆಯು ಕ್ರಿಮಿನಲ್ ಪ್ರೊಸೀಜರ್ ಕೋಡ್ – ಸೆಕ್ಷನ್ 125 ರ ಅಡಿಯಲ್ಲಿ ಜೀವನಾಂಶ ಪಡೆಯಲು ಸುಪ್ರೀಂ ಕೋರ್ಟ್ ಕೊಟ್ಟ ಅವಕಾಶವನ್ನು ಮೊಟಕುಗೊಳಿಸುತ್ತದೆ ಎಂಬ ಆರೋಪ ಮತ್ತು ಅಭಿಪ್ರಾಯ ಕಾನೂನು ತಜ್ಞರಿಂದ ಕೇಳಿ ಬಂತು.
ವಿವಾಹ ವಿಚ್ಛೇದಿತ ಮುಸ್ಲಿಮ್ ಮಹಿಳೆ ಸಹ ಕ್ರಿಮಿನಲ್ ಪ್ರೊಸೀಜರ್ ಕೋಡ್ – ಸೆಕ್ಷನ್ 125 ರ ಅಡಿಯಲ್ಲಿ ಜೀವನಾಂಶ ಪಡೆಯಲು ಅರ್ಹಳು ಎಂಬ ಶಾಬಾನು ಪ್ರಕರಣದ ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಅಪರಿಣಾಮಕಾರಿಗೊಳಿಸಿ ಮುಸ್ಲಿಂ ಸಂಪ್ರದಾಯವಾದಿಗಳನ್ನು ಓಲೈಸಿಕೊಂಡು ವೋಟ್ ಬ್ಯಾಂಕ್ ಗಟ್ಟಿಗೊಳಿಸಲು ಕೈಗೊಂಡ ಕ್ರಮ ಎಂಬ ಟೀಕೆಗೂ the Muslim Women ( Protection of rights on divorce) Act, 1986 ಒಳಗಾಗಿತ್ತು. ಈ ಕಾಯ್ದೆ ಜಾರಿಗೆ ಬಂದ ನಂತರ ಕ್ರಿಮಿನಲ್ ಪ್ರೊಸೀಜರ್ ಕೋಡ್ ಇದರ ಸೆಕ್ಷನ್ 125 ರ ಅಡಿಯಲ್ಲಿ ವಿಚ್ಛೇದಿತ ಮುಸ್ಲಿಂ ಮಹಿಳೆ ತನಗೆ ವಿಚ್ಛೇದನ ನೀಡಿದ ಗಂಡನಿಂದ ಜೀವನಾಂಶ ಪಡೆಯಲು ಅವಕಾಶ ಇಲ್ಲ ಮತ್ತು ಆಕೆ the Muslim Women ( Protection of rights on divorce) Act, 1986 ರ ಅಡಿಯಲ್ಲಷ್ಟೇ ಜೀವನಾಂಶ ಪಡೆಯ ಬಹುದು ಎಂಬ ವಾದ ಮುನ್ನಲೆಗೆ ಬಂದಿತು.
ಬೇರೆ ಬೇರೆ ಉಚ್ಚ ನ್ಯಾಯಾಲಯಗಳು ಈ ಬಗ್ಗೆ ವಿಭಿನ್ನ ತೀರ್ಪು ಕೊಟ್ಟಿದ್ದರಿಂದ ಗೊಂದಲ ಏರ್ಪಟ್ಟಿತ್ತು. ಕೆಲವು ಉಚ್ಚ ನ್ಯಾಯಾಲಯಗಳು ವಿಚ್ಛೇದಿತ ಮುಸ್ಲಿಂ ಮಹಿಳೆ the Muslim Women (Protection of rights on divorce) Act, 1986 ಅಡಿಯಲ್ಲಷ್ಟೇ ಜೀವನಾಂಶ ಪಡೆಯಲು ಅರ್ಹಳು ಎಂದು ತೀರ್ಪು ಕೊಟ್ಟಿದ್ದವು. ಇನ್ನು ಕೆಲವು ಉಚ್ಚ ನ್ಯಾಯಾಲಯಗಳು ವಿವಾಹ ವಿಚ್ಛೇದಿತ ಮುಸ್ಲಿಂ ಮಹಿಳೆ the Muslim Women (Protection of rights on divorce) Act, 1986 ರ ಜೊತೆಗೆ ಕ್ರಿಮಿನಲ್ ಪ್ರೊಸೀಜರ್ ಕೋಡ್ – ಸೆಕ್ಷನ್ 125 ರ ಅಡಿಯಲ್ಲಿ ಸಹ ಜೀವನಾಂಶ ಪಡೆಯಲು ಅರ್ಹಳು ಎಂದು ಅಭಿಪ್ರಾಯ ಪಟ್ಟಿದ್ದವು.
ಈ ಮಧ್ಯೆ ವಿವಾಹ ವಿಚ್ಛೇದನಕ್ಕೆ ಸಂಬಂಧಿಸಿದಂತೆ ಮುಸ್ಲಿಂ ಶರಿಯತ್ ಕಾನೂನಿನ ಮೇಲೆ ಅತಿ ದೊಡ್ಡ ಪ್ರಹಾರ ಎಂಬಂತೆ 2019 ರಲ್ಲಿ ಜಾರಿಗೆ ತರಲಾದ the Muslim Women (Protection of Rights on Marriage) Act, 2019 (ಟ್ರಿಪಲ್ ತಲಾಖ್ ನಿಷೇಧ ಕಾಯಿದೆ) ವಿಚ್ಛೇದಿತ ಮುಸ್ಲಿಂ ಮಹಿಳೆಯ ಜೀವನಾಂಶದ ಹಕ್ಕಿನ ಕುರಿತಾದ ಸಮಸ್ಯೆಯನ್ನು ಮತ್ತಷ್ಟು ಜಟಿಲವಾಗಿಸಿತು. ಈ ಕಾಯಿದೆ ತ್ರಿವಳಿ ತಲಾಖ್ ಅನ್ನು ಕಾನೂನು ಬಾಹಿರ ಮತ್ತು ಮೂರು ವರ್ಷಗಳ ವರೆಗೆ ಜೈಲು ಶಿಕ್ಷೆಗೆ ಗುರಿಪಡಿಸ ಬಹುದಾದ ಅಪರಾಧ ಎಂದು ಪರಿಗಣಿಸುವುದರ ಜೊತೆಗೆ ನೊಂದ ಮಹಿಳೆಗೆ ಅದೇ ಕಾಯಿದೆಯ ಅಡಿಯಲ್ಲಿ ಗಂಡನಿಂದ ಭತ್ಯೆ ಮತ್ತು ಜೀವನಾಂಶ ಪಡೆಯುವ ಹಕ್ಕನ್ನು ನೀಡುತ್ತದೆ. ಟ್ರಿಪಲ್ ತಲಾಖ್ ಅಸಾಂವಿಧಾನಿಕ ಎಂದು 2017 ರಲ್ಲಿ ಸರ್ವೋಚ್ಚ ನ್ಯಾಯಾಲಯ ಐತಿಹಾಸಿಕ ತೀರ್ಪು ನೀಡಿದ ನಂತರ ಟ್ರಿಪಲ್ ತಲಾಖ್ ನಿಷೇಧ ಕಾಯಿದೆಯನ್ನು ರೂಪಿಸಲಾಯಿತು ಎಂಬುದು ಗಮನಾರ್ಹ. ಆದರೆ ಈ ಕಾಯಿದೆ ಸಹ ವಿಚ್ಛೇದಿತ ಮುಸ್ಲಿಂ ಮಹಿಳೆಯ ಜೀವನಾಂಶದ ಹಕ್ಕಿನ ಬಗ್ಗೆ ಈ ಹಿಂದೆ ಇದ್ದ ಗೊಂದಲಗಳನ್ನು ಸಮರ್ಪಕವಾಗಿ ನಿವಾರಿಸುವಲ್ಲಿ ಸೋತಿತ್ತು.
ಈ ಹಿನ್ನಲೆಯಲ್ಲಿ “ಮೊಹಮ್ಮದ್ ಅಬ್ದುಲ್ ಸಮದ್ ವಿರುದ್ಧ ತೆಲಂಗಾಣ ರಾಜ್ಯ ಮತ್ತು ಇನ್ನೊಬ್ಬರು, ಕ್ರಿಮಿನಲ್ ಅಪೀಲು ಪ್ರಕರಣ ಸಂಖ್ಯೆ 2842/2924” ರಲ್ಲಿ ಕಳೆದ ಜುಲೈ ಹತ್ತನೇ ತಾರೀಖಿನಂದು ಸರ್ವೋಚ್ಚ ನ್ಯಾಯಾಲಯ ನೀಡಿರುವ ತೀರ್ಪು ಬಹಳ ಮಹತ್ವದೆನಿಸುತ್ತದೆ. ವಿವಾಹ ವಿಚ್ಛೇದನಕ್ಕೆ ಒಳಗಾದ ಮುಸ್ಲಿಂ ಮಹಿಳೆ ಮೇಲಿನ ಎಲ್ಲಾ ಮೂರು ಕಾನೂನುಗಳ ಅಡಿಯಲ್ಲಿ ಪರಿಹಾರ ಪಡೆಯ ಬಹುದು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದು ಈ ಮುಖಾಂತರ ಈಗ ಗೊಂದಲಗಳಿಗೂ ತೆರೆ ಬಿದ್ದಿದೆ.
ಶಫೀರ್ ಎ ಎ
ಕಳೆದ ಹತ್ತು ವರ್ಷಗಳಿಂದ ಕರ್ನಾಟಕದಲ್ಲಿ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿ ಇತ್ತೀಚೆಗೆ ತಾವೇ ನಿವೃತ್ತಿಯನ್ನು ಪಡೆದು ಮತ್ತೆ ವಕೀಲರಾಗಿ ಸಕ್ರಿಯರಾಗಿದ್ದಾರೆ. ಸದಾ ಸಮಾಜಮುಖಿ ಚಿಂತನೆ,ಬರೆಹಗಳಲ್ಲಿ ತೊಡಗಿಕೊಂಡಿದ್ದಾರೆ. ಮೊ : 9342104296
ಇದನ್ನು ಓದಿದ್ದೀರಾ? ಮುಸ್ಲಿಂ ಮಹಿಳೆ ಮತ್ತು ಷರಿಯತ್