ಸಂಸತ್‌ ಆವರಣದಲ್ಲಿ ಕಪ್ಪು ಮಾಸ್ಕ್‌ ಧರಿಸಿ ಪ್ರತಿಭಟನೆ

Most read

ನವದೆಹಲಿ: ಉದ್ಯಮಿ ಗೌತಮ್‌ ಅದಾನಿ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಸಹ ಪ್ರತಿಪಕ್ಷಗಳ ನಾಯಕರು ಸಂಸತ್ ಆವರಣದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ʼಮೋದಿ-ಅದಾನಿ ಭಾಯ್ ಭಾಯ್’ ಎಂದು ಬರೆದಿರುವ ಕಪ್ಪು ಮಾಸ್ಕ್ ಧರಿಸಿ ವಿಪಕ್ಷಗಳ ನಾಯಕರು ಪ್ರಧಾನಿ ನರೇಂದ್ರ ಮೋದಿ ಹಾಗೂ ಗೌತಮ್ ಅದಾನಿ ವಿರುದ್ಧ ಘೋಷಣೆಗಳನ್ನು ಕೂಗಿದರು. ಲೋಕಸಭೆ ವಿಪಕ್ಷ  ನಾಯಕ ರಾಹುಲ್ ಗಾಂಧಿ, ವಯನಾಡು ಲೋಕಸಭಾ ಕ್ಷೇತ್ರದ ಸಂಸದೆ, ರಾಹುಲ್‌ ಸಹೋದರಿ ಪ್ರಿಯಾಂಕಾ ಗಾಂಧಿ ಸಂವಿಧಾನದ ಪ್ರತಿ ಹಿಡಿದು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ‘ಇಂಡಿಯಾ’ ಮೈತ್ರಿಕೂಟದ ಪಕ್ಷಗಳಾದ ಆರ್‌ಜೆಡಿ, ಜೆಎಂಎಂ ಸಂಸದರೂ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.

ಆದರೆ ಟಿಎಂಸಿ ಹಾಗೂ ಸಮಾಜವಾದಿ ಪಕ್ಷದ ಸದಸ್ಯರು ಪ್ರತಿಭಟನೆಯಿಂದ ದೂರ ಉಳಿದಿದ್ದರು. ನಂತರ ಮಾಧ್ಯಮಗಳ ಜತೆ ಮಾತನಾಡಿದ ಪ್ರಿಯಾಂಕಾ ಗಾಂಧಿ, ಗೌತಮ್ ಅದಾನಿ ಪ್ರಕರಣದಲ್ಲಿ ಚರ್ಚೆ ನಡೆಸಲು ಪ್ರಧಾನಿ ಮೋದಿ ಹೆದರುತ್ತಾರೆ ಎಂದು ಆರೋಪಿಸಿದರು. ಗುರುವಾರ ‘ಮೋದಿ ಅದಾನಿ ಏಕ್ ಹೈ’, ‘ಅದಾನಿ ಸೇಫ್ ಹೈ’ ಎಂದು ಬರೆದಿರುವ ಜಾಕೆಟ್ ಧರಿಸಿ ವಿಪಕ್ಷಗಳ ನಾಯಕರು ಪ್ರತಿಭಟನೆ ನಡೆಸಿದ್ದರು. ಅದಾನಿ ಪ್ರಕರಣದ ತನಿಖೆಗೆ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ರಚಿಸಬೇಕು ಎಂದು ವಿರೋಧ ಪಕ್ಷದ ನಾಯಕರು ಒತ್ತಾಯಿಸುತ್ತಲೇ ಬಂದಿದ್ದಾರೆ.

More articles

Latest article