ಸಮಾನಾಂತರ ಜಲಾಶಯ ನಿರ್ಮಾಣ: ಚಂದ್ರಬಾಬು ನಾಯ್ಡು ಭೇಟಿ ಶೀಘ್ರ: ಡಿಕೆಶಿ

Most read

ಕಲಬುರಗಿ: ಪ್ರತಿ ವರ್ಷ ಸುಮಾರು 25 ಟಿಎಂಸಿ ಅಡಿ ನಮ್ಮ ಪಾಲಿನ ನೀರು ಆಂಧ್ರಪ್ರದೇಶಕ್ಕೆ ಹರಿದು ಹೋಗುತ್ತಿದ್ದು, ನವಲಿ ಸಮಾನಾಂತರ ಜಲಾಶಯ ನಿರ್ಮಾಣ ಕುರಿತು ಚರ್ಚಿಸಲು ಆಂಧ್ರ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಅವರ ಸಮಯ ಕೇಳಿದ್ದೇನೆ ಎಂದು ಜಲಸಂಪನ್ಮೂಲ ಸಚಿವರೂ ಆದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನವಲಿ ಸಮಾನಾಂತರ ಜಲಾಶಯದ ಬದಲು ಬೇರೊಂದು ಜಲಾಶಯ ನಿರ್ಮಿಸುವ ಪ್ರಸ್ತಾವವೂ ಇದೆ. ಆ ಬಗ್ಗೆ ನಾಯ್ಡು ಅವರೊಂದಿಗೆ ಚರ್ಚಿಸಲಾಗುವುದು ಎಂದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಾಂತ್ರಿಕ ಸಲಹೆಗಾರರಾಗಿರುವ ಕನ್ಹಯ್ಯ ನಾಯ್ಡು ಅವರೂ ಜಲಾಶಯ ನಿರ್ಮಾಣದ ಬಗ್ಗೆ ಮಾಹಿತಿ ಹಂಚಿಕೊಳ್ಳಲಿದ್ದಾರೆ ಎಂದರು.

ಗ್ಯಾರಂಟಿ ಯೋಜನೆಗಳನ್ನು ಮುಂದುವರೆಸುವುದರ ಜೊತೆಗೆ ಪ್ರಮುಖ ನೀರಾವರಿ ಯೋಜನೆಗಳಿಗೆ ₹ 22 ಸಾವಿರ ಕೋಟಿ ಅನುದಾನ ಹಂಚಿಕೆ ಮಾಡಲಾಗಿದೆ ಎಂದರು.

ಕಲ್ಯಾಣ ಕರ್ನಾಟಕಕ್ಕೆ ಅನ್ಯಾಯವಿಲ್ಲ: ಕಲ್ಯಾಣ ‌ಕರ್ನಾಟಕದ ಜಿಲ್ಲೆಗಳಿಗೆ ಕೆಕೆಆರ್ ಡಿಬಿಯಿಂದ ಅನುದಾನ ನೀಡುವುದರ ಜೊತೆಗೆ ವಿವಿಧ ಇಲಾಖೆಯಿಂದಲೂ ಅನುದಾನ ನೀಡಲಾಗಿದೆ. ಪ್ರಸಕ್ತ ವರ್ಷವೂ ಮಂಡಳಿಗೆ ₹ 5000 ಕೋಟಿ ರೂಪಾಯಿ ಅನುದಾನ ಘೋಷಿಸಲಾಗಿದೆ. ಹಾಗೆ ನೋಡಿದರೆ ನೀವು‌ (ಕಲ್ಯಾಣ ‌ಕರ್ನಾಟಕ) ಮುಂದೆ ಇದ್ದೀರಿ‌. ನಿಮಗೆ ಹೆಚ್ಚಿನ ಪಾಲು‌ ಕೊಟ್ಟಿದ್ದನ್ನು ನೋಡಿ ನಮ್ಮವರು (ಕನಕಪುರ) ನನ್ನೊಂದಿಗೆ ಜಗಳ ಶುರು ಮಾಡಿದ್ದಾರೆ ಎಂದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ‘ಕಲ್ಯಾಣ ಕರ್ನಾಟಕದ ರಸ್ತೆಗಳ ಅಭಿವೃದ್ಧಿಗೆ ₹ 1000 ಕೋಟಿ ಖರ್ಚು ಮಾಡಲಾಗುತ್ತಿದ್ದು, ಇದರೊಂದಿಗೆ ಪ್ರಗತಿಪಥ ಯೋಜನೆಯಡಿ‌‌ ಹೆಚ್ಚುವರಿ ₹ 1000 ಕೋಟಿಯೂ ಕಲ್ಯಾಣ ‌ಕರ್ನಾಟಕಕ್ಕೆ ಸಿಗಲಿದೆ’ ಎಂದು ಸ್ಪಷ್ಟಪಡಿಸಿದರು. ಕೆಕೆಆರ್ ಡಿಬಿ ಅಧ್ಯಕ್ಷ ಡಾ. ಅಜಯ್ ಸಿಂಗ್ ಮಾತನಾಡಿ, ‘ಮಂಡಳಿಯಿಂದ ಈ ಬಾರಿ ದಾಖಲೆಯ ₹ 3000 ಕೋಟಿ ಹಣವನ್ನು ಖರ್ಚು ಮಾಡಲಾಗಿದೆ. ಬರುವ ವರ್ಷ ₹ 5000 ಕೋಟಿ ಖರ್ಚು ಮಾಡಲಾಗುವುದು’ ಎಂದರು.

More articles

Latest article