ಪ್ಯಾರಾಚೂಟ್‌ ಕೈಕೊಟ್ಟು ಸಾವು: ನಾಳೆ ಸಂಕೂರಿನಲ್ಲಿ ಯೋಧ ಮಂಜುನಾಥ್‌ ಅಂತ್ಯಕ್ರಿಯೆ

Most read

ಶಿವಮೊಗ್ಗ:  ಉತ್ತರ ಪ್ರದೇಶದ ಆಗ್ರಾದಲ್ಲಿ ತರಬೇತಿ ಸಂದರ್ಭದಲ್ಲಿ ವಿಮಾನದಿಂದ ಕೆಳಗೆ ಹಾರಿದಾಗ ಪ್ಯಾರಾಚೂಟ್‌ ತೆರೆದುಕೊಳ್ಳದೇ ಮೃತಪಟ್ಟ ಹೊಸನಗರ ತಾಲ್ಲೂಕಿನ ಸಂಕೂರು ಗ್ರಾಮದ ವಾಯುಪಡೆಯ ವಾರೆಂಟ್‌ ಅಧಿಕಾರಿ ಜಿ.ಎಸ್. ಮಂಜುನಾಥ್‌ ಅವರ ಅಂತ್ಯಕ್ರಿಯೆ ನಾಳೆ ಭಾನುವಾರ ಜರುಗಲಿದೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ. ನಾಳೆ ಬೆಳಿಗ್ಗೆ 7 ರಿಂದ 8 ಗಂಟೆಯವರೆಗೆ ಹೊಸನಗರ ಮುಖ್ಯ ರಸ್ತೆಯಲ್ಲಿ ಪಾರ್ಥಿವ ಶರೀರದ ಅಂತಿಮ ಯಾತ್ರೆ ನಡೆಯಲಿದೆ. ನಂತರ ಹೊಸನಗರದ ಮಾವಿನಕೊಪ್ಪ ವೃತ್ತದಿಂದ ತಾಲೂಕು ಕಚೇರಿ ಮುಂಭಾಗದ ಮುಖಾಂತರ ಸಂಕೂರು ಗ್ರಾಮಕ್ಕೆ ಪಟ್ಟಗುಪ್ಪ ಮಾರ್ಗವಾಗಿ ಮೆರವಣಿಗೆ ಮೂಲಕ ಆಗಮಿಸಲಿದೆ. ನಂತರ ತಾಲೂಕಿನ ಜೇನಿ ಗ್ರಾಮದ ಸಂಕೂರಿನಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ಮೃತರ ಅಂತ್ಯಕ್ರಿಯೆಯನ್ನು ಬೆಳಗ್ಗೆ 11 ಗಂಟೆಗೆ ನೆರವೇರಿಸಲಾಗುತ್ತಿದೆ. ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವ ದೊಂದಿಗೆ ನಡೆಯಲಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.

 ಉತ್ತರ ಪ್ರದೇಶದ ಆಗ್ರಾದಲ್ಲಿ ಶುಕ್ರವಾರ ತರಬೇತಿ ಸಂದರ್ಭದಲ್ಲಿ ವಿಮಾನದಿಂದ ಕೆಳಗೆ ಹಾರಿದಾಗ ಪ್ಯಾರಾಚೂಟ್‌ ತೆರೆದುಕೊಳ್ಳದೇ ವಾಯುಪಡೆಯ ವಾರೆಂಟ್‌ ಅಧಿಕಾರಿ ಜಿ.ಎಸ್. ಮಂಜುನಾಥ್‌ (36) ಮೃತಪಟ್ಟಿದ್ದಾರೆ. ಆಗ್ರಾದಲ್ಲಿ ಭಾರತೀಯ ವಾಯು ಸೇನೆಗೆ ಸೇರಿದ ಮಾಲ್ಪುರ ಪ್ಯಾರಾಚೂಟ್‌ ಡ್ರಾಪ್‌ ಜೋನ್‌ನಲ್ಲಿ ತರಬೇತಿ ನಡೆಯುತ್ತಿತ್ತು. ವಾಯುಸೇನೆಯ 12 ಅಧಿಕಾರಿಗಳು ಪ್ಯಾರಾಚೂಟ್‌ ತರಬೇತಿಗೆ ವಿಮಾನದಿಂದ ಜಿಗಿದಿದ್ದರು. 11 ಮಂದಿ ಮಾತ್ರ ಪ್ಯಾರಾಚೂಟ್‌ ಬಳಸಿ ಸುರಕ್ಷಿತವಾಗಿ ಲ್ಯಾಂಡ್‌ ಆಗಿದ್ದರು. ಆದರೆ ಮಂಜುನಾಥ್‌ ನಾಪತ್ತೆಯಾಗಿದ್ದರು. ಶೋಧ ನಡೆಸಿದಾಗ ಸಮೀಪದ ಜಮೀನಿನಲ್ಲಿ ಗಾಯಗೊಂಡ ಸ್ಥಿತಿಯಲ್ಲಿ ಮಂಜುನಾಥ್ ಪತ್ತೆಯಾಗಿದ್ದರು. ಕೂಡಲೆ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಂಜುನಾಥ್ ಅವರಿಗೆ ತಂದೆ ಸುರೇಶ್‌, ತಾಯಿ ನಾಗರತ್ನ, ಇಬ್ಬರು ಸಹೋದರಿಯರು, ಒಬ್ಬ ಸಹೋದರ ಇದ್ದಾರೆ.

ಮಂಜುನಾಥ್‌ ಸಾಗರದಲ್ಲಿ ಪಿಯುಸಿ ಪೂರ್ಣಗೊಳಿಸಿದ್ದರು. ಬಳಿಕ ಭಾರತೀಯ ವಾಯು ಸೇನೆಗೆ ಸೇರಿದ್ದರು. ವೈ ಗ್ರೇಡ್‌ ಅಧಿಕಾರಿಯಾಗಿದ್ದ ವಾರಂಟ್‌ ಅಫೀಸರ್‌ ಮಂಜುನಾಥ್‌, ಅಸ್ಸಾಂನಲ್ಲಿ ತಾಂತ್ರಿಕ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅಸ್ಸಾಂ ಮೂಲದ ಯುವತಿಯನ್ನು ಮದುವೆಯಾಗಿದ್ದರು.

More articles

Latest article