ಪುರೋಗಾಮಿ ನಿಲುವಿನ ಪಾಲ್ತಾಡಿ ರಾಮಕೃಷ್ಣ ಆಚಾರ್

Most read

ಖ್ಯಾತ ಸಾಹಿತಿ, ಜಾನಪದ ವಿದ್ವಾಂಸ, ಕಾದಂಬರಿಕಾರ ಪಾಲ್ತಾಡಿ ರಾಮಕೃಷ್ಣ ಆಚಾರ್ ಅವರು ಇತ್ತೀಚೆಗೆ (ಮೇ ೮) ನಿಧನರಾಗಿದ್ದಾರೆ. ಪುರೋಗಾಮಿ ನಿಲುವಿನ ಈ ವಿದ್ವಾಂಸರು ಕಣ್ಮರೆಯಾಗಿರುವುದು ಸಾಂಸ್ಕೃತಿಕ ಲೋಕಕ್ಕೆ ನಿಜವಾದ ನಷ್ಟವೆನ್ನಬಹುದು. ಅಗಲಿದ ಚೇತನಕ್ಕೆ ಶ್ರದ್ಧಾಂಜಲಿ ಸಲ್ಲಿಸುತ್ತಾ ನುಡಿ ನಮನ ಬರೆದಿದ್ದಾರೆ ಖ್ಯಾತ ಜಾನಪದ ವಿದ್ವಾಂಸ ಡಾ. ಗಣನಾಥ ಶೆಟ್ಟಿ ಎಕ್ಕಾರು.

ಒಬ್ಬ ಲೇಖಕ ಭಾರತೀಯ ಸಾಂವಿಧಾನಿಕ ಮೌಲ್ಯಗಳನ್ನು ಗೌರವಿಸುತ್ತಾನೆಂದರೆ ಅವನು ಇವತ್ತಿನ ಸಂದರ್ಭದಲ್ಲಿ ಮೌಲಿಕ ಲೇಖಕನೆಂದು ಅರ್ಥ. ದೇಶದ ಸ್ವಾತಂತ್ರ್ಯದ ಬಳಿಕ ರಾಷ್ಟ್ರೀಯತೆಯ ಪರಿಕಲ್ಪನೆಯಲ್ಲಿ ಇದು ಅತಿ ಮುಖ್ಯ. ಧರ್ಮ, ಜಾತಿ, ಲಿಂಗದ ಆಧಾರದಲ್ಲಿ ವಿಭಜಿಸಿ ಬರೆಯುತ್ತಾನೆಂದರೆ ಅವನು ಪ್ರತಿಗಾಮಿ ಲೇಖಕನೆಂದೇ ಅರ್ಥ.ಖಂಡಿತವಾಗಿಯೂ ಇಂತಹ ಬರಹಗಾರರಿಂದ ದೇಶದ ಪ್ರಜಾಪ್ರಭುತ್ವಕ್ಕೆ ಅಪಾಯ ತಪ್ಪಿದ್ದಲ್ಲ. ಈ ದೃಷ್ಟಿಯಿಂದ  ಇತ್ತೀಚೆಗೆ ನಿಧನರಾದ ಡಾ. ಪಾಲ್ತಾಡಿ ರಾಮಕೃಷ್ಣ ಆಚಾರ್ ನಮಗೆ ಬಹು  ಮುಖ್ಯರಾಗುತ್ತಾರೆ.

ಪಾಲ್ತಾಡಿಯವರದ್ದು ಇಂಗ್ಲೀಷ್‍ನ ‘ಸೆಲ್ಫ್ ಮೇಡ್’ ಅಂದರೆ ತನ್ನನ್ನೇ ತಾನು ರೂಪಿಸಿಕೊಂಡ ವ್ಯಕ್ತಿತ್ವ. ಶಾಲಾ ಶಿಕ್ಷಕರಾಗಿ, ಉಪನ್ಯಾಸಕರಾಗಿ, ಪ್ರಾಚಾರ್ಯರಾಗಿ, ತುಳು ಅಕಾಡೆಮಿಯ ರಿಜಿಸ್ಟ್ರಾರ್ ಮತ್ತು ಅಧ್ಯಕ್ಷರಾಗಿ ತುಳು-ಕನ್ನಡ ಬರಹಗಾರರಾಗಿ ಅವರು ಏರಿದ ಎತ್ತರ ಅಧ್ಯಯನಯೋಗ್ಯ. ಅವರ ಪುರೋಗಾಮಿ ನಿಲುವುಗಳನ್ನು ಅವರ ವ್ಯಕ್ತಿತ್ವ ಮತ್ತು ಬರಹ ಎರಡರಲ್ಲೂ ಗುರುತಿಸಬಹುದಾಗಿದೆ. ಅವರ ಸಂಶೋಧನೆ, ತುಳು ಜಾನಪದ ಕುರಿತಾದ ಬರಹಗಳು, ಅಕಾಡೆಮಿಯಲ್ಲಿ ಅವರ ಕಾರ್ಯನಿರ್ವಹಣೆ ಎಲ್ಲದರಲ್ಲೂ ಈ ನಿಲುವು ವ್ಯಕ್ತವಾಗುತ್ತದೆ.

ಒಬ್ಬ ಸಾಮಾನ್ಯ ಶಿಕ್ಷಕನಾಗಿದ್ದ ಪಾಲ್ತಾಡಿಯವರು ಶ್ರಮ, ಶ್ರದ್ಧೆ ಮತ್ತು ಜ್ಞಾನದಾಹದ ಕಾರಣದಿಂದ ಮೇರು ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಕಾರಣವಾಯಿತು. ತುಳು-ಕನ್ನಡದಲ್ಲಿ ಕಿರಣ, ಮೆಲುಕಾಡಿದಾಗ, ಪಚ್ಚೆಕುರಳ್, ದುನಿಪು ಇತ್ಯಾದಿ ಕವನ ಸಂಕಲನಗಳಲ್ಲಿ ಒಳ್ಳೆಯ ಕವನಗಳನ್ನು ಬರೆದ ಅವರ ಕೆಲವು ಕವನಗಳು ಹಾಡಿನ ಮೂಲಕ ಮನೆಮಾತಾಗಿವೆ. ಉತ್ತಮ ಅಧ್ಯಾಪಕ ಮತ್ತು  ಉಪನ್ಯಾಸಕರಾಗಿದ್ದ ಅವರು ಹಲವು ವಿದ್ಯಾರ್ಥಿಗಳು ಜೀವನದ ದಾರಿಯನ್ನು ಕಂಡು ಕೊಳ್ಳುವುದಕ್ಕೆ ಮಾರ್ಗದರ್ಶಕರಾಗಿದ್ದಾರೆ.

1830ರ ಸುಳ್ಯದ ಕ್ರಾಂತಿಯ  ಕೆದಂಬಾಡಿ ರಾಮೇಗೌಡರನ್ನು ಮೊದಲು ಪರಿಚಯಿಸಿದ ಕೀರ್ತಿಯು ಅವರದ್ದು. ಕೆನರಾ ರೈತ ಬಂಡಾಯದ ಕುರಿತಾದ ಅವರ ಕೃತಿ ಮುಂದಿನ ಅಧ್ಯಯನಗಳಿಗೆ ಕೈಪಿಡಿಯಾಯಿತು. ಈ ನೆಲದ ವಾರಸುದಾರರಾದ ದಲಿತರ ಬಗ್ಗೆ ಅವರ ಸಂಶೋಧನೆಗಳು ಮಹತ್ವದ್ದಾಗಿವೆ. ನಲಿಕೆ ಜನಾಂಗದ ಕುಣಿತಗಳ ಬಗೆಗಿನ ಅವರ ಸಂಶೋಧನಾಕೃತಿ ಆ ಜನಾಂಗದ ಅನನ್ಯತೆಯನ್ನು ಪರಿಚಯ ಮಾಡುತ್ತದೆ. ಜನಪದ ಕುಣಿತಗಳ ಕುರಿತಾಗಿ ಸೈದ್ಧಾಂತಿಕವಾಗಿ ನಡೆದ ಮಹತ್ವದ ಅಧ್ಯಯನ ಇದಾಗಿದೆ. ಈ ರೀತಿಯ ಮುಂದಿನ ಅಧ್ಯಯನಗಳಿಗೆ ಪ್ರೇರಣೆಯಾಗಿದೆ.  ತುಳುನಾಡಿನ ಪಾಣಾರ ಜನಾಂಗದ ಕುರಿತಾಗಿ ಅವರ ಪರಿಚಯಾತ್ಮಕ ಕೃತಿಯು ಮೌಲಿಕವಾದುದು. ತುಳುನಾಡಿನ ಮೂಲ ನಾಗಬೆರ್ಮೆರ ಬಗ್ಗೆ ಅವರ ಬರವಣಿಗೆ ನೈಜ ತುಳು ಸಂಸ್ಕೃತಿಯನ್ನು ಪರಿಚಯಿಸುತ್ತದೆ. ತುಳುನಾಡು ಒಂದು ಅವೈದಿಕ ಆಚರಣಾತ್ಮಕ ಸಂಸ್ಕೃತಿ ಎಂಬುದನ್ನು ಅವರ ಕೃತಿಗಳು ಸಾದರಪಡಿಸುತ್ತದೆ.

ಸಂವಹನ ಮಾಧ್ಯಮವಾಗಿ ಜಾನಪದ ಪರಿಸರ, ಜಾನಪದ ವೈದ್ಯ, ಜಾನಪದ ಕುಣಿತ ಹೀಗೆ ಜಾನಪದದ ತಾತ್ವಿಕ ಅಧ್ಯಯನದಲ್ಲಿ ತೊಡಗಿಸಿ ಕೊಂಡವರು. ತುಳುನಾಡಿನ ಜನಪದ ಕಥೆಗಳು, ವಿಶಿಷ್ಟ ತುಳುನಾಡು ಅವರ ಅರ್ಥಪೂರ್ಣ ಕೃತಿಗಳು. ತುಳು ಜಾನಪದ ಅಧ್ಯಯನದ ಮೂಲಕ ನೈಜ ತುಳು ಸಂಸ್ಕೃತಿಯನ್ನು ನಾಡಿಗೆ ಪರಿಚಯಿಸಿದವರು.

ಡಾ. ಬಿ.ಎ. ವಿವೇಕ ರೈಯವರು ತುಳು ಅಕಾಡೆಮಿಯ ಅಧ್ಯಕ್ಷರಾಗಿದ್ದಾಗ ರಿಜಿಸ್ಟ್ರಾರ್ ಆಗಿದ್ದ ಪಾಲ್ತಾಡಿಯವರು ಅಕಾಡೆಮಿಗೆ ಕಾಯಕಲ್ಪ ನೀಡಲು ಹೆಗಲು ಕೊಟ್ಟವರು. ಮುಂದೆ ಅವರೇ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದಾಗ ತುಳು ಭಾಷೆಗೆ ಶೈಕ್ಷಣಿಕ ಮಹತ್ವವನ್ನು ಒದಗಿಸಿದವರು. ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಒಂದು ಭಾಷೆಯಾಗಿ ತುಳುವನ್ನು ಅನುಷ್ಠಾನ ಮಾಡಲು ಸರಕಾರಕ್ಕೆ ಅಕಾಡೆಮಿಯ ಮೂಲಕ ಎಲ್ಲಾ ರೀತಿಯ ಅಗತ್ಯಗಳನ್ನು ಒದಗಿಸಿ ಕೊಟ್ಟರು. ಈ ಕಾರಣದಿಂದ ಇಂದು ತುಳು ಶೈಕ್ಷಣಿಕ ಭಾಷೆಯಾಗಿಯೂ ಬೆಳೆಯುವುದಕ್ಕೆ ಕಾರಣಕರ್ತರಾದವರು. ತುಳು ಅಕಾಡೆಮಿಗೆ ಒಂದು ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸ್ವರೂಪವನ್ನು ನೀಡುವಲ್ಲಿ ಅವರ ಕೊಡುಗೆ ಮಹತ್ವದ್ದು. ತುಳು ಅಕಾಡೆಮಿಯು ಇತ್ತೀಚಿನ ವರ್ಷಗಳಲ್ಲಿ ಆ ಮಹತ್ವವನ್ನು ಕಳೆದುಕೊಳ್ಳುತ್ತಿರುವ ಸಂದರ್ಭದಲ್ಲಿ ಪಾಲ್ತಾಡಿಯವರು ನೆನಪಾಗುತ್ತಾರೆ. ಅಕಾಡೆಮಿಕ್ ಶಿಸ್ತು ಕೇವಲ ವಿಶ್ವವಿದ್ಯಾನಿಲಯ ಮತ್ತು ಕಾಲೇಜು ಅಧ್ಯಾಪಕರಲ್ಲಿ ಮಾತ್ರ ಕಾಣಲು ಸಾಧ್ಯ ಎಂಬ ಮಿಥ್‍ನ್ನು ಒಡೆದವರು ಪಾಲ್ತಾಡಿಯವರು.

ತುಳುನಾಡಿನ ನಿರ್ಲಕ್ಷಿಸಲ್ಪಟ್ಟ ಜನಾಂಗಗಳ ಬಗ್ಗೆ ಅಧ್ಯಯನ ಮಾಡಿ, ಆ ಜನಾಂಗಗಳ ಅನನ್ಯತೆಯನ್ನು ಎತ್ತಿ ಹಿಡಿದುದು ಅವರಲ್ಲಿದ್ದ ಅಸಮಾನತೆಯ ವಿರುದ್ಧದ ನಿಲುವಿಗೆ ಸಾಕ್ಷಿಯಾಗಿದೆ. ಕೇವಲ ಅದು ಭಾಷೆಯೆಂದು ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ತುಳುವಿಗೆ ಶೈಕ್ಷಣಿಕ ಮಹತ್ವವನ್ನು ಒದಗಿಸಿರುವುದು ಅವರ ಸಾಂಸ್ಕೃತಿಕ ಪರಿಕಲ್ಪನೆಯ ದ್ಯೋತಕವಾಗಿದೆ. ಆಡಳಿತಾತ್ಮಕ ಕೆಲಸಗಳ ಮಧ್ಯೆಯೂ ಸಾಹಿತ್ಯ ಮತ್ತು ಸಂಶೋಧನಾ ಚಟುವಟಿಕೆಗಳನ್ನು ಕಾಪಾಡಿಕೊಂಡು ಬಂದಿರುವುದು ಅವರ ಅಧ್ಯಯನಶೀಲತೆಯಿಂದ ಸಾಧ್ಯವಾಗಿದೆ. ವ್ಯಕ್ತಿಗತವಾಗಿಯೂ ಸರಳ-ಸಜ್ಜನಿಕೆಯವರಾದ ಪಾಲ್ತಾಡಿಯವರ ಆಳದಲ್ಲಿ ಕ್ರಾಂತಿಕಾರಕ ನಿಲುವುಗಳಿದ್ದುದನ್ನು ಅವರ ಸಮೀಪವರ್ತಿಗಳು ಗುರುತಿಸಿರುತ್ತಾರೆ. ಇಂಥ ಪುರೋಗಾಮಿ ನಿಲುವಿನ ವಿದ್ವಾಂಸರು ಕಣ್ಮರೆಯಾಗುತ್ತಿರುವುದು ಸಾಂಸ್ಕೃತಿಕ ಲೋಕಕ್ಕೆ ನಿಜವಾದ ನಷ್ಟವೆನ್ನಬಹುದು.

ಡಾ. ಗಣನಾಥ ಶೆಟ್ಟಿ ಎಕ್ಕಾರು

ಜಾನಪದ ವಿದ್ವಾಂಸರು

More articles

Latest article