ಪಾಕಿಸ್ತಾನ: ಜನಪ್ರಿಯ ಯೂ ಟ್ಯೂಬರ್‌ ಸನಾ ಯುಸೂಫ್‌ ಹತ್ಯೆ

Most read

ಇಸ್ಲಾಮಾಬಾದ್‌: ಮಹಿಳಾ ಹಕ್ಕುಗಳು ಮತ್ತು ಶೈಕ್ಷಣಿಕ ಜಾಗೃತಿ ಕುರಿತು ಅರಿವು ಮೂಡಿಸುತ್ತಿದ್ದ ಪಾಕಿಸ್ತಾನದ ಜನಪ್ರಿಯ ಯೂ ಟ್ಯೂಬರ್‌ ಸನಾ ಯುಸೂಫ್‌ ಅವರನ್ನು ಅವರ ನಿವಾಸದಲ್ಲಿಯೇ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

17 ವರ್ಷದ ಸನಾ ಯುಸೂಫ್‌ , ಇನ್‌ಸ್ಟಾಗ್ರಾಮ್‌ ನಲ್ಲಿ ಸುಮಾರು 5 ಲಕ್ಷ ಹಿಂಬಾಲಕರನ್ನು ಹೊಂದಿದ್ದು, ಟಿಕ್‌ ಟಾಕ್‌ ಮೂಲಕ ಭಾರಿ ಜನಪ್ರಿಯತೆ ಪಡೆದಿದ್ದರು. ಮಹಿಳಾ ಹಕ್ಕುಗಳು ಮತ್ತು ಶೈಕ್ಷಣಿಕ ಜಾಗೃತಿ ಬಗ್ಗೆ ತಮ್ಮ ವಿಡಿಯೊಗಳಲ್ಲಿ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದರು.

ಇಸ್ಲಾಮಾಬಾದ್‌ ನ ಅವರ ನಿವಾಸದಲ್ಲಿ ಈ ದುರಂತ ನಡೆದಿದೆ. ಮನೆಯೊಳಗೆ ಅಕ್ರಮವಾಗಿ ಪ್ರವೇಶಿಸಿದ್ದ ಆರೋಪಿ ಸನಾ ಮೇಲೆ ಗುಂಡು ಹಾರಿಸಿ ಪರಾರಿಯಾಗಿದ್ದಾನೆ. ಆಕೆ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ. ಸನಾ ಅವರದ್ದು ಮರ್ಯಾದೆಗೇಡು ಹತ್ಯೆಯೂ ಆಗಿರಬಹುದು ಎಂದು ಅವರು ಶಂಕಿಸಿದ್ದಾರೆ. ಸನಾ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಪಾಕಿಸ್ತಾನ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಸ್ಥಳಾಂತರಿಸಲಾಗಿದೆ. ಪ್ರಕರಣ ಸಂಬಂಧ ಈವರೆಗೆ ಯಾರನ್ನು ಬಂಧಿಸಿಲ್ಲ ಎಂದು ವರದಿಯಾಗಿದೆ.

ದೇಶದಲ್ಲಿ ಯುವ ಮಹಿಳಾ ಇನ್‌ ಫ್ಲುಯೆನ್ಸರ್‌ ಗಳನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ಹತ್ಯೆಗೆ ಈ ಪ್ರಕರಣ ಮತ್ತೊಂದು ಸೇರ್ಪಡೆಯಾಗಿದೆ. ಈ ವರ್ಷದ ಆರಂಭದಲ್ಲೇ ಟಿಕ್‌ ಟಾಕ್‌ ನಲ್ಲಿ ವಿಡಿಯೊಗಳನ್ನು ಹಂಚಿಕೊಂಡಿದ್ದಕ್ಕಾಗಿ 15 ವರ್ಷದ ಹಿರಾ ಎಂಬ ಬಾಲಕಿಯನ್ನು ಆಕೆಯ ತಂದೆ ಮತ್ತು ಚಿಕ್ಕಪ್ಪ ಗುಂಡಿಕ್ಕಿ ಕೊಂದಿದ್ದರು.

More articles

Latest article