ಬೆಂಗಳೂರು: ಪಾಕಿಸ್ತಾನಕ್ಕೆ ರಕ್ಷಣಾ ಮಾಹಿತಿ ರವಾನಿಸುತ್ತಿದ್ದ ಪ್ರತಿಷ್ಠಿತ ಬಿಇಎಲ್ ಉದ್ಯೋಗಿ ದೀಪ್ ರಾಜ್ ಚಂದ್ರ ಎಂಬಾತನನ್ನು ಕೇಂದ್ರ ಗುಪ್ತಚರ ಇಲಾಖೆ, ರಾಜ್ಯ ಗುಪ್ತಚರ ಇಲಾಖೆ ಹಾಗೂ ಮಿಲಿಟರಿ ಇಂಟಲಿಜೆನ್ಸ್ ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿವೆ. ಉತ್ತರಪ್ರದೇಶದ ಗಾಜಿಯಾಬಾದ್ ಮೂಲದ ನಿವಾಸಿಯಾದ ದೀಪ್ ರಾಜ್ ಚಂದ್ರ ಬಿಇಎಲ್ನಲ್ಲಿ ಕೆಲಸ ಮಾಡುತ್ತಿದ್ದ. ಮತ್ತಿಕೆರೆಯಲ್ಲಿ ಮನೆ ಮಾಡಿಕೊಂಡು ವಾಸಿಸುತ್ತಿದ್ದ ಎಂದು ತಿಳಿದು ಬಂದಿದೆ.
ಈತ ಬಿಇಎಲ್ನ ಪ್ರಾಡಕ್ಟ್ ಡೆವಲಪ್ ಮೆಂಟ್ ಆಂಡ್ ಇನ್ನೋವೇಶನ್ ಸೆಂಟರ್ ವಿಭಾಗದಲ್ಲಿ ಹಿರಿಯ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ. ಷ. ಈತ ಬಿಇಎಲ್ನಿಂದ ರಕ್ಷಣಾ ವಿಚಾರಗಳನ್ನು ಪಾಕಿಸ್ತಾನಕ್ಕೆ ರವಾನಿಸುತ್ತಿದ್ದ ಎಂಬ ಆರೋಪವಿದೆ. ಮಿಲಟರಿ ಇಂಟಲಿಜೆನ್ಸ್ ನಡೆಸಿದ ವಿಚಾರಣೆ ಸಂದರ್ಭದಲ್ಲಿ ಈತ ಸ್ಫೋಟಕ ಮಾಹಿತಿ ಬಾಯಿಬಿಟ್ಟಿದ್ದಾನೆ ಎಂದು ಹೇಳಲಾಗಿದೆ. ದೀಪ್ ರಾಜ್ ಚಂದ್ರ ಬಿಇಎಲ್ ನ ರಕ್ಷಣಾ ವಿಷಯಗಳು ಸೇರಿದಂತೆ ಸೂಕ್ಷ್ಮ ಮಾಹಿತಿಗಳನ್ನು ಪಾಕಿಸ್ತಾನಕ್ಕೆ ರವಾನಿಸುತ್ತಿದ್ದ ಎಂಬ ಆರೋಪವಿದೆ.
ದೀಪ್ ರಾಜ್ ಚಂದ್ರ ಪಾಕಿಸ್ತಾನದಲ್ಲಿರುವ ಏಜೆಂಟ್ ಗಳನ್ನು ಸಂಪರ್ಕಿಸಲು ವಾಟ್ಸ್ ಆ್ಯಪ್ ಮತ್ತು ಟೆಲಿಗ್ರಾಂ ಸೇರಿದಂತೆ ಎಂಡ್ ಟು ಎಂಡ್ ಎನ್ಕ್ರಿಪ್ಟೆಡ್ ಸಂವಹನ ಮಾರ್ಗಗಳನ್ನು ಬಳಸಿರಬಹುದು ಎಂದು ಗುಪ್ತಚರ ಸಂಸ್ಥೆಗಳು ಶಂಕಿಸಿವೆ. ಆರೋಪಿಯು ರಹಸ್ಯ ಇ-ಮೇಲ್ ಖಾತೆ ತೆರೆದು ಮಾಹಿತಿ ವಿನಿಮಯ ಮಾಡಿರುವ ಅನುಮಾನವಿದ್ದು ತನಿಖೆ ನಡೆಯುತ್ತಿದೆ. ದೀಪ್ ರಾಜ್ ಚಂದ್ರ ಧೀರ್ಘ ಕಾಳದ ಅವಧಿಗೆ ರಕ್ಷಣಾ ಸಂಬಂಧಿತ ಮಾಹಿತಿಯನ್ನು ಸೋರಿಕೆ ಮಾಡುತ್ತಿದ್ದಿರಬಹುದೇ ಎನ್ನುವುದು ಖಚಿತವಾಗಿಲ್ಲ. ಆದರೆ ಇದು ರಾಷ್ಟ್ರೀಯ ಭದ್ರತೆಯ ಬಗ್ಗೆ ಗಂಭೀರ ಕಳವಳಕ್ಕೆ ಕಾರಣವಾಗಿರುವುದಂತೂ ನಿಜ ಎನ್ನಲಾಗಿದೆ. ಪಾಕಿಸ್ತಾನದ ಗುಪ್ತಚರ ಏಜೆಂಟ್‌ಗೆ ಸೂಕ್ಷ್ಮ ಮಾಹಿತಿಯನ್ನು ಸೋರಿಕೆ ಮಾಡಿದ ಆರೋಪದ ಮೇಲೆ ಕುಮಾರ್ ವಿಕಾಸ್ ಎಂಬ ವ್ಯಕ್ತಿಯನ್ನು ಉತ್ತರ ಪ್ರದೇಶದ ಕಾನ್ಪುರದಲ್ಲಿ ಬುಧವಾರ ಬಂಧಿಸಲಾಗಿತ್ತು. ಕುಮಾರ್ ವಿಕಾಸ್ ಕಾನ್ಪುರ್ ಆರ್ಡಿನೆನ್ಸ್ ಫ್ಯಾಕ್ಟರಿಯಲ್ಲಿ ಜೂನಿಯರ್ ವರ್ಕ್ಸ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ. ವಿಚಾರಣೆ ಸಂದರ್ಭದಲ್ಲಿ ಬೆಂಗಳೂರಿನಿಂದಲೂ ರಕ್ಷಣಾ ಮಾಹಿತಿ ಸೋರಿಕೆಯಾಗುತ್ತಿರುವ ಬಗ್ಗೆ ಕುಮಾರ್ ವಿಕಾಸ್ ಸುಳಿವು ನೀಡಿದ್ದ ಎಂದು ತಿಳಿದು ಬಂದಿದೆ. ಈ ಮಾಹಿತಿಯ ಆಧಾರದಲ್ಲಿ ಗುಪ್ತಚರ ಸಂಸ್ಥೆಗಳು ಬೆಂಗಳೂರಿನಲ್ಲಿ ದಾಳಿ ನಡೆಸಿ ದೀಪ್ ರಾಜ್ ಚಂದ್ರನನ್ನು ಬಂಧಿಸಿದ್ದಾರೆ.