ಪಹಲ್ಗಾಮ್ ದಾಳಿ: ಪಾಕ್‌ ವಿರುದ್ಧ ಅಪರೇಷನ್‌ ಸಿಂಧೂರ ಮುಂದುವರೆಸಲು ಅಸಾದುದ್ದೀನ್ ಓವೈಸಿ ಆಗ್ರಹ

Most read

ಹೈದರಾಬಾದ್: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನಲ್ಲಿ ಪ್ರವಾಸಿಗರನ್ನು ಬಲಿ ತೆಗೆದುಕೊಂಡ ಭಯೋತ್ಪಾದಕ ದಾಳಿಗೆ ಸೇಡು ತೀರಿಸಿಕೊಳ್ಳಬೇಕು ಮತ್ತು ಪಾಕಿಸ್ತಾನದ ವಿರುದ್ಧ ಆಪರೇಷನ್ ಸಿಂಧೂರ ಕಾರ್ಯಾಚರಣೆಯನ್ನು ಮುಂದುವರಿಸಬೇಕು ಎಂದು ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಆಗ್ರಹಪಡಿಸಿದ್ದಾರೆ.

ತೆಲಂಗಾಣದ ಬೋಧನ್ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ವಕ್ಫ್ (ತಿದ್ದುಪಡಿ) ಕಾಯ್ದೆಯನ್ನು ವಿರೋಧಿಸಿ ನಡೆದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಪಹಲ್ಗಾಮ್ ದಾಳಿಯು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಭದ್ರತಾ ವೈಫಲ್ಯಕ್ಕೆ ಒಂದು ಸ್ಪಷ್ಟ ಉದಾಹರಣೆಯಾಗಿದೆ ಎಂದರು.

ಏಪ್ರಿಲ್‌ 22ರಂದು ಪಹಲ್ಗಾಮ್‌ ನಲ್ಲಿ ನಡೆದ ಭಯೋತ್ಪಾದಕರ ದಾಳಿಗೆ ಸೇಡು ತೀರಿಸಿಕೊಳ್ಳಬೇಕು ಮತ್ತು ಪಾಕಿಸ್ತಾನದ ವಿರುದ್ಧ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆ ಮುಂದುವರಿಸಬೇಕು. ಧರ್ಮದ ಹೆಸರಿನಲ್ಲಿ 26 ಮಂದಿಯನ್ನು ಕೊಂದ ನಾಲ್ವರು ಉಗ್ರರನ್ನು ಹಿಡಿದು ಕೊಲ್ಲುವವರೆಗೂ ನಾವು ನಿಮ್ಮನ್ನು ಪ್ರಶ್ನಿಸುತ್ತಲೇ ಇರುತ್ತೇವೆ ಎಂದು ಪ್ರಧಾನಿ ಮೋದಿ ವಿರುದ್ಧ ಓವೈಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಹಲ್ಗಾಮ್ ದಾಳಿ ನಡೆದ ಮೂರು ತಿಂಗಳ ಬಳಿಕ ಮನೋಜ್‌ ಸಿನ್ಹಾ ಅವರು ಭದ್ರತಾ ವೈಫಲ್ಯದ ಹೊಣೆ ಹೊತ್ತುಕೊಳ್ಳುತ್ತಿದ್ದಾರೆ. ನಿಜಕ್ಕೂ ಅವರು ಕಾರಣರಾಗಿದ್ದರೆ, ತಮ್ಮ ಹುದ್ದೆಯನ್ನು ಕೂಡಲೇ ತ್ಯಜಿಸಬೇಕು ಎಂದು ಓವೈಸಿ ಆಗ್ರಹಪಡಿಸಿದ್ದಾರೆ.

ಬಾಂಗ್ಲಾದೇಶದ ಮೇಲೆ ಚೀನಾ ತನ್ನ ಪ್ರಭಾವವನ್ನು ವಿಸ್ತರಿಸುತ್ತಿರುವ ಸಂದರ್ಭದಲ್ಲಿ ನಮ್ಮ ದೇಶದಲ್ಲಿ ಕೆಲವರು ಬುಲ್ಡೋಜರ್‌ ಬಳಸಿ ಮನೆಗಳನ್ನು ಕೆಡವುವುದು, ಮಸೀದಿಗಳನ್ನು ಕಸಿದುಕೊಳ್ಳುವ ಬಗ್ಗೆ ಮಾತನಾಡುತ್ತಿರುವುದು ಬೇಸರದ ಸಂಗತಿ ಎಂದು ಓವೈಸಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

More articles

Latest article