ಮಂಗಳೂರು: 38 ವರ್ಷಗಳ ಹಿಂದೆ ಉಜಿರೆಯ ಎಸ್.ಡಿ.ಎಂ. ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದ ನನ್ನ ತಂಗಿ ಪದ್ಮಲತ ಅವರ ಕಳೇಬರವನ್ನು ಹೊರತೆಗೆದು ಮರುತನಿಖೆ ನಡೆಸಿ ಆಕೆಯ ಅಪಹರಣ, ಅತ್ಯಾಚಾರ, ಕೊಲೆ, ಅಪರಾಧಿಗಳನ್ನು ಪತ್ತೆ ಹಚ್ಚಿ ನ್ಯಾಯ ಕೊಡಿಸಬೇಕು ಎಂದು ಪದ್ಮಲತ ಸಹೋದರಿ ನೆಲ್ಯಾಡಿ ಗ್ರಾಮದ ನಿವಾಸಿ ಇಂದ್ರಾವತಿ ಅವರು ವಿಶೇಷ ತನಿಖಾ ತಂಡಕ್ಕೆ ದೂರು ನೀಡಿದ್ದಾರೆ.
38 ವರ್ಷಗಳ ಹಿಂದೆ ಎಸ್.ಡಿ.ಎಂ. ಕಾಲೇಜು ಉಜಿರೆಯಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದ ನನ್ನ ತಂಗಿ ಪದ್ಮಲತ ತಾ 22.12.1986 ರಂದು ಉಜಿರೆ ಕಾಲೇಜಿಗೆ ಹೋಗಿದ್ದು ಅಂದು ಸಂಜೆ ಧರ್ಮಸ್ಥಳಕ್ಕೆ ಬಂದಿರುತ್ತಾಳೆ. ನಂತರ ಕಾಣೆಯಾಗಿರುತ್ತಾಳೆ ಮತ್ತು ಆಕೆಯ ಮೃತದೇಹ 17.02.1987 ರಂದು ನದಿಯ ಹೊಳೆಯ ಬದಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಆಗ ನಾವು ನಮ್ಮ ತಂದೆ ದೇವಾನಂದ ಅವರ ಜತೆ ಧರ್ಮಸ್ಥಳ ಗ್ರಾಮದ ಬೊಳಿಯಾರು ಎಂಬಲ್ಲಿ ವಾಸಿಸುತ್ತಿದ್ದೆವು.
ನನ್ನ ತಂಗಿಯನ್ನು ಅಪಹರಿಸಿ ಅತ್ಯಾಚಾರ ಎಸಗಿ ಕೊಲೆಯಾಗಿರುತ್ತದೆ. ಆಕೆಯ ಅಸಹಜ ಸಾವಿಗೆ ಕಾರಣರಾದ ನೈಜ ಆರೋಪಿಗಳನ್ನು ಪತ್ತೆ ಹಚ್ಚಲು ಆಗ್ರಹಿಸಿ ಸಿಪಿಐಎಂ ಮುಖಂಡರೂ ಆಗಿದ್ದ ನನ್ನ ತಂದೆ ದಿವಂಗತ ದೇವಾನಂದ ಅವರು ಸಿಪಿಐಎಂ ನೇತೃತ್ವದಲ್ಲಿ ಹಲವಾರು ಹೋರಾಟಗಳನ್ನು ರೂಪಿಸಿದ್ದರು. ಹೋರಾಟಕ್ಕೆ ಮಣಿದ ಸರಕಾರ ಕೊನೆಗೆ ಪ್ರಕರಣದ ತನಿಖೆ ನಡೆಸಲು ಸಿಓಡಿ ತನಿಖೆಗೆ ಆದೇಶಿಸಿತು. ವಿಧಾನಮಂಡಲದ ಅಧಿವೇಶನದಲ್ಲಿ ಚರ್ಚೆಯೂ ನಡೆದಿತ್ತು. ಈ ಸಂಬಂಧ ವಿಧಾನಸಭಾ ಗ್ರಂಥಾಲಯದಲ್ಲಿ ದಾಖಲೆಗಳು ಇರುತ್ತವೆ. ಅಂದಿನ ಗೃಹ ಸಚಿವ ರಾಚಯ್ಯ ಅವರೂ ಧರ್ಮಸ್ಥಳ ಗ್ರಾಮದ ಬೊಳೆಯಾರಲ್ಲಿರುವ ನಮ್ಮ ಮನೆಗೆ ಬಂದು ನ್ಯಾಯ ಕೊಡಿಸುವ ಭರವಸೆ ನೀಡಿದ್ದರು. ಆದರೆ ಅಂತಿಮವಾಗಿ ಪತ್ತೆಯಾಗಿದ ಪ್ರಕರಣ ಎಂದು ವರದಿ ನೀಡಿದ್ದರಿಂದ ಪದ್ಮಲತ ಸಾವಿಗೆ ನ್ಯಾಯ ಸಿಗಲೇ ಇಲ್ಲ.
ನನ್ನ ಸಹೋದರಿಯ ಸಾವು ಒಂದು ಯೋಜಿತ ಅಪಹರಣ, ಅತ್ಯಾಚಾರ, ಕೊಲೆ ಎಂಬ ನಮ್ಮ ಅನುಮಾನ ನಮ್ಮನ್ನು ಈಗಲೂ ಕಾಡುತ್ತಿದೆ. ಈಗಲಾದರೂ ನ್ಯಾಯಸಮ್ಮತ ಮಕ್ತ ತನಿಖೆ ನಡೆಸಿ ನ್ಯಾಯ ಒದಗಿಸಿಕೊಡಬೇಕು ಎಂದು ಕೋರುತ್ತೇವೆ. ಪದ್ಮಲತ ಕಳೆಬರಹವನ್ನು ದಹನ ಮಾಡದೆ ಹೂತಿಟ್ಟಿದ್ದೇವೆ. ಅದನ್ನು ತೆಗೆದು ತನಿಖೆ ನಡೆಸಿದರೆ ಅಪಹರಣ, ಕೊಲೆ ಮತ್ತು ಅತ್ಯಾಚಾರ ಎಸಗಿದವರು ಯಾರು ಎನ್ನುವುದು ಪತ್ತೆಯಾಗಲಿದೆ. ಈ ಪ್ರಕರಣದಲ್ಲಿ ನಾನು ಸಾಕ್ಷಿ ಹೇಳಲು ಸಿದ್ಧಳಿದ್ದೇನೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಆದ್ದರಿಂದ ನನ್ನ ತಂಗಿ ಪದ್ಮಲತ ಪ್ರಕರಣವನ್ನು ಮರುತನಿಖೆ ನಡೆಸಿ ಹೂತಿಟ್ಟ ಕಳೇಬರವನ್ನು ಹೊರತೆಗೆದು ತನಿಖೆ ನಡೆಸಿ ಪದ್ಮಲತ ಸಾವಿಗೆ ನ್ಯಾಯ ಒದಗಿಸಬೇಕು ಹಾಗೂ ಅಪರಾಧಿಗಳನ್ನು ಪತ್ತೆ ಹಚ್ಚಿ ಶಿಕ್ಷೆ ವಿಧಿಸಬೇಕು ಎಂದು ಅವರು ಮನವಿ ಮಾಡಿಒಂಡಿದ್ದಾರೆ.