ಹೊರ ರಾಜ್ಯಗಳ ವಿಶ್ವವಿದ್ಯಾಲಯಗಳ ಕನ್ನಡ ವಿಭಾಗಗಳ ಸಬಲೀಕರಣಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಆಗ್ರಹ

Most read

ಬೆಂಗಳೂರು: ನೆರೆ ರಾಜ್ಯಗಳ ವಿಶ್ವವಿದ್ಯಾಲಯಗಳಲ್ಲಿ ಕನ್ನಡ ಎಂ.ಎ ವ್ಯಾಸಂಗ ಮಾಡುತ್ತಿರುವ ಒಟ್ಟು 102 ವಿದ್ಯಾರ್ಥಿಗಳಿಗೆ ತಲಾ ಇಪ್ಪತ್ತೈದು ಸಾವಿರ ರೂ.ಗಳಂತೆ ವಿದ್ಯಾರ್ಥಿವೇತನವನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಮಂಜೂರು ಮಾಡಲಾಗಿದೆ ಎಂದು ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಹೇಳಿದ್ದಾರೆ.

ಈ ಕುರಿತಂತೆ ಮಾಧ್ಯಮ ಪ್ರಕಟಣೆಯನ್ನು ಹೊರಡಿಸಿರುವ ಅವರು, ಕಳೆದ ಮೂರು ವರ್ಷಗಳಿಂದ ಅನುದಾನ ಕೊರತೆಯಿಂದ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಈ ಕಾರ್ಯಕ್ರಮವನ್ನು ಅನಿವಾರ್ಯವಾಗಿ ಸ್ಥಗಿತಗೊಳಿಸಿದ್ದು, ಈ ಬಾರಿಯ ಕೊರತೆ ಅನುದಾನದ ನಡುವೆಯೂ ಈ ವಿಶ್ವವಿದ್ಯಾಲಯಗಳಲ್ಲಿ 2024-25ನೇ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಹಿತದೃಷ್ಠಿಯಿಂದ ವಿದ್ಯಾರ್ಥಿವೇತನ ಮಂಜೂರಾತಿಗೆ ಕ್ರಮವಹಿಸಲಾಗಿದೆ ಎಂದು ತಿಳಿಸಿದ್ದಾರೆ.

ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಇಪ್ಪತ್ತೊಂದು ವಿದ್ಯಾರ್ಥಿಗಳು, ಕಾಸರಗೋಡಿನ ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಇಪ್ಪತ್ತೇಳು ವಿದ್ಯಾರ್ಥಿಗಳು, ಮಹಾರಾಷ್ಟ್ರದ ಸೊಲ್ಲಾಪುರದ ಪುಣ್ಯಶ್ಲೋಕ ಅಹಿಲ್ಯಾದೇವಿ ಹೊಳ್ಕರ ವಿಶ್ವವಿದ್ಯಾಲಯದ ಇಪ್ಪತ್ತೈದು ವಿದ್ಯಾರ್ಥಿಗಳು, ಸೊಲ್ಲಾಪುರದ ಸಿಬಿ ಖೇಡಗಿ ಬಸವೇಶ್ವರ ಮಹಾವಿದ್ಯಾಲಯದ ಇಪ್ಪತ್ಮೂರು ವಿದ್ಯಾರ್ಥಿಗಳು, ಮುಂಬೈ ವಿಶ್ವವಿದ್ಯಾಲಯದ ಇಬ್ಬರು, ಕುಪ್ಪಂನ ದ್ರಾವಿಡ ವಿಶ್ವವಿದ್ಯಾಲಯದ ಮೂರು ವಿದ್ಯಾರ್ಥಿಗಳು ಹಾಗೂ ಚನ್ನೈನ ಮದ್ರಾಸು ವಿಶ್ವವಿದ್ಯಾಲಯದ ಒಬ್ಬ ವಿದ್ಯಾರ್ಥಿಗೆ ಒಟ್ಟಾರೆ 102 ವಿದ್ಯಾರ್ಥಿಗಳಿಗೆ ತಲಾ ರೂ. ಇಪ್ಪತ್ತೈದು ಸಾವಿರದಂತೆ ಒಟ್ಟು ರೂ. ಇಪ್ಪತ್ತೈದು ಲಕ್ಷ ಐವತ್ತು ಸಾವಿರ ಗಳನ್ನು ಮಂಜೂರು ಮಾಡಲಾಗಿದೆ ಎಂದಿರುವ ಬಿಳಿಮಲೆ, ಇದೇ ಪ್ರಥಮ ಬಾರಿಗೆ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಹಣವನ್ನು ಜಮೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಹೊರರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಕನ್ನಡ ಸ್ನಾತಕೋತ್ತರ ಪದವಿಯನ್ನು ಅಭ್ಯಸಿಸುವ ವಿದ್ಯಾರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಿದ್ದು, ಇದು ಕನ್ನಡದ ಹಿತದೃಷ್ಠಿಯಿಂದ ಉತ್ತಮ ಬೆಳವಣಿಗೆಯಲ್ಲವೆಂದಿರುವ ಬಿಳಿಮಲೆ, ಈಗಾಗಲೇ ವಿದ್ಯಾರ್ಥಿಗಳ ಕೊರತೆಯಿಂದ ಮಧುರೈನ ಕಾಮರಾಜ ವಿಶ್ವವಿದ್ಯಾಲಯ ಹಾಗೂ ಹೈದರಾಬಾದಿನ ಉಸ್ಮಾನಿಯ ವಿಶ್ವವಿದ್ಯಾಲಯದ ಕನ್ನಡ ವಿಭಾಗಗಳು ಮುಚ್ಚಲ್ಪಟ್ಟಿದ್ದು, ಪರಿಸ್ಥಿತಿ ಹೀಗೆ ಮುಂದುವರೆದಲ್ಲಿ ಮುಂದಿನ ದಿನಗಳಲ್ಲಿ ಉಳಿದ ವಿಶ್ವವಿದ್ಯಾಲಯಗಳ ಕನ್ನಡ ವಿಭಾಗದ ಸ್ಥಿತಿಯು ಇದೇ ಹಂತಕ್ಕೆ ತಲುಪಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಕೂಡಲೇ ರಾಜ್ಯ ಸರ್ಕಾರವು ಹೊರ ನಾಡಿನ ಎಂ.ಎ ವಿದ್ಯಾರ್ಥಿಗಳಿಗೆ ಹೆಚ್ಚಿನ ವಿದ್ಯಾರ್ಥಿವೇತನ ಅನುದಾನವನ್ನು ಬಿಡುಗಡೆ ಮಾಡುವುದರ ಜೊತೆಗೆ ಈ ವಿಶ್ವವಿದ್ಯಾಲಯಗಳ ಕನ್ನಡ ವಿಭಾಗಗಳನ್ನು ಸಬಲೀಕರಣಗೊಳಿಸಲು ಮುಂದಾಗಬೇಕೆಂದು ಆಗ್ರಹಿಸಿದ್ದಾರೆ.

More articles

Latest article