ಬೆಂಗಳೂರು: ಪರಿಶಿಷ್ಟ ಜಾತಿಗಳ ಒಳಮೀಸಲಾತಿ ವರ್ಗೀಕರಣದಲ್ಲಿ ಬಂಜಾರ, ಭೋವಿ, ಕೊರಮ, ಕೊರಚ ಮತ್ತು ಅಲೆಮಾರಿ ಸಮುದಾಯಗಳಿಗೆ ಶೇ.1ರಷ್ಟು ಮೀಸಲಾತಿ ಕಲ್ಪಿಸುವ ಮೂಲಕ ಆಗಿರುವ ಅನ್ಯಾಯ ಸರಿಪಡಿಸಬೇಕು ಎಂದು ರಾಜ್ಯಪಾಲರಿಗೆ ಮನವಿ ಸಲ್ಲಿಸಿದೆ.
ಪರಿಶಿಷ್ಟ ಜಾತಿಯಲ್ಲಿ ಉಪವರ್ಗೀಕರಣ ಮಾಡಿ ಒಳ ಮೀಸಲಾತಿ ಕಲ್ಪಿಸಲು ರಾಜ್ಯ ಸರ್ಕಾರಗಳಿಗೆ ಅಧಿಕಾರವಿರುತ್ತದೆ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಮತ್ತು ಒಳ ಮೀಸಲಾತಿ ಕಲ್ಪಿಸುವಾಗ ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ಸಹ ತನ್ನ ಆದೇಶದಲ್ಲಿ ಹೇಳಿರುತ್ತದೆ. ಆ ತೀರ್ಪಿನ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿಯೂ ಒಳಮೀಸಲಾತಿ ಕಲ್ಪಿಸಲು ರಾಜ್ಯ ಸರ್ಕಾರವು ನಿರ್ಧರಿಸಿ. ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ಏಕ ಸದಸ್ಯ ಆಯೋಗವನ್ನು ರಚಿಸಿ ಪರಿಶಿಷ್ಟ ಜಾತಿಗಳ ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ನಡೆಸಿ ವರದಿಯನ್ನು ಪಡೆದು ಸಚಿವ ಸಂಪುಟದಲ್ಲಿ ಚರ್ಚಿಸಿದ ನಂತರ ಆಯೋಗದ ವರದಿಯ ಶಿಫಾರಸುಗಳಲ್ಲಿ ಕೆಲವೊಂದು ಮಾರ್ಪಾಡು ಮಾಡಿ 25.08.2025 ರಂದು ಸರ್ಕಾರಿ ಆದೇಶದ ಮೂಲಕ ಪರಿಶಿಷ್ಟ ಜಾತಿಯ 101 ಜಾತಿಗಳನ್ನು ಮೂರು ಗುಂಪುಗಳನ್ನಾಗಿ ಉಪವರ್ಗೀಕರಿಸಿ 6;6;5ರ ಅನುಪಾತದಲ್ಲಿ ಶೇ.17ರಷ್ಟಿರುವ ಮೀಸಲಾತಿಯನ್ನು ಹಂಚಿಕೆ ಮಾಡಿರುತ್ತದೆ. ಸಮೀಕ್ಷೆ ನಡೆಸಿದ ಆಯೋಗವು ನಿಖರವಾದ ಮತ್ತು ವಾಸ್ತವಿಕ ನೆಲೆಗಟ್ಟಿನಲ್ಲಿ ಅಂಕಿ ಅಂಶಗಳನ್ನು ಸಂಗ್ರಹಿಸಲು ವಿಫಲವಾಗಿದ್ದರೂ ಸಹ ಆ ವರದಿಯನ್ನು ಒಪ್ಪಿಕೊಂಡು ಒಳ ಮೀಸಲಾತಿ ಜಾರಿಗೊಳಿಸಿರುತ್ತದೆ
ಹಾಗೆಯೇ, “ಪ್ರವರ್ಗ-ಸಿ” ಗುಂಪಿನಲ್ಲಿ ಬಂಜಾರ, ಭೋವಿ, ಕೊರಮ, ಕೊರಚ ಮತ್ತು ಅಲೆಮಾರಿ ಸೂಕ್ಷ್ಮ ಸಮುದಾಯಗಳು ಸೇರಿದಂತೆ ಒಟ್ಟು 63 ಜಾತಿಗಳಿದ್ದು, ಅಷ್ಟೂ ಜಾತಿಗಳನ್ನು ಒಂದೇ ಗುಂಪಿಗೆ ಸೇರಿಸಿದ್ದರೂ ಕೇವಲ ಶೇ. 5ರಷ್ಟು ಒಳಮೀಸಲಾತಿಯನ್ನು ಮಾತ್ರ ನಿಗದಿಗೊಳಿಸಲಾಗಿರುತ್ತದೆ. ಆದರೆ ಈ ಮೇಲಿನಂತೆ ಉಪವರ್ಗೀಕರಣ ಮಾಡಿ ಮೀಸಲಾತಿ ಹಂಚಿಕೆ ಮಾಡುವಾಗ ಈ ಸಮುದಾಯಗಳ ಜನಸಂಖ್ಯೆ ಶೈಕ್ಷಣಿಕ, ಸಾಮಾಜಿಕ, ಹಿಂದುಳಿದಿರುವಿಕೆಯನ್ನು ಮಾನದಂಡವಾಗಿಟ್ಟುಕೊಂಡಿರುವುದಿಲ್ಲ. ಹೀಗಾಗಿ ಈ ಸಮುದಾಯಗಳಿಗೆ ಕಡಿಮೆ ಮೀಸಲಾತಿ ಪ್ರಮಾಣವನ್ನು ಹಂಚಿಕೆ ಮಾಡಲಾಗಿದೆ.
ಈಗಾಗಲೇ ರಾಜ್ಯದಲ್ಲಿ ಪರಿಶಿಷ್ಟ ಜಾತಿಗಳ ಮೀಸಲಾತಿ ಪ್ರಮಾಣ ಶೇ. 15 ರಿಂದ 17 ಕ್ಕೆ ಹೆಚ್ಚಿಸಲಾಗಿತ್ತು. ಇದನ್ನು ಸಂವಿಧಾನದ 9ನೇ ಶೆಡ್ಯೂಲ್‌ನಲ್ಲಿ ಸೇರಿಸಿಲ್ಲ. ಹಾಗಾಗಿ ಈಗಾಗಲೇ ಹೈಕೋರ್ಟ್‌ನಲ್ಲಿ ಇದನ್ನು ಪ್ರಶ್ನಿಸಿ ಕೆಲವರು ಅರ್ಜಿ ಸಲ್ಲಿಸಿದ್ದಾರೆ. ಪ್ರಕರಣ ಇನ್ನೂ ವಿಚಾರಣೆ ಹಂತದಲ್ಲಿದ್ದು, ಈ ಸಂದರ್ಭದಲ್ಲಿ ತರಾತುರಿಯಲ್ಲಿ ಪರಿಶಿಷ್ಟ ಜಾತಿಗಳ ಅಸಂವಿಧಾನಿಕ ವರ್ಗೀಕರಣ ಅನಗತ್ಯ.
ಹೀಗಿರುವಾಗ, ರಾಜ್ಯ ಸರ್ಕಾರವು ಸರ್ಕಾರಿ ಆದೇಶಕ್ಕೆ ಕಾನೂನಿನ ರೂಪ ನೀಡುವ ಉದ್ದೇಶದಿಂದ ಇತ್ತೀಚೆಗೆ ನಡೆದ ಚಳಿಗಾಲದ ಅಧಿವೇಶನದಲ್ಲಿ “ಕರ್ನಾಟಕ ಅಧಿಸೂಚಿತ ಜಾತಿಗಳ (ಉಪ-ವರ್ಗಿಕರಣ) ವಿಧೇಯಕ-2025″ ಎಂಬ ಹೆಸರಿನಲ್ಲಿ ಒಳ ಮೀಸಲಾತಿ ಮಸೂದೆಯನ್ನು ಅಂಗೀಕರಿಸಿ ತಮ್ಮ ಅಂಕಿತಕ್ಕೆ ಕಳುಹಿಸಲಾಗಿದೆ. ಮಸೂದೆಯಲ್ಲಿ ಪ್ರರ್ಗ-ಸಿ” ಗುಂಪಿನಲ್ಲಿ ಇದ್ದ 63 ಜಾತಿಗಳ ಪೈಕಿ ಬಂಜಾರ, ಭೋವಿ, ಕೊರಮ, ಕೊರಚ ಸಮುದಾಯಗಳನ್ನು ಹೊರತು ಪಡಿಸಿ 59 ಅಲೆಮಾರಿ ಸೂಕ್ಷ್ಮ ಸಮುದಾಯಗಳಿಗೆ ಐದು ಹುದ್ದೆಯಲ್ಲಿ ಒಂದು ಹುದ್ದೆ ಮೀಸಲಿಡಲು ನಿರ್ಧರಿಸಲಾಗಿದೆ. ಆದರೆ ಅದಕ್ಕೆ ಅನುಸರಿಸಿದ ಮಾನದಂಡವೇನು ಎನ್ನುವುದು ಸ್ಪಷ್ಟವಾಗಿಲ್ಲ. ಮಸೂದೆಯಲ್ಲಿ ಪ್ರಸ್ತಾಪಿಸಿರುವ ಅಂಶಗಳಿಗೆ ಒಳಮೀಸಲಾತಿ ಆದೇಶದ ನಂತರ ಹೊರಡಿಸಲಾದ ರೋಸ್ಟರ್ ಆದೇಶ ಅನುಗುಣವಾಗಿರುವುದಿಲ್ಲ. ಇದರಿಂದ ರೋಸ್ಟರ್ ಬಿಂದುಗಳನ್ನು ಅನುಸರಿಸುವಾಗ ಅನೇಕ ಗೊಂದಲಗಳು ಉಂಟಾಗುತ್ತವೆ ಮತ್ತು ಮೀಸಲಾತಿ ಮೂರೂ ಗುಂಪುಗಳಿಗೆ ಸಮಾನವಾಗಿ, ಸಮರ್ಪಕ ಹಂಚಿಕೆಯಾಗುವುದಿಲ್ಲ.
ಈ ಎಲ್ಲ ಅಂಶಗಳನ್ನು ನೋಡಿದಾಗ ಆಯೋಗದ ವರದಿಯು ಅಪೂರ್ಣ ದತ್ತಾಂಶಗಳಿಂದ ಕೂಡಿದ್ದರೂ ಸಹ ಅದರ ವರದಿಯನ್ನು ಅಂಗೀಕರಿಸಿದ ರಾಜ್ಯ ಸರ್ಕಾರವು ಮಾರ್ಪಾಡಿನ ಹೆಸರಿನಲ್ಲಿ ತನಗೆ ಬೇಕಾದಂತೆ ಪರಿಶಿಷ್ಟ ಜಾತಿಗಳಲ್ಲಿ ಪ್ರವರ್ಗಗಳನ್ನು ಮಾಡಿ ಮೀಸಲಾತಿಯನ್ನು ಅವೈಜ್ಞಾನಿಕವಾಗಿ ಹಂಚಿ ಒಳಮೀಸಲಾತಿ ಪಾಲನೆಯಲ್ಲಿ ಅನುಸರಿಸಬೇಕಾದ ಯಾವ ಮಾನದಂಡಗಳನ್ನು ಅನುಸರಿಸದೆ ಸರ್ವೋಚ್ಚ ನ್ಯಾಯಾಲಯದ ಮಾರ್ಗಸೂಚಿಗಳಿಗೆ ವ್ಯತಿರಿಕ್ತವಾಗಿ ಸರ್ಕಾರಿ ಆದೇಶದ ಮೂಲಕ ಒಳ ಮೀಸಲಾತಿ ಜಾರಿಗೊಳಿಸಿ ಈಗ ಕಾನೂನು ರೂಪ ನೀಡಲು ಹೊರಟಿರುವುದಕ್ಕೆ ನಮ್ಮ ವಿರೋಧ ಇದೆ. ಅಸಂವಿಧಾನಿಕವಾದ ರೀತಿಯಲ್ಲಿ ಒಳಮೀಸಲಾತಿ ಕಾನೂನು ತರಲು ಹೊರಟಿರುವ ರಾಜ್ಯ ಸರ್ಕಾರದ ಕ್ರಮ ಸರಿಯಲ್ಲ. ಇದನ್ನು ಸರಿಪಡಿಸುವ ಮೂಲಕ ಸಂವಿಧಾನವನ್ನು ಕಾಪಾಡಬೇಕೆಂದು ತಮ್ಮಲ್ಲಿ ನಿವೇದಿಸಿಕೊಳ್ಳುತ್ತಾ ಈ ಕೆಳಕಂಡ ಹಕ್ಕೊತ್ತಾಯಗಳನ್ನು ತಮ್ಮ ಮುಂದೆ ಮಂಡಿಸುತ್ತಿದ್ದೇವೆ.
ಹಕ್ಕೊತ್ತಾಯಗಳು:
1. “ಕರ್ನಾಟಕ ಅಧಿಸೂಚಿತ ಜಾತಿಗಳ (ಉಪ-ವರ್ಗಿಕರಣ) ವಿಧೇಯಕ-2025ರ ಪ್ರಕಾರ “ಪ್ರರ್ಗ-ಸಿ” ಗುಂಪಿನಲ್ಲಿ ಇರುವ 63 ಸಮುದಾಯಗಳ ಮೀಸಲಾತಿ ಪ್ರಮಾಣವನ್ನು ಶೇ.6ಕ್ಕೆ ಹೆಚ್ಚಿಸಬೇಕು. ಅಲೆಮಾರಿ. ಸೂಕ್ಷ್ಮ ಸಮುದಾಯಗಳಿಗೆ ಪ್ರತ್ಯೇಕವಾಗಿ ಶೇ.1 ಮೀಸಲಾತಿ ಒದಗಿಸಬೇಕು. ಪ್ರವರ್ಗ-ಸಿ ಗುಂಪಿನ ಸಮುದಾಯಗಳು ಪರಿಶಿಷ್ಟ ಜಾತಿಗಳಲ್ಲೇ ಸಾಮಾಜಿಕ, ಶೈಕ್ಷಣಿಕವಾಗಿ ಅತೀ ಹಿಂದುಳಿದ ಗುಂಪು ಎಂಬುದು ನ್ಯಾ. ನಾಗಮೋನ್ ದಾಸ್ ಆಯೋಗದ ವರದಿಯಿಂದ ತಿಳಿದುಬರುತ್ತದೆ. ಹೀಗಾಗಿ ಪ್ರವರ್ಗ-ಸಿ ಗುಂಪನ್ನು ಬದಲಾಯಿಸಿ ಪ್ರವರ್ಗ-1 ಎಂದು ಮರು ಸಂಯೋಜನೆ ಮಾಡಲು ಕೋರಿದೆ. ಆ ಮೂಲಕ ಬಂಜಾರ, ಭೋವಿ, ಕೊರಮ, ಕೊರಚ, ಮತ್ತು ಅಲೆಮಾರಿ ಸೂಕ್ಷ್ಮ ಸಮುದಾಯಗಳಿಗೆ ನ್ಯಾಯ ಒದಗಿಸಬೇಕು. ಪರಿಶಿಷ್ಟ ಜಾತಿಗಳ ಶೈಕ್ಷಣಿಕ, ಸಾಮಾಜಿಕ ಹಿಂದುಳಿದಿರುವಿಕೆಯನ್ನು ಪರಿಗಣಿಸಿ ಮೀಸಲಾತಿ ಪ್ರಮಾಣವನ್ನು ಕನಿಷ್ಠ ಶೇ.18ಕ್ಕೆ ಹೆಚ್ಚಿಸಬೇಕು
2. ಮೀಸಲಾತಿ ಮಿತಿಯು ಶೇ. 50ಕ್ಕೆ ಮೀರಬಾರದು ಎಂಬ ಸುಪ್ರೀಂಕೋರ್ಟ್ ಆದೇಶವನ್ನು ಉಲ್ಲೇಖಿಸಿ ಹೈಕೋರ್ಟ್ ನಲ್ಲಿ ಈಗಾಗಲೇ ಪ್ರಶ್ನಿಸಲಾಗಿದೆ. ಹಾಗಾಗಿ ರಾಜ್ಯ ಸರ್ಕಾರ ಈಗಾಗಲೇ ಶೇ.17ಕ್ಕೆ ಹೆಚ್ಚಿಸಿರುವ ಮೀಸಲಾತಿ ಪ್ರಮಾಣವನ್ನು ಕಾರ್ಯಕಾರಿ ಆದೇಶದ ಮೂಲಕ ಶೇ.18ಕ್ಕೆ ವಿಸ್ತರಿಸಬೇಕು ಮತ್ತು ಮುಂದೆ ಹೆಚ್ಚಿಸಲಿರುವ ಮೀಸಲಾತಿ ಕಾರ್ಯಕಾರಿ ಆದೇಶವನ್ನು ಭಾರತದ ಸಂವಿಧಾನದ ಒಂಭತ್ತನೇ ಶೆಡ್ಯೂಲ್‌ಗೆ ಸೇರಿಸಲು ಕೇಂದ್ರ ಸರ್ಕಾರಕ್ಕೆ ಶಿಪಾರಸ್ಸು ಮಾಡಬೇಕು
3. ರಾಜ್ಯ ಸರ್ಕಾರ ದಿ: 03.09.2025ರಂದು ಹೊರಡಿಸಿರುವ ಸರ್ಕಾರಿ ಆದೇಶ ಸಂಖ್ಯೆ: ಸಿಆಸುಇ 02 ಸೆಹಿಮ 2025, ಆದೇಶದಲ್ಲಿ ವಿವಿಧ ಬಿಂದುಗಳಲ್ಲಿ ನಿಗಧಿಪಡಿಸಲಾಗಿದೆ. ನೇಮಕಾತಿ ರೋಸ್ಟರ್ ಬಿಂದು ನಿಗದಿ ಆದೇಶದ ದೋಷದಿಂದಾಗಿ ಇತ್ತೀಚೆಗೆ ನಡೆದ ಧಾರವಾಡ ಕೃಷಿ ವಿವಿ,ಮತ್ತು ರಾಜೀವ್ ಗಾಂಧಿ ಆರೋಗ್ಯ ವಿವಿ ನೇಮಕಾತಿ ಮತ್ತು ಶೈಕ್ಷಣಿಕ ಪ್ರವೇಶ ಪ್ರಕ್ರಿಯೆಯಲ್ಲಿ ‘ಪ್ರರ್ಗ-ಬಿ’ ಮತ್ತು ‘ಪ್ರರ್ಗ-ಸಿ’ ಗುಂಪಿಗೆ ಹುದ್ದೆಗಳು/ಸೀಟುಗಳು ಸಿಗದೆ ಅನ್ಯಾಯ ಆಗಿದೆ. ತಕ್ಷಣ ಈ ಆದೇಶವನ್ನು ವಾಪಸು ಪಡೆಯಬೇಕು. ಯಾವುದೇ ಸಮುದಾಯಕ್ಕೆ ಅನ್ಯಾಯ ಆಗದಂತೆ ಹೊಸ ನಿಯಮ ರೂಪಿಸಬೇಕು. ಅಲ್ಲಿಯವರೆಗೆ ಎಲ್ಲಾ ನೇಮಕಾತಿ ಪ್ರಕ್ರಿಯೆಗಳನ್ನು ಹಳೆಯ ನಿಯಮಗಳಂತೆ ಮುಂದುವರೆಸಬೇಕು
4. ಎಸ್.ಸಿ.ಪಿ, ಟಿ.ಎಸ್.ಪಿ, ಯೋಜನೆಯ 24 ಶೇ.ಅನುದಾನ ಹಂಚಿಕೆಯ ನಿಯಮದಂತೆ ಈ ಪ್ರವರ್ಗ ಸಿ ಗುಂಪಿಗೆ ಒಟ್ಟು ಹಣದ ಕನಿಷ್ಠ ಶೇ. 6 ರಷ್ಟನ್ನು ಕರ್ನಾಟಕ ತಾಂಡ ಅಭಿವೃದ್ಧಿ ನಿಗಮ, ಕರ್ನಾಟಕ ಭೋವಿ-ವಡ್ಡರ್ ಅಭಿವೃದ್ಧಿ ನಿಗಮ ಮತ್ತು ಅಲೆಮಾರಿ ಅಭಿವೃದ್ಧಿ ನಿಗಮಗಳಿಗೆ ಹಂಚಿಕೆ ಮಾಡಲು ರಾಜ್ಯ ಸರ್ಕಾರಕ್ಕೆ ಸಲಹೆ ನೀಡಬೇಕು ಕರ್ನಾಟಕ ತಾಂಡ ಅಭಿವೃದ್ಧಿ ನಿಗಮ, ಕರ್ನಾಟಕ ಭೋವಿ-ವಡ್ಡರ್ ಅಭಿವೃದ್ಧಿ ನಿಗಮ ಮತ್ತು ಅಲೆಮಾರಿ ಅಭಿವೃದ್ಧಿ ನಿಗಮಗಳಿಗೆ ಹಂಚಿಕೆ ಮಾಡಲು ರಾಜ್ಯ ಸರ್ಕಾರಕ್ಕೆ ಸಲಹೆ ನೀಡಬೇಕು ಎಂದು ಕೋರಲಾಗಿದೆ.
ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಉಪ ಸಭಾಪತಿ ರುದ್ರಪ್ಪ ಲಮಾಣಿ, ಮಾಜಿ ಸಚಿವರಾದ ಡಾ ಬಿ ಟಿ ಲಲಿತಾನಾಯ್ಕ, ಅರವಿಂದ ಲಿಂಬಾವಳಿ, ಮಾಜಿ ಸಂಸದ ಜನಾರ್ಧನ ಸ್ವಾಮಿ, ಮಾಜಿ ಶಾಸಕರಾದ ಭೀಮನಾಯ್ಕ, ಬಸವರಾಜ್ ನಾಯ್ಕ, ಜಲಜಾನಾಯ್ಕ, ನಿವೃತ್ತ IAS ಅಧಿಕಾರಿ ಮಂಜುನಾಥ ಪ್ರಸಾದ್ ಸೇರಿದಂತೆ ಅನೇಕ ಗಣ್ಯರು ನಿಯೋಗದಲಿದ್ದರು.

